
ಬೆಂಗಳೂರು(ಜ.19): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಇಂಗ್ಲೆಂಡ್ ಸ್ಪೋಟಕ ಬ್ಯಾಟರ್ ವಿಲ್ ಜೇಕ್ಸ್, ಟಿ20 ಕ್ರಿಕೆಟ್ ಮಾದರಿಯಲ್ಲಿ ತಮ್ಮ ಖದರ್ ಮತ್ತೊಮ್ಮೆ ಅನಾವರಣ ಮಾಡಿದ್ದಾರೆ. ಇದೀಗ ಸೌಥ್ ಆಫ್ರಿಕಾ 20 ಲೀಗ್ ಟೂರ್ನಿಯಲ್ಲಿ ವಿಲ್ ಜೇಕ್ಸ್ ಕೇವಲ 42 ಎಸೆತಗಳಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ 2024ರ ಐಪಿಎಲ್ ಟೂರ್ನಿಗೂ ಮುನ್ನವೇ ಎದುರಾಳಿ ಪಾಳಯಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.
ಡರ್ಬನ್ ಸೂಪರ್ ಜೈಂಟ್ಸ್ ಎದುರಿನ ಪಂದ್ಯದಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿದಿರುವ ವಿಲ್ ಜೇಕ್ಸ್ 42 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 8 ಮುಗಿಲೆತ್ತರದ ಸಿಕ್ಸರ್ ನೆರವಿನಿಂದ 101 ರನ್ ಸಿಡಿಸಿದರು. ಇದು ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿರುವ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಳಯದಲ್ಲಿ ಹೊಸ ಸಂಚಲವನ್ನು ಸೃಷ್ಟಿ ಮಾಡಿದೆ.
AB De Villiers: ಎಬಿಡಿ ಕ್ರಿಕೆಟ್ ಜಗತ್ತಿನ ಸೂಪರ್‌ಮ್ಯಾನ್ ಎನ್ನಲು ಈ 4 ದಾಖಲೆಗಳೇ ಸಾಕು..!
ಹೀಗಿವೆ ನೋಡಿ ವಿಲ್ ಜೇಕ್ಸ್ ಬೌಂಡರಿ-ಸಿಕ್ಸರ್‌ಗಳ ಸುರಿಮಳೆ:
ಆರ್‌ಸಿಬಿ ತಂಡವನ್ನು ಪ್ರತಿನಿಧಿಸುವ ರೀಸ್ ಟಾಪ್ಲೆಯಿಂದ ಹಿಡಿದು ಕೇಶವ್ ಮಹರಾಜ್, ಮಾರ್ಕ್ ಸ್ಟೋನಿಸ್ ಹೀಗೆ ಎದುರಾಳಿ ತಂಡದ ಬೌಲರ್‌ಗಳನ್ನು ಜೇಕ್ಸ್ ಮನಬಂದಂತೆ ದಂಡಿಸಿದ್ದಾರೆ. ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಡ್ವೇನ್ ಪ್ರಿಟೋರಿಯಸ್ ಬೌಲಿಂಗ್‌ನಲ್ಲಿ ವಿಲ್ ಜೇಕ್ಸ್ ವಿಕೆಟ್ ಒಪ್ಪಿಸಿದರಾದರೂ, ಅಷ್ಟು ಹೊತ್ತಿಗಾಗಲೇ ಆರ್‌ಸಿಬಿ ಕ್ರಿಕೆಟಿಗ ತನ್ನ ಕರಾಮತ್ತು ತೋರಿಸಿಯಾಗಿತ್ತು. ವಿಲ್ ಜೇಕ್ಸ್ ಬಾರಿಸಿದ ಸ್ಪೋಟಕ ಶತಕದ ನೆರವಿನಿಂದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 204 ರನ್ ಕಲೆಹಾಕಿತು. ಇನ್ನು ಗುರಿ ಬೆನ್ನತ್ತಿದ ಕೇಶವ್ ಮಹಾರಾಜ್ ನೇತೃತ್ವದ ತಂಡವು ಕೇವಲ 17 ರನ್ ಅಂತರದಲ್ಲಿ ಸೋಲೊಪ್ಪಿಕೊಂಡಿತು.
ಕೊನೆಗೂ ನೋವು ಹೊರಹಾಕಿದ ಚಹಲ್ ಪತ್ನಿ ಧನಶ್ರೀ ವರ್ಮಾ..! ಡಿಸೆಂಬರ್‌ನಿಂದ ಸರಿಯಾಗಿ ನಿದ್ರೆ ಮಾಡಿಲ್ವಂತೆ..!
ಆರ್‌ಸಿಬಿಗೆ ವರವಾಗ್ತಾರಾ ಜೇಕ್ಸ್?
2023ರ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ವಿಲ್ ಜೇಕ್ಸ್ ಅವರಿಗೆ 3.2 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ಗಾಯಗೊಂಡು ಐಪಿಎಲ್‌ನಿಂದ ಹೊರಬಿದ್ದಿದ್ದರು. ಹೀಗಾಗಿ ವಿಲ್ ಜೇಕ್ಸ್ ಬದಲಿಗೆ ಮಿಚೆಲ್ ಬ್ರೇಸ್‌ವೆಲ್ ತಂಡ ಕೂಡಿಕೊಂಡಿದ್ದರು. ಇದೀಗ 2024ರ ಐಪಿಎಲ್ ಟೂರ್ನಿಯ ವೇಳೆಗೆ ಆರ್‌ಸಿಬಿ ಪರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಪಾದಾರ್ಪಣೆ ಮಾಡಿ, ರನ್ ಮಳೆ ಹರಿಸುವ ಎಚ್ಚರಿಕೆ ನೀಡಿದ್ದಾರೆ ಇಂಗ್ಲೆಂಡ್ ಸ್ಪೋಟಕ ಬ್ಯಾಟರ್ ಜೇಕ್ಸ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.