RCB ತಂಡದಲ್ಲೂ ಕನ್ನಡಿಗರಿಗೆ ಮೀಸಲಾತಿ ನೀಡಿ: ಇದೇನಿದು ಟ್ರೆಂಡ್ ಆಗ್ತಿರೋ ಹೊಸ ಡಿಮ್ಯಾಂಡ್?

Published : Jul 18, 2024, 05:30 PM ISTUpdated : Jul 18, 2024, 05:37 PM IST
RCB ತಂಡದಲ್ಲೂ ಕನ್ನಡಿಗರಿಗೆ ಮೀಸಲಾತಿ ನೀಡಿ: ಇದೇನಿದು ಟ್ರೆಂಡ್ ಆಗ್ತಿರೋ ಹೊಸ ಡಿಮ್ಯಾಂಡ್?

ಸಾರಾಂಶ

ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಖಾಸಗಿ ಕ್ಷೇತ್ರದಲ್ಲಿನ ಮೀಸಲಾತಿ ವಿಚಾರ, ಇದೀಗ ಐಪಿಎಲ್‌ನ ಆರ್‌ಸಿಬಿ ತಂಡಕ್ಕೂ ಅನ್ವಯವಾಗಲಿ ಎನ್ನುವ ಚರ್ಚೆ ಜೋರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು: ರಾಜ್ಯದಲ್ಲಿನ ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಅಂದರೆ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಸಚಿವ ಸಂಪುಟ ಒಪ್ಪಿಗೆ ಪಡೆದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಇಂದು ವಿಧಾನಸೌಧದಲ್ಲಿ ವಿಧೇಯಕ ಮಂಡನೆಗೆ ಮುಂದಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ತಾತ್ಕಾಲಿಕವಾಗಿ ಈ ನಿರ್ಧಾರವನ್ನು ತಡೆಹಿಡಿಯಲಾಗಿದೆ 

ಕರ್ನಾಟಕ ರಾಜ್ಯದಲ್ಲಿ, ಅದರಲ್ಲೂ ರಾಜ್ಯರಾಜಧಾನಿಯಲ್ಲಿರುವ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ಒದಗಿಸುವ ವಿಧೇಯಕಕ್ಕೆ' ಸಿದ್ದರಾಮಯ್ಯನವರು ಸಂಪುಟ ಒಪ್ಪಿಗೆ ಪಡೆದಿದ್ದರು. ಇದರ ಅನ್ವಯ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಸ್ಥಳೀಯರಿಗೆ ಶೇ.75 ಮೀಸಲಾತಿ ಒದಗಿಸುವ ಕಾನೂನು ಜಾರಿಗೆ ತರಲು ಮುಖ್ಯಮಂತ್ರಿಗಳು ಮುಂದಾಗಿದ್ದರು. ಮುಖ್ಯಮಂತ್ರಿಗಳ ಈ ನಿರ್ಧಾರವನ್ನು ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡಿಗರು ಸ್ವಾಗತ ಮಾಡಿದರೆ, ಕೆಲವು ಉದ್ಯಮಿಗಳು ತಮ್ಮ ಅಸಮಾಧಾನ ಹೊರಹಾಕಿದ್ದರು.

ಈ ಚರ್ಚೆಯ ಬೆನ್ನಲ್ಲೇ ರಾಜ್ಯವನ್ನು ಐಪಿಎಲ್‌ನಲ್ಲಿ ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿಯೂ 50% ಮೀಸಲು ಸ್ಥಳೀಯ ಕರ್ನಾಟಕದ ಆಟಗಾರರಿಗೆ ನೀಡಬೇಕು ಎನ್ನುವ ಆಗ್ರಹ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ. ಐಪಿಎಲ್‌ನ ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದು ಎನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಲಾಗುತ್ತಿತ್ತು. ಆದರೆ ಈಗೀಗ ಕಳೆದ ಕೆಲ ವರ್ಷಗಳಲ್ಲಿ ಆರ್‌ಸಿಬಿ ಫ್ರಾಂಚೈಸಿಯು ನಾಮಕಾವಸ್ತೆ ಎನ್ನುವಂತೆ ಒಂದೆರಡು ಕರ್ನಾಟಕದ ಆಟಗಾರರು ಹರಾಜಿನಲ್ಲಿ ಖರೀದಿಸಿ, ಬಹುತೇಕ ಪಂದ್ಯಗಳಲ್ಲಿ ಬೆಂಚ್ ಕಾಯಿಸುತ್ತಾ ಬಂದಿರುವುದನ್ನು ನೋಡಿದ್ದೇವೆ.

ಆರ್‌ಸಿಬಿ ತಂಡದಲ್ಲಿ ಸ್ಥಳೀಯ ಕನ್ನಡಿಗ ಆಟಗಾರರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಮಾತು ಐಪಿಎಲ್ ಹರಾಜು ಹಾಗೂ ಐಪಿಎಲ್ ಟೂರ್ನಿಯ ವೇಳೆಯಲ್ಲಿ ಕೇಳಿ ಬರುತ್ತಿದೆ. ಹೀಗಿರುವಾಗ ರಾಜ್ಯದ ಮುಖ್ಯಮಂತ್ರಿಗಳು ಜಾರಿಗೊಳಿಸಲು ಮುಂದಾಗಿರುವ ಸ್ಥಳೀಯರಿಗೆ ಮೀಸಲಾತಿ ನೀಡುವ ವಿಧೇಯಕ ಐಪಿಎಲ್‌ನ ಆರ್‌ಸಿಬಿ ತಂಡಕ್ಕೂ ಅನ್ವಯವಾಗಲಿ ಎನ್ನುವ ಮಾತುಗಳು ಸೋಷಿಯಲ್ ಮೀಡಿಯಾಗಳಲ್ಲಿ ಜೋರಾಗಿ ಕೇಳಿ ಬರುತ್ತಿದೆ.

ನೇಹಾ ಸಿಂಘಲ್ ಟ್ರೇಡರ್ ಎನ್ನುವ ನೆಟ್ಟಿಗರೊಬ್ಬರು, 70% ಮೀಸಲಾತಿ ಪಾಲಿಸಿಯು ಆರ್‌ಸಿಬಿ ತಂಡಕ್ಕೂ ಅನ್ವಯವಾಗಲಿದೆಯೇ? ಎಂದು ಪ್ರಶ್ನಿಸಿದ್ದಾರೆ. ಇದರ ಜತೆಗೆ ಕರ್ನಾಟಕ, ಕನ್ನಡಿಗರು ಬೆಂಗಳೂರು ಎಂದು ಬರೆದುಕೊಂಡಿದ್ದಾರೆ.

ಇನ್ನು ಕೆಲವು ನೆಟ್ಟಿಗರು ಆರ್‌ಸಿಬಿ ತಂಡವನ್ನು ಟ್ರೋಲ್ ಮಾಡಿದ್ದು, ಈಗಲಾದರೂ ಕನ್ನಡಿಗರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿ, ಆಗಲಾದರೂ ಆರ್‌ಸಿಬಿ ಕಪ್ ಗೆಲ್ಲುತ್ತಾ ನೋಡೋಣ ಎಂದು ಕಾಲೆಳೆದಿದ್ದಾರೆ.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?