ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ-ಆಸ್ಟ್ರೇಲಿಯಾ ಕಾದಾಟ
ಫಾಲೋ ಆನ್ ಭೀತಿಗೆ ಸಿಲುಕಿರುವ ಟೀಂ ಇಂಡಿಯಾ
ಟೀಂ ಇಂಡಿಯಾಗೆ ವಿಶೇಷ ಸಂದೇಶ ರವಾನಿಸಿದ ರಿಷಭ್ ಪಂತ್
ಲಂಡನ್(ಜೂ.09): ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣದಾಟ ನಡೆಸುತ್ತಿವೆ. ಮೊದಲೆರಡು ದಿನಗಳ ಆಟ ಅಂತ್ಯದ ವೇಳೆಗೆ ಭಾರತದ ಎದುರು ಆಸ್ಟ್ರೇಲಿಯಾ ತಂಡವು ಬಿಗಿ ಹಿಡಿತ ಸಾಧಿಸಿದ್ದು, ರೋಹಿತ್ ಶರ್ಮಾ ಪಡೆ ಫಾಲೋ ಆನ್ ಭೀತಿಗೆ ಒಳಗಾಗಿದೆ. ಇನ್ನು ಇದೆಲ್ಲದರ ನಡುವೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಭಾರತಕ್ಕೆ ವಿಶೇಷ ಸಂದೇಶ ರವಾನಿಸಿದ್ದಾರೆ.
ಹೌದು, ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದಿದ್ದು, ಮನೆಯಲ್ಲಿಯೇ ಕುಳಿತು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ನಡೆದ ಭೀಕರ ಕಾರು ಅಪಘಾತದಿಂದ ಪಂತ್ ಇದೀಗ ಚೇತರಿಸಿಕೊಳ್ಳುತ್ತಿದ್ದು, ಬಿಡುವಿನ ಸಮಯವನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಇದೀಗ ರಿಷಭ್ ಪಂತ್, ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿಯೊಂದನ್ನು ಪೋಸ್ಟ್ ಮಾಡಿದ್ದು, ತಾವು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಸ್ಟೋರಿಯ ಜತೆ ಕೈಬೆರಳು ಕ್ರಾಸ್ ಮಾಡಿದ ಬೆರಳಿನ ಎಮೋಜಿ ಜತೆಗೆ ಹಾರ್ಟ್ ಸಿಂಬಲ್ ಎಮೋಜಿಯನ್ನು ಪೋಸ್ಟ್ ಮಾಡುವ ಮೂಲಕ, ನನ್ನ ಹೃದಯವು ತಂಡದ ಜತೆಗಿದೆ ಎಂಬ ಸ್ಪಷ್ಟ ಸಂದೇಶವನ್ನು ರಿಷಭ್ ಪಂತ್ ರವಾನಿಸಿದ್ದಾರೆ.
undefined
2021-23ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಭಾರತ ತಂಡವು ಫೈನಲ್‌ಗೇರುವಲ್ಲಿ ರಿಷಭ್ ಪಂತ್ ಮಹತ್ವದ ಪಾತ್ರವಹಿಸಿದ್ದರು. ಈ ಅವಧಿಯಲ್ಲಿ ಭಾರತ ಪರ 12 ಟೆಸ್ಟ್ ಪಂದ್ಯಗಳನ್ನಾಡಿದ್ದ ರಿಷಭ್ ಪಂತ್, 2 ಶತಕ ಹಾಗೂ 5 ಅರ್ಧಶತಕ ಸಹಿತ 43.40 ಬ್ಯಾಟಿಂಗ್ ಸರಾಸರಿಯಲ್ಲಿ 868 ರನ್ ಸಿಡಿಸಿದ್ದರು. ಇನ್ನು ಕಳೆದೆರಡು ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ರಿಷಭ್ ಪಂತ್, ತನ್ನದೇ ಆದ ಛಾಪು ಮೂಡಿಸಿದ್ದಾರೆ. 2019-21ರ ಅವಧಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೇರಿದಂತೆ 2 ಋತುವಿನ ಟೆಸ್ಟ್ ವಿಶ್ವಕಪ್ ಟೂರ್ನಿಯಲ್ಲಿ ರಿಷಭ್ ಪಂತ್ 24 ಪಂದ್ಯಗಳ 41 ಇನಿಂಗ್ಸ್‌ಗಳನ್ನಾಡಿ 41.44ರ ಬ್ಯಾಟಿಂಗ್ ಸರಾಸರಿಯಲ್ಲಿ 3 ಶತಕ ಹಾಗೂ 9 ಅರ್ಧಶತಕ ಸಹಿತ 1,575 ರನ್ ಬಾರಿಸಿದ್ದಾರೆ. ಆದರೆ ಕಳೆದ ಡಿಸೆಂಬರ್‌ನಲ್ಲಿ ನಡೆದ ರಸ್ತೆ ಅಫಘಾತದಲ್ಲಿ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡು ಸದ್ಯ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಇದೀಗ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಕೆ ಎಸ್ ಭರತ್, ಟೀಂ ಇಂಡಿಯಾ ವಿಕೆಟ್ ಕೀಪರ್ ಆಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕಣಕ್ಕಿಳಿದಿದ್ದಾರೆ.
WTC Final: ಫಾಲೋ ಆನ್‌ನಿಂದ ಭೀತಿಯಲ್ಲಿ ಭಾರತ? ಫಾಲೋ ಆನ್‌ನಿಂದ ಪಾರಾಗಲು ಇನ್ನೆಷ್ಟು ರನ್ ಬೇಕು?
ಇನ್ನು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ವಿಶ್ವಕಪ್ ಬಗ್ಗೆ ಹೇಳುವುದಾದರೇ, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಸ್ಟ್ರೇಲಿಯಾ ತಂಡವು ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 469 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ, ಆರಂಭಿಕ ಆಘಾತ ಅನುಭವಿಸಿದ್ದು, ಎರಡನೇ ದಿನದಾಟದಂತ್ಯದ ವೇಳೆಗೆ 5 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿದೆ. ಈ ಮೂಲಕ ಇನ್ನೂ 318 ರನ್‌ಗಳ ಹಿನ್ನಡೆಯಲ್ಲಿದೆ. ಟೀಂ ಇಂಡಿಯಾ ಇನ್ನೂ 118 ರನ್ ಗಳಿಸಿದರಷ್ಟೇ ಫಾಲೋ ಆನ್‌ನಿಂದ ಪಾರಾಗಲಿದೆ. ಅಜಿಂಕ್ಯ ರಹಾನೆ(29) ಹಾಗೂ ಕೆ ಎಸ್ ಭರತ್(5) ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.