IPL 2025 ಹರಾಜಿಗೂ ಮುನ್ನ 4 ಅಲ್ಲ ಈ ಮೂವರನ್ನು ರೀಟೈನ್ ಮಾಡಲು ತೀರ್ಮಾನಿಸಿದ RCB.! ಈತನಿಗೆ RTM ಬಳಸಲು ನಿರ್ಧಾರ?

Published : Jul 20, 2024, 05:05 PM ISTUpdated : Jul 31, 2024, 11:28 AM IST
IPL 2025 ಹರಾಜಿಗೂ ಮುನ್ನ 4 ಅಲ್ಲ ಈ ಮೂವರನ್ನು ರೀಟೈನ್ ಮಾಡಲು ತೀರ್ಮಾನಿಸಿದ RCB.! ಈತನಿಗೆ RTM ಬಳಸಲು ನಿರ್ಧಾರ?

ಸಾರಾಂಶ

2025ರ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ಮೂರು ಆಟಗಾರರನ್ನು ರೀಟೈನ್ ಮಾಡಲು ಮುಂದಾಗಿದ್ದು, ಓರ್ವ ಆಟಗಾರನನ್ನು ಆರ್‌ಟಿಎಂ ಕಾರ್ಡ್ ಬಳಸಲು ಮುಂದಾಗಿದೆ.ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ.

ಬೆಂಗಳೂರು: ಕಳೆದ 17 ಆವೃತ್ತಿಗಳಿಂದಲೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಟ್ರೋಫಿ ಗೆಲ್ಲಲು ಇದುವರೆಗೂ ಸಾಧ್ಯವಾಗಿಲ್ಲ. ಮೂರು ಬಾರಿ ಫೈನಲ್ ಪ್ರವೇಶಿಸಿದ್ದೇ, ಆರ್‌ಸಿಬಿ ತಂಡದ ಶ್ರೇಷ್ಠ ಪ್ರದರ್ಶನ ಎನಿಸಿದೆ. 2024ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವು ಕೊನೆಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಪ್ಲೇ ಆಫ್ ಪ್ರವೇಶಿಸಿತ್ತಾದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮುಂಬರುವ ಐಪಿಎಲ್ ಹರಾಜಿನಲ್ಲಿ ಸಾಕಷ್ಟು ಅಳೆದುತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ಹಾಗೂ ಹರಾಜಿಗೂ ಮುನ್ನ ಅತ್ಯುತ್ತಮ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಆರ್‌ಸಿಬಿ ಫ್ರಾಂಚೈಸಿಯು ರಣತಂತ್ರ ಹೆಣೆಯುತ್ತಿದೆ

17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ದಯನೀಯ ಸೋಲುಗಳೊಂದಿಗೆ ಆರಂಭ ಪಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ದ್ವಿತಿಯಾರ್ಧದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಪ್ಲೇ ಆಫ್‌ಗೆ ಎಂಟ್ರಿಕೊಡುವಲ್ಲಿ ಯಶಸ್ವಿಯಾಗಿತ್ತು. ಆರ್‌ಸಿಬಿ ತಂಡದಲ್ಲಿ ಹಲವು ದೌರ್ಬಲ್ಯಗಳಿದ್ದರೂ, ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ದ್ವಿತಿಯಾರ್ಧದಲ್ಲಿ ತೋರಿದ ಪ್ರದರ್ಶನ ಬೆಂಗಳೂರು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ತೊರೆಯಲು ಮುಂದಾದ್ರಾ ರಿಷಭ್..? ಪಂತ್ ಸೆಳೆಯಲು ಮುಂದಾಯ್ತಾ 5 ಬಾರಿಯ ಚಾಂಪಿಯನ್?

