ಏಕದಿನ ವಿಶ್ವಕಪ್‌ಗೆ 12.5 ಲಕ್ಷ ಪ್ರೇಕ್ಷಕರು: ಹೊಸ ದಾಖಲೆ..!

By Kannadaprabha News  |  First Published Nov 22, 2023, 11:20 AM IST

ಅಧಿಕೃತ ಪ್ರಕಟಣೆ ಹೊರಡಿಸಿರುವ ಐಸಿಸಿ, 2023ರ ಏಕದಿನ ವಿಶ್ವಕಪ್‌ಗೆ ಭಾರತದ 10 ಕ್ರೀಡಾಂಗಣಗಳಿಗೆ ಒಟ್ಟು 12.5 ಲಕ್ಷ (12,50,303) ಪ್ರೇಕ್ಷಕರು ಆಗಮಿಸಿದ್ದರು ಎಂದು ತಿಳಿಸಿದೆ. ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳು ನಡೆದಿದ್ದು, ಪ್ರತಿ ಪಂದ್ಯಕ್ಕೆ ಸರಾಸರಿ 26,000 ಮಂದಿ ಸೇರಿದ್ದರು ಎಂದು ತಿಳಿದು ಬಂದಿದೆ.


ನವದೆಹಲಿ(ನ.22): ಕಳೆದ ವಾರ ಮುಕ್ತಾಯಗೊಂಡ ವಿಶ್ವಕಪ್ ಟೂರ್ನಿಯು ಏಕದಿನ ಕ್ರಿಕೆಟ್‌ಗೆ ‘ಬೂಸ್ಟರ್ ಡೋಸ್’ನಂತೆ ಕೆಲಸ ಮಾಡಿದೆ. ಟಿ20 ಟೂರ್ನಿಗಳ ಅಬ್ಬರದ ನಡುವೆ 50 ಓವರ್ ಕ್ರಿಕೆಟ್‌ನ ಜನಪ್ರಿಯತೆ ಕಡಿಮೆಯಾಗುತ್ತಿದೆಯೇ ಎನ್ನುವ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ, ವಿಶ್ವಕಪ್ ಪಂದ್ಯಗಳ ವೀಕ್ಷಣೆಗೆ ಕ್ರೀಡಾಂಗಣಗಳಿಗೆ ದಾಖಲೆಯ ಪ್ರಮಾಣದಲ್ಲಿ ಪ್ರೇಕ್ಷಕರು ಆಗಮಿಸಿದ್ದರು ಎನ್ನುವ ವಿಷಯ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯ ಖುಷಿಗೆ ಕಾರಣವಾಗಿದೆ.

ಈ ಸಂಬಂಧ ಮಂಗಳವಾರ ಅಧಿಕೃತ ಪ್ರಕಟಣೆ ಹೊರಡಿಸಿರುವ ಐಸಿಸಿ, 2023ರ ಏಕದಿನ ವಿಶ್ವಕಪ್‌ಗೆ ಭಾರತದ 10 ಕ್ರೀಡಾಂಗಣಗಳಿಗೆ ಒಟ್ಟು 12.5 ಲಕ್ಷ (12,50,303) ಪ್ರೇಕ್ಷಕರು ಆಗಮಿಸಿದ್ದರು ಎಂದು ತಿಳಿಸಿದೆ. ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳು ನಡೆದಿದ್ದು, ಪ್ರತಿ ಪಂದ್ಯಕ್ಕೆ ಸರಾಸರಿ 26,000 ಮಂದಿ ಸೇರಿದ್ದರು ಎಂದು ತಿಳಿದು ಬಂದಿದೆ.

Latest Videos

undefined

2015ರ ದಾಖಲೆ ಪತನ: 2023ರ ವಿಶ್ವಕಪ್‌ನ ಪ್ರೇಕ್ಷಕರ ಸಂಖ್ಯೆಯು ಈ ಹಿಂದಿನ 2 ವಿಶ್ವಕಪ್‌ಗಳಿಗಿಂತ ಹೆಚ್ಚು ಎಂದು ಐಸಿಸಿ ಮಾಹಿತಿ ನೀಡಿದೆ. 2015ರಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್ ಒಟ್ಟು 10.1 ಲಕ್ಷ (10,16,420) ಪ್ರೇಕ್ಷಕರನ್ನು ಕ್ರೀಡಾಂಗಣಗಳತ್ತ ಆಕರ್ಷಿಸಿತ್ತು. ಇನ್ನು ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ನಡೆದಿದ್ದ 2019ರ ವಿಶ್ವಕಪ್ ಪಂದ್ಯಗಳಿಗೆ ಕ್ರೀಡಾಂಗಣಕ್ಕೆ ಒಟ್ಟು 7.52 ಲಕ್ಷ ಪ್ರೇಕ್ಷಕರು ಆಗಮಿಸಿದ್ದರು.

