
ಬೆಂಗಳೂರು(ಆ.28): ನೂತನ ದೇಶಿ ಕ್ರಿಕೆಟ್ ಋುತು ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಇತ್ತ ಅವಕಾಶ ಅರಸಿ ರಾಜ್ಯದ ನಾಲ್ವರು ಕ್ರಿಕೆಟಿಗರು ಬೇರೆ ತಂಡಗಳನ್ನು ಕೂಡಿಕೊಂಡಿದ್ದಾರೆ.
ಸೂಕ್ತ ಅವಕಾಶಗಳು ದೊರೆಯದ ಹಾಗೂ ಪೈಪೋಟಿ ಹೆಚ್ಚಿರುವ ಕಾರಣ ಆಲ್‌ರೌಂಡರ್‌ಗಳಾದ ಪವನ್ ದೇಶಪಾಂಡೆ, ಎಂ.ಕ್ರಾಂತಿಕುಮಾರ್, ಲಿಯಾನ್ ಖಾನ್ ಹಾಗೂ ಕಾರ್ತಿಕ್ ಸಿ.ಎ. ನೂತನ ದೇಶಿ ಋುತುವಿನಲ್ಲಿ ಬೇರೆ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಪವನ್ ದೇಶಪಾಂಡೆ ಪಾಂಡಿಚೇರಿ ತಂಡ ಸೇರ್ಪಡೆಗೊಂಡಿದ್ದರೆ, ಕ್ರಾಂತಿಕುಮಾರ್, ಲಿಯಾನ್ ಹಾಗೂ ಕಾರ್ತಿಕ್ ಸಿಕ್ಕಿಂ ತಂಡ ಪ್ರತಿನಿಧಿಸಲು ಸಿದ್ಧರಾಗಿದ್ದಾರೆ.
ಕರ್ನಾಟಕ ಮತ್ತು ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದ ದೇಶಪಾಂಡೆ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಸಾಕಷ್ಟು ಉತ್ತಮ ಪ್ರದರ್ಶನ ನೀಡಿದ್ದರೂ ಕಳೆದ ಋುತುವಿನಲ್ಲಿ ಪವನ್ ದೇಶಪಾಂಡೆ ಬೆಂಚ್ ಕಾಯ್ದಿದ್ದೇ ಹೆಚ್ಚಾಗಿತ್ತು. 2015ರಲ್ಲಿ ಕರ್ನಾಟಕ ಟಿ20 ತಂಡವನ್ನು ಕೂಡಿಕೊಂಡಿದ್ದ ಪವನ್, 2016ರಲ್ಲಿ ಮಹಾರಾಷ್ಟ್ರ ವಿರುದ್ಧ ರಣಜಿಗೆ ಪಾದಾರ್ಪಣೆ ಮಾಡಿದ್ದರು. 8 ಪ್ರಥಮ ದರ್ಜೆ ಪಂದ್ಯಗಳಿಂದ 2 ಅರ್ಧಶತಕ ಸೇರಿದಂತೆ 255 ರನ್ ಗಳಿಸಿದ್ದಾರೆ. 23 ಟಿ20 ಪಂದ್ಯಗಳಿಂದ 463 ರನ್ ಬಾರಿಸಿದ್ದಾರೆ. ಈಗಾಗಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಪವನ್‌ಗೆ ನಿರಾಕ್ಷೇಪಣಾ ಪತ್ರವನ್ನೂ ನೀಡಿದೆ.
IPL 2021 ಆರ್‌ಸಿಬಿಗೆ ಜಾರ್ಜ್ ಗಾರ್ಟನ್, ರಾಯಲ್ಸ್‌ಗೆ ಶಂಸಿ ಸೇರ್ಪಡೆ..!
ಪೈಪೋಟಿ ಹೆಚ್ಚಿದ್ದು, ಮೂರೂ ಮಾದರಿಯಲ್ಲೂ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟ. ನನ್ನ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿರುವೆ ಎಂದು ಪವನ್ ಹೇಳಿದ್ದಾರೆ. ಇನ್ನು ಕ್ರಾಂತಿಕುಮಾರ್, ಲಿಯಾನ್, ಕಾರ್ತಿಕ್ ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ತೋರಿದರೂ ಸಾಕಷ್ಟುಅವಕಾಶ ದೊರೆಯದ ಕಾರಣ, ಸಿಕ್ಕಿಂ ತಂಡ ಸೇರಲು ನಿರ್ಧರಿಸಿದ್ದಾರೆ.
ವಲಸೆ ಇದೇ ಮೊದಲಲ್ಲ: ರಾಜ್ಯದ ಆಟಗಾರರು ಬೇರೆ ರಾಜ್ಯಗಳ ಪರ ಆಡುವುದು ಇದೇ ಮೊದಲಲ್ಲ. ಈ ಮೊದಲು ವೇಗಿ ವಿನಯ್ ಕುಮಾರ್, ರಾಬಿನ್ ಉತ್ತಪ್ಪ, ಗಣೇಶ್ ಸತೀಶ್‌ರಂತಹ ಖ್ಯಾತ ಕ್ರಿಕೆಟಿಗರೇ ಬೇರೆ ರಾಜ್ಯಗಳನ್ನು ಪ್ರತಿನಿಧಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.