
ಮುಂಬೈ: ಐಪಿಎಲ್ ಮ್ಯಾಚ್ ದಿನದಂದು ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸ್ಮಾರ್ಟ್ ಗ್ಲಾಸ್‌ಗಳನ್ನು ಅಥವಾ ಯಾವುದೇ ರೀತಿಯ ಹೈಟೆಕ್ ಕನ್ನಡಕಗಳನ್ನು ಬಳಸಬಾರದು ಎಂದು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ (ACSU) ಕಟ್ಟುನಿಟ್ಟಿನ ಸೂಚನೆ ನೀಡಿದೆ. ಟೂರ್ನಿಯ ಪಾರದರ್ಶಕತೆ ಕಾಪಾಡಲು ಮತ್ತು ನಿಗದಿತ ಪ್ರದೇಶಗಳಲ್ಲಿ ತಂತ್ರಜ್ಞಾನದ ದುರ್ಬಳಕೆಯನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇತ್ತೀಚೆಗೆ ಹಲವು ಟೆಕ್ ಕಂಪನಿಗಳು ಐಪಿಎಲ್ ಆಟಗಾರರು ಮತ್ತು ಫ್ರಾಂಚೈಸಿಗಳಿಗೆ ಸ್ಮಾರ್ಟ್ ಸನ್ ಗ್ಲಾಸ್‌ಗಳನ್ನು ಪ್ರಮೋಟ್ ಮಾಡುತ್ತಿರುವುದನ್ನು ಬಿಸಿಸಿಐ ಗಮನಿಸಿತ್ತು.
ನೋಡಲು ಸಾಮಾನ್ಯ ಕನ್ನಡಕದಂತೆ ಕಂಡರೂ, ಈ ಸ್ಮಾರ್ಟ್ ಗ್ಲಾಸ್‌ಗಳಲ್ಲಿರುವ ಫೀಚರ್‌ಗಳು ಟೂರ್ನಿ ಆಯೋಜಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಗ್ಲಾಸ್‌ಗಳನ್ನು ಬಳಸಿ ವಿಡಿಯೋ ರೆಕಾರ್ಡ್ ಮಾಡಬಹುದು, ಲೈವ್ ಸ್ಟ್ರೀಮ್ ಮಾಡಬಹುದು, ಮೆಸೇಜ್ ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಅಷ್ಟೇ ಅಲ್ಲ, ಮೊಬೈಲ್ ಡೇಟಾ ಅಥವಾ ವೈಫೈ ಮೂಲಕ ಆಡಿಯೋ-ವಿಡಿಯೋ ಕರೆಗಳನ್ನು ಕೂಡ ಮಾಡಬಹುದು. ಈ ಕಾರಣಗಳಿಂದ, ಐಪಿಎಲ್ ನಿಯಮಗಳ ಪ್ರಕಾರ ಈ ಗ್ಲಾಸ್‌ಗಳನ್ನು ಸಂವಹನ ಮತ್ತು ರೆಕಾರ್ಡಿಂಗ್ ಸಾಧನಗಳೆಂದು ಪರಿಗಣಿಸಲಾಗಿದೆ.
ಹೊಸ ನಿಯಮದ ಪ್ರಕಾರ, ಮ್ಯಾಚ್ ದಿನದಂದು 'ಪ್ಲೇಯರ್ಸ್ & ಮ್ಯಾಚ್ ಆಫೀಶಿಯಲ್ಸ್ ಏರಿಯಾ' (PMOA) ದಲ್ಲಿ ಸ್ಮಾರ್ಟ್ ಗ್ಲಾಸ್ ಇಟ್ಟುಕೊಳ್ಳುವುದು ಅಥವಾ ಬಳಸುವುದು ಸಂಪೂರ್ಣ ನಿಷಿದ್ಧ. ಡ್ರೆಸ್ಸಿಂಗ್ ರೂಮ್, ಡಗೌಟ್ ಮತ್ತು ಆಟಗಾರರು ಕೂರುವ ಇತರೆ ಹೈ-ಸೆಕ್ಯುರಿಟಿ ಜಾಗಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಪಂದ್ಯದ ವೇಳೆ ಲೈವ್ ಮಾಹಿತಿ ರವಾನಿಸಲು ಅಥವಾ ಭದ್ರತಾ ಲೋಪ ಎಸಗಲು ಇಂತಹ ಸಾಧನಗಳನ್ನು ಬಳಸಬಹುದು ಎಂದು ಭದ್ರತಾ ವಿಭಾಗ ಆತಂಕ ವ್ಯಕ್ತಪಡಿಸಿದೆ.
ಈ ಅಪಾಯವನ್ನು ತಪ್ಪಿಸಲು, ಈಗಾಗಲೇ ನಿಷೇಧಿಸಲಾಗಿರುವ ಇತರ ಎಲೆಕ್ಟ್ರಾನಿಕ್ ಸಾಧನಗಳ ಸಾಲಿಗೆ ಸ್ಮಾರ್ಟ್ ಗ್ಲಾಸ್‌ಗಳನ್ನೂ ಸೇರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸ್ಟೇಡಿಯಂಗೆ ಬಂದ ತಕ್ಷಣ ತಮ್ಮ ಸ್ಮಾರ್ಟ್ ಗ್ಲಾಸ್‌ಗಳನ್ನು 'ಸೆಕ್ಯುರಿಟಿ ಲೈಸೆನ್ ಆಫೀಸರ್' ಬಳಿ ಒಪ್ಪಿಸಬೇಕು. ಮೊಬೈಲ್ ಫೋನ್, ಸ್ಮಾರ್ಟ್ ವಾಚ್‌ಗಳ ಜೊತೆಗೆ ಈ ಗ್ಲಾಸ್‌ಗಳನ್ನು ಕೂಡ ನಿಗದಿತ ಪ್ರದೇಶಗಳಿಗೆ ಪ್ರವೇಶಿಸುವ ಮುನ್ನ ಡೆಪಾಸಿಟ್ ಮಾಡಬೇಕಾಗುತ್ತದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.