
ಮುಂಬೈ(ಮೇ.09): ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸುತ್ತಿದೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡವು ನೇರವಾಗಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಲಿದ್ದು, ಪ್ಲೇ ಆಫ್ ಪ್ರವೇಶಿಸುವ ದೃಷ್ಟಿಯಿಂದ ಈ ಪಂದ್ಯವು ಸಾಕಷ್ಟು ಮಹತ್ವವನ್ನು ಪಡೆದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬೌಲಿಂಗ್‌ನಲ್ಲಿ ವಾಂಖೇಡೆ ಮೈದಾನದಲ್ಲಿ ಹರ್ಷಲ್ ಪಟೇಲ್ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಕಳೆದ ವರ್ಷದ ಐಪಿಎಲ್‌ನಲ್ಲಿ ವಾಂಖೇಡೆ ಮೈದಾನದಲ್ಲಿ ಹರ್ಷಲ್ ಪಟೇಲ್ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದರು. ಆದರೆ ಈ ಭಾರಿಯ ಐಪಿಎಲ್ ಟೂರ್ನಿಯಲ್ಲಿ ಹರ್ಷಲ್ ಪಟೇಲ್ ಅಸ್ಥಿರ ಪ್ರದರ್ಶನ ತೋರುತ್ತಿದ್ದು, ಪ್ರತಿ ಓವರ್‌ಗೆ 9.77ರ ಸರಾಸರಿಯಲ್ಲಿ ರನ್ ಬಿಟ್ಟುಕೊಡುತ್ತಿದ್ದಾರೆ.
ಇದೀಗ ಮುಂಬೈ ಇಂಡಿಯನ್ಸ್ ಎದುರಿನ ಮಹತ್ವದ ಪಂದ್ಯಕ್ಕೂ ಮುನ್ನ ಮಾತನಾಡಿದ ಹರ್ಷಲ್ ಪಟೇಲ್, ಆತ್ಮವಿಶ್ವಾಸವಿದ್ದಾಗ ಮಾತ್ರ ಸರಿಯಾದ ರೀತಿಯಲ್ಲಿ ಬೌಲಿಂಗ್ ಮಾಡಲು ಸಾಧ್ಯ ಎಂದು ಹೇಳಿದ್ದಾರೆ.
ಆತ್ಮವಿಶ್ವಾಸವಿದ್ದಾಗ ಮಾತ್ರ ಸರಿಯಾದ ರೀತಿಯಲ್ಲಿ ನಮ್ಮ ಕೌಶಲ್ಯಗಳನ್ನು ಕಾರ್ಯಗತಗೊಳಿಸಲು ಸಾಧ್ಯ. ನಾವು ನಿರಂತರ ಅಭ್ಯಾಸ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದು. ನಾವು ಮೈದಾನದಲ್ಲಿ ಒಮ್ಮೆ ನಾವಂದುಕೊಂಡಂತೆ ಬೌಲಿಂಗ್ ಮಾಡಲು ಸಾಧ್ಯವಾಗಿಲ್ಲವೆಂದರೆ, ಮತ್ತೆ ನೆಟ್ಸ್‌ನಲ್ಲಿ ನಾವು ಏನೆಲ್ಲಾ ಮಿಸ್ಟೇಕ್ಸ್ ಮಾಡಿದ್ದೆವೊ, ಅವನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ನಾವು ಮೈದಾನಕ್ಕಿಳಿದ ಬಳಿಕ, ನಮ್ಮ ಗಮನವೇನಿದ್ದರು, ನಾವೇನು ಮಾಡಬೇಕು ಅಂದುಕೊಂಡಿದ್ದೇವೊ ಅದನ್ನು ಮಾಡಬೇಕೇ ಹೊರತು, ಎದುರಾಳಿ ಬ್ಯಾಟರ್ ಅಂದುಕೊಂಡಂತೆ ಬೌಲಿಂಗ್ ಮಾಡಬಾರದು ಎಂದು ಹರ್ಷಲ್ ಪಟೇಲ್ ಹೇಳಿದ್ದಾರೆ.
ಒಂದು ವೇಳೆ 3 ಓವರ್‌ನಲ್ಲಿ 50 ರನ್ ನೀಡಿದ್ದರೂ, ಕೊನೆಯ ಓವರ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿ ತಂಡವನ್ನು ಕೊನೆಯ ಓವರ್‌ನಲ್ಲಿ ತಂಡವನ್ನು ಗೆಲ್ಲಿಸುವಂತಿರಬೇಕು. ಹೀಗಾಗಿ ನಮ್ಮ ಗಮನವೇನಿದ್ದರೂ, ಮುಂದಿನ ಚೆಂಡನ್ನು ಹೇಗೆ ಎಸೆಯಬೇಕು ಎನ್ನುವುದರ ಕಡೆಗಿರಬೇಕು ಎಂದು ಹರ್ಷಲ್ ಪಟೇಲ್ ಹೇಳಿದ್ದಾರೆ.
ಮತ್ತೆ KKR ಗೆಲ್ಲಿಸಿದ ರಿಂಕು; ಕೊನೆಯ 2 ಎಸೆತದ ಇಂಟ್ರೆಸ್ಟಿಂಗ್ ಸಂಭಾಷಣೆ ಹಂಚಿಕೊಂಡ ಆ್ಯಂಡ್ರೆ ರಸೆಲ್..!
ಎರಡೂ ತಂಡಗಳು ಕಳೆದ ಪಂದ್ಯದಲ್ಲಿ ಸೋಲಿನ ಕಹಿಯುಂಡಿವೆ. ಒಂದು ಕಡೆ ಮುಂಬೈ ಇಂಡಿಯನ್ಸ್ ತಂಡವು ಈ ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಶರಣಾಗಿದ್ದರೆ, ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಎದುರು ಮುಗ್ಗರಿಸಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡವು ತಲಾ 5 ಪಂದ್ಯಗಳನ್ನು ಜಯಿಸಿದ್ದು, ಅಂಕಪಟ್ಟಿಯಲ್ಲಿ ಕ್ರಮವಾಗಿ 6 ಹಾಗೂ 7ನೇ ಸ್ಥಾನದಲ್ಲಿವೆ. ಈ ಪಂದ್ಯವನ್ನು ಜಯಿಸಿದ ತಂಡವು ನೇರವಾಗಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆಯಿಡಲಿದ್ದು, ಗೆಲುವಿಗಾಗಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಸಾಧ್ಯತೆಯಿದೆ.
ಸಂಭವನೀಯ ಆಟಗಾರರ ಪಟ್ಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೋಮ್ರಾರ್, ದಿನೇಶ್ ಕಾರ್ತಿಕ್, ಕೇದವ್ ಜಾಧವ್, ಪ್ರಭುದೇಸಾಯಿ, ವನಿಂದು ಹಸರಂಗ, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಜೋಶ್ ಹೇಜಲ್ವುಡ್, ಮೊಹಮ್ಮದ್ ಸಿರಾಜ್.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಕ್ಯಾಮರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟ್ರಿಸ್ಟಿನ್ ಸ್ಟಬ್ಸ್, ನಿಹಾಲ್ ವಧೇರಾ, ಟಿಮ್ ಡೇವಿಡ್, ಜೋಪ್ರಾ ಆರ್ಚರ್, ಪೀಯೂಸ್ ಚಾವ್ಲಾ, ಆಕಾಶ್, ಅರ್ಶದ್ ಖಾನ್, ಕುಮಾರ್ ಕಾರ್ತಿಕೇಯ.
ಪಂದ್ಯ: ಸಂಜೆ 7.30ರಿಂದ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.