
ಬೆಂಗಳೂರು: ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ 17 ವರ್ಷಗಳಿಂದ ಅನುಭವಿಸುತ್ತಾ ಬಂದಿದ್ದ ಐಪಿಎಲ್ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆರ್‌ಸಿಬಿ ತಂಡವು 6 ರನ್ ಅಂತರದ ರೋಚಕ ಜಯ ಸಾಧಿಸುವ ಮೂಲಕ ಚಾಂಪಿಯನ್ ಅಗಿ ಹೊರಹೊಮ್ಮಿತು. ವಿರಾಟ್ ಕೊಹ್ಲಿ ಆರ್‌ಸಿಬಿ 43 ರನ್ ಗಳಿಸಿದ್ದೇ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿಕೊಂಡಿತು. ಇನ್ನು ಬೌಲಿಂಗ್‌ನಲ್ಲಿ ಕೇವಲ 17 ರನ್ ನೀಡಿ 2 ವಿಕೆಟ್ ಕಬಳಿಸಿದ ಕೃನಾಲ್ ಪಾಂಡ್ಯ, ಆರ್‌ಸಿಬಿ ಗೆಲುವಿನ ರೂವಾರಿ ಎನಿಸಿಕೊಂಡರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರುವ ಮೂಲಕ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಿದೆ. ಹೀಗಿದ್ದೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮೊದಲು ಈ 5 ಆಟಗಾರರಿಗೆ ಗೇಟ್ ಪಾಸ್ ಕೊಡುವ ಸಾಧ್ಯತೆ ದಟ್ಟವಾಗಿದೆ. ಅಷ್ಟಕ್ಕೂ ಯಾರು ಆ 5 ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
1. ಟಿಮ್ ಸೈಫರ್ಟ್: ನ್ಯೂಜಿಲೆಂಡ್ ಮೂಲದ ಸ್ಪೋಟಕ ಅಗ್ರಕ್ರಮಾಂಕದ ಬ್ಯಾಟರ್ ಟಿಮ್ ಸೈಫರ್ಟ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ಜೆಕೊಬ್ ಬೆಥೆಲ್ ಬದಲಿಗೆ ತಾತ್ಕಲಿಕವಾಗಿ ತಂಡ ಕೂಡಿಕೊಂಡಿದ್ದ ಸೈಫರ್ಟ್ ಅವರನ್ನು ಆರ್‌ಸಿಬಿ ತಂಡದಿಂದ ರಿಲೀಸ್ ಮಾಡುವುದು ಬಹುತೇಕ ಖಚಿತ ಎನಿಸಿದೆ.
2. ಲಿಯಾಮ್ ಲಿವಿಂಗ್‌ಸ್ಟೋನ್: ಇಂಗ್ಲೆಂಡ್ ಮೂಲದ ಸ್ಟಾರ್ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್, ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಗಮನಾರ್ಹ ಪ್ರದರ್ಶನ ತೋರಲು ವಿಫಲವಾಗಿದ್ದಾರೆ. ಲಿವಿಂಗ್‌ಸ್ಟೋನ್ 10 ಪಂದ್ಯಗಳನ್ನಾಡಿ ಕೇವಲ 112 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ಲಿವಿಂಗ್‌ಸ್ಟೋನ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ ತಂಡದಿಂದ ರಿಲೀಸ್ ಮಾಡುವ ಸಾಧ್ಯತೆ ಹೆಚ್ಚಿದೆ.
3. ಬ್ಲೆಸ್ಸಿಂಗ್ ಮುಜರಬಾನಿ: ಲುಂಗಿ ಎಂಗಿಡಿ ಬದಲಿಗೆ ಜಿಂಬಾಬ್ವೆ ಮೂಲದ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ಆರ್‌ಸಿಬಿ ಫ್ರಾಂಚೈಸಿ ಪ್ಲೇ ಆಫ್ ಪಂದ್ಯಕ್ಕೆ ತಾತ್ಕಾಲಿಕವಾಗಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಮುಜರಬಾನಿ ಅವರಿಗೆ ಒಂದೇ ಒಂದು ಪಂದ್ಯವನ್ನಾಡಲು ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಮುಜರಬಾನಿ ಅವರನ್ನು ಬೆಂಗಳೂರು ಫ್ರಾಂಚೈಸಿಯು ರಿಲೀಸ್ ಮಾಡುವ ಸಾಧ್ಯತೆ ಹೆಚ್ಚಿದೆ.
4. ಲುಂಗಿ ಎಂಗಿಡಿ: ದಕ್ಷಿಣ ಆಫ್ರಿಕಾ ಮೂಲದ ಅನುಭವಿ ವೇಗದ ಬೌಲರ್ ಲುಂಗಿ ಎಂಗಿಡಿಗೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಡಲು ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಆಡಿದ ಎರಡು ಪಂದ್ಯಗಳಲ್ಲಿ ಎಂಗಿಡಿ 4 ವಿಕೆಟ್ ಕಬಳಿಸಿದ್ದರು. ತಂಡದಲ್ಲಿ ಜೋಶ್ ಹೇಜಲ್‌ವುಡ್, ನುವಾನ್ ತುಷಾರ ಅವರಂತಹ ವಿದೇಶಿ ವೇಗಿಗಳಿರುವುದರಿಂದ ಎಂಗಿಡಿ ಅವರನ್ನು ಆರ್‌ಸಿಬಿ ಫ್ರಾಂಚೈಸಿ ಕೈಬಿಡುವ ಸಾದ್ಯತೆಯಿದೆ.
5. ಸ್ವಪ್ನಿಲ್ ಸಿಂಗ್: 2024ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲಕ್ಕಿ ಚಾರ್ಮ್ ಆಗಿದ್ದ ಸ್ವಪ್ನಿಲ್ ಸಿಂಗ್‌ಗೆ ಈ ಬಾರಿಯ ಐಪಿಎಲ್‌ನಲ್ಲಿ ಒಂದೇ ಒಂದು ಅವಕಾಶ ಸಿಕ್ಕಿರಲಿಲ್ಲ. ಇದೀಗ ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿ ಸ್ವಪ್ನಿಲ್‌ಗೆ ಗೇಟ್ ಪಾಸ್ ನೀಡುವುದು ಬಹುತೇಕ ಖಚಿತ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.