FIFA ವಿಶ್ವಕಪ್ ಕ್ವಾಲಿಫೈಯರ್: ಕತಾರ್ ವಿರುದ್ದ ಭಾರತಕ್ಕೆ 0-3 ಸೋಲು..!

ಅಂಡರ್-19 ವಿಶ್ವಕಪ್ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರ

ದುಬೈ: ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ನಿಷೇಧಕ್ಕೊಳಪಡಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ), ಮುಂದಿನ ವರ್ಷ ಜ.13ರಿಂದ ಫೆ.4ರ ವರೆಗೂ ನಿಗದಿಯಾಗಿರುವ ಅಂಡರ್-19 ವಿಶ್ವಕಪ್ ಟೂರ್ನಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಿದೆ. 16 ತಂಡಗಳು ಪಾಲ್ಗೊಳ್ಳಲಿರುವ ಟೂರ್ನಿಗೆ ಲಂಕಾದ 5 ಕ್ರೀಡಾಂಗಣಗಳು ಆತಿಥ್ಯ ವಹಿಸಬೇಕಿತ್ತು. 

ಕ್ರಿಕೆಟ್‌ ವಿಶ್ವಕಪ್‌ ಗೆಲ್ಲದಿದ್ದರೇನಂತೆ, ದಾಖಲೆಯ 26ನೇ ಬಾರಿಗೆ ವಿಶ್ವ ಚಾಂಪಿಯನ್‌ ಆದ ಕರ್ನಾಟಕದ ಪಂಕಜ್‌ ಆಡ್ವಾಣಿ!

ಆದರೆ ಇತ್ತೀಚೆಗೆ ಏಕದಿನ ವಿಶ್ವಕಪ್‌ನಲ್ಲಿ ಲಂಕಾ ಕಳಪೆ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ, ಇಡೀ ಕ್ರಿಕೆಟ್ ಮಂಡಳಿಯನ್ನೇ ವಜಾಗೊಳಿಸಿತು. ದೇಶದ ಕ್ರಿಕೆಟ್ ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪ ಐಸಿಸಿ ನಿಯಮದ ವಿರುದ್ಧವಾಗಿರುವ ಕಾರಣ, ಐಸಿಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ನಿಷೇಧಗೊಳಿಸಿದೆ. ಆದರೆ ಟೂರ್ನಿಯಲ್ಲಿ ಆಡಲು ಲಂಕಾಕ್ಕೆ ಐಸಿಸಿ ಅವಕಾಶ ನೀಡಿದೆ.

ಜ.17ಕ್ಕೆ ಬೆಂಗಳೂರಲ್ಲಿ ಭಾರತ vs ಆಫ್ಘನ್‌ ಟಿ20

ಕಾಬೂಲ್‌: 2024ರ ಜನವರಿಯಲ್ಲಿ ತನ್ನ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್‌ ಮಂಡಳಿ(ಎಸಿಬಿ) ಮಂಗಳವಾರ ಘೋಷಿಸಿದೆ. ಸರಣಿಯ ವೇಳಾಪಟ್ಟಿಯನ್ನೂ ಎಸಿಬಿ ಪ್ರಕಟಿಸಿದ್ದು, ಮೊದಲ ಪಂದ್ಯ ಜ.17ರಂದು ಮೊಹಾಲಿ, 2ನೇ ಪಂದ್ಯ ಜ.14ರಂದು ಇಂದೋರ್‌ ಹಾಗೂ 3ನೇ ಪಂದ್ಯ ಜ.17ರಂದು ಬೆಂಗಳೂರಲ್ಲಿ ನಡೆಯಲಿದೆ ಎಂದು ತಿಳಿಸಿದೆ. ಬಿಸಿಸಿಐನಿಂದ ಈ ಸರಣಿ ಕುರಿತು ಇನ್ನಷ್ಟೇ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.
 

click me!