
ಬೆಂಗಳೂರು: ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ದಿ ಗಯಾನ ಅಮೆಜಾನ್ ವಾರಿಯರ್ಸ್ ತಂಡವು ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಇದೀಗ ಸೋಮವಾರ ಟ್ರಿನಿಡ್ಯಾಡ್‌ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ಎದುರು ಡೆಕ್ವರ್ಥ್ ಲೂಯಿಸ್ ನಿಯಮದನ್ವಯ ಗಯಾನ ಅಮೆಜಾನ್ ವಾರಿಯರ್ಸ್ ತಂಡವು 9 ರನ್‌ಗಳ ರೋಚಕ ಜಯ ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದ ಗೆಲುವಿನ ರೂವಾರಿ ಎನಿಸಿಕೊಂಡಿದ್ದು ಆರ್‌ಸಿಬಿ ಮಾಜಿ ಕ್ರಿಕೆಟಿಗ, ವಿಂಡೀಸ್ ಮೂಲದ ಎಡಗೈ ಬ್ಯಾಟರ್ ಶಿಮ್ರೊನ್ ಹೆಟ್ಮೇಯರ್ ವಿಸ್ಪೋಟಕ ಬ್ಯಾಟಿಂಗ್.
ಮಳೆ ಬಾಧಿತ ಪಂದ್ಯವಾಗಿದ್ದರಿಂದ ಈ ಪಂದ್ಯವನ್ನು 16 ಓವರ್‌ಗಳಿಗೆ ಮಿತಿಗೊಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ ಗಯಾನ ಅಮೆಜಾನ್ ವಾರಿಯರ್ಸ್ ತಂಡವು ಶಿಮ್ರೊನ್ ಹೆಟ್ಮೇಯರ್ ಬಾರಿಸಿದ ವಿಸ್ಪೋಟಕ ಶತಕದ ನೆರವಿನಿಂದ 185 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಇನ್ನು ಗುರಿ ಬೆನ್ನತ್ತಿದ ನೈಟ್ ರೈಡರ್ಸ್ ತಂಡಕ್ಕೆ ಮೊಹಮ್ಮದ್ ನಬಿ 3 ವಿಕೆಟ್ ಕಬಳಿಸಿ ಬಲವಾದ ಪೆಟ್ಟು ನೀಡಿದರು. ಅಲೆಕ್ಸ್ ಹೇಲ್ಸ್ ಅದ್ಭುತ ಹೋರಾಟದ ಹೊರತಾಗಿಯೂ ತಂಡ ಗೆಲುವಿನ ದಡ ಸೇರಲು ವಿಫಲವಾಯಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ವಾರಿಯರ್ಸ್ ತಂಡವು ಮೊದಲ ಓವರ್‌ನಲ್ಲೇ ಗ್ಲೆನ್ ಫಿಲಿಫ್ಸ್ ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಸುನಿಲ್ ನರೈನ್ ಮತ್ತೊಂದು ಶಿಸ್ತುಬದ್ದ ದಾಳಿ ನಡೆಸುವ ಮೂಲಕ ವಾರಿಯರ್ಸ್ ಪಡೆಯ ಮೇಲೆ ಇನ್ನಷ್ಟು ಒತ್ತಡ ಹೇರಿದರು. ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ, ಮತ್ತೊಂದು ತುದಿಯಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ಶಿಮ್ರೊನ್ ಹೆಟ್ಮೇಯರ್ ಕೇವಲ 27 ಎಸೆತಗಳಲ್ಲಿ ಸ್ಪೋಟಕ ಅರ್ಧಶತಕ ಪೂರೈಸಿದರು. ಇದಾದ ಬಳಿಕವೂ ಮತ್ತಷ್ಟು ಆಕ್ರಮಣಕಾರಿ ಆಟವಾಡಿದ ಅವರು 13 ಓವರ್ ಎಸೆದ ಲಹಿರು ಕುಮಾರ ಅವರ ಒಂದೇ ಓವರ್‌ನಲ್ಲಿ ಹೆಟ್ಮೇಯರ್ 30 ರನ್ ಚಚ್ಚಿದರು. ನೈಟ್ ರೈಡರ್ಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಹೆಟ್ಮೇಯರ್ 43 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ 111 ರನ್ ಸಿಡಿಸಿ ಅಜೇಯರಾಗುಳಿದರು. ಅಂತಿಮವಾಗಿ ಗಯಾನ ಅಮೆಜಾನ್ ವಾರಿಯರ್ಸ್ ತಂಡವು 16 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 185 ರನ್ ಕಲೆಹಾಕಿತು.
ಇನ್ನು ಸವಾಲಿನ ಗುರಿ ಬೆನ್ನತ್ತಿದ ಟ್ರಿನಿಬಾಗೊ ನೈಟ್ ರೈಡರ್ಸ್ ತಂಡವು 16 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕುವ ಮೂಲಕ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ 9 ರನ್‌ಗಳ ವಿರೋಚಿನ ಸೋಲು ಅನುಭವಿಸಿತು. ಅಲೆಕ್ಸ್ ಹೇಲ್ಸ್ 24 ಎಸೆತಗಳಲ್ಲಿ 55 ರನ್ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಮಧ್ಯಮ ಕ್ರಮಾಂಕದಲ್ಲಿ ಯಾವುದೇ ತಂಡದ ಪಾಲಿಗೆ ಆಸ್ತಿಯಾಗಬಲ್ಲ ಆಟಗಾರನೆಂದರೆ ಅದು ಶಿಮ್ರೊನ್ ಹೆಟ್ಮೇಯರ್. ಯಾವುದೇ ಮೈದಾನವಿರಲಿ, ಪರಿಸ್ಥಿತಿ ಎಂತಹದ್ದೇ ಇರಲಿ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಶಿಮ್ರೊನ್ ಹೆಟ್ಮೇಯರ್ 2019ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಆರ್‌ಸಿಬಿ ಪರ 2019ರ ಐಪಿಎಲ್ ಟೂರ್ನಿಯಲ್ಲಿ ಕೇವಲ ಐದು ಪಂದ್ಯಗಳನ್ನಷ್ಟೇ ಆಡಿದ್ದ ಹೆಟ್ಮೇಯರ್ ಒಂದು ಅರ್ಧಶತಕ ಸಹಿತ 90 ರನ್ ಬಾರಿಸಿದ್ದರು. ಒಂದು ಸೀಸನ್‌ನ ವೈಫಲ್ಯದ ಬೆನ್ನಲ್ಲೇ ಆರ್‌ಸಿಬಿ ಫ್ರಾಂಚೈಸಿಯು ಹೆಟ್ಮೇಯರ್ ಅವರನ್ನು ತಂಡದಿಂದ ಕೈಬಿಟ್ಟಿತು. ಆದರೆ ಸದ್ಯ ಶಿಮ್ರೊನ್ ಹೆಟ್ಮೇಯರ್ ಆರ್ಭಟವನ್ನು ಗಮನಿಸಿದ್ರೆ, ಖಂಡಿತವಾಗಿಯೂ ಆರ್‌ಸಿಬಿ ಫ್ರಾಂಚೈಸಿ ಈ ವಿಂಡೀಸ್ ಆಟಗಾರನ್ನು ತಂಡದಿಂದ ಕೈಬಿಟ್ಟು ತಪ್ಪು ಮಾಡಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.