ಇದೀಗ 2025ರ ಐಪಿಎಲ್ ಟೂರ್ನಿಗೂ ಮುನ್ನ ನಡೆಯಲಿರುವ ಮೆಗಾ ಹರಾಜಿನಲ್ಲಿ  8 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಕೆಲ ಐಪಿಎಲ್‌ ಫ್ರಾಂಚೈಸಿಗಳು ಎಂದು ಮನವಿ ಮಾಡಿಕೊಂಡಿವೆ ಎಂದು ವರದಿಯಾಗಿದೆ. ಆದರೆ ಐಪಿಎಲ್ ಆಡಳಿತ ಕಮಿಟಿಯು 3+1 ಸೂತ್ರದ ಪ್ರಕಾರ ರೀಟೈನ್‌ಗೆ ಅವಕಾಶ ನೀಡಿದೆ ಎನ್ನಲಾಗುತ್ತಿದೆ. ಅಂದರೆ ಮೂವರು ಆಟಗಾರರು ಹರಾಜಿಗೂ ಮುನ್ನ ನೇರ ರೀಟೈನ್ ಹಾಗೂ ಒಂದು ರೈಟ್‌ ಟು ಮ್ಯಾಚ್ ಕಾರ್ಡ್‌ ಬಳಕೆಗೆ ಅವಕಾಶ ನೀಡಲು ಬಿಸಿಸಿಐ ಮುಂದಾಗಿದೆ ಎನ್ನಲಾಗುತ್ತಿದೆ.

ಹೀಗಾಗಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯಾವ ಮೂರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲಿದೆ ಹಾಗೂ ಯಾರನ್ನು ಆರ್‌ಟಿಎಂ ಮೂಲಕ ತನ್ನ ತೆಕ್ಕೆಗೆ ಸೆಳೆದುಕೊಳ್ಳಲಿದೆ ಎನ್ನುವ ಕುತೂಹಲ ಜೋರಾಗಿದೆ.

1. ವಿರಾಟ್ ಕೊಹ್ಲಿ: 

ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿಯನ್ನು ಮೊದಲ ಆಯ್ಕೆಯ ಆಟಗಾರನಾಗಿ ಬೆಂಗಳೂರು ಫ್ರಾಂಚೈಸಿ ರೀಟೈನ್ ಮಾಡಿಕೊಳ್ಳಲಿದೆ. 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೊಹ್ಲಿ 14 ಪಂದ್ಯಗಳನ್ನಾಡಿ 708 ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. 

ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ವಿರಾಟ್ ಕೊಹ್ಲಿ, ಆರ್‌ಸಿಬಿ ಪರವಾಗಿ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಆರ್‌ಸಿಬಿ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿಯಾಗಿರುವ ಕೊಹ್ಲಿಯನ್ನು ಬೆಂಗಳೂರು ಫ್ರಾಂಚೈಸಿಯು ಯಾವುದೇ ಅಳುಕಿಲ್ಲದೇ ರೀಟೈನ್ ಮಾಡಿಕೊಳ್ಳಲಿದೆ.

'ನಿಮಗೆ ಧೈರ್ಯವಿದ್ರೆ..?': ಸಾನಿಯಾ ಜತೆ ಶಮಿ ಮದುವೆ ಬಗ್ಗೆ ಮೊದಲ ಬಾರಿ ತುಟಿಬಿಚ್ಚಿದ್ದ ಟೀಂ ಇಂಡಿಯಾ ವೇಗಿ..!

2. ರಜತ್ ಪಾಟೀದಾರ್:

ಆರ್‌ಸಿಬಿ ತಂಡದ ಪರ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊದಲಾರ್ಧದಲ್ಲಿ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ರಜತ್ ಪಾಟೀದಾರ್, ಆ ಬಳಿಕ ದ್ವಿತಿಯಾರ್ಧದಲ್ಲಿ ಭರ್ಜರಿಯಾಗಿಯೇ ಫಾರ್ಮ್‌ಗೆ ಮರಳಿದ್ದರು. ಪದೇ ಪದೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಹೊರತಾಗಿಯೂ ಪಾಟೀದಾರ್‌ಗೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಅವಕಾಶ ನೀಡಿತು. ಪರಿಣಾಮ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಾಟೀದಾರ್ 14 ಪಂದ್ಯಗಳನ್ನಾಡಿ 180ರ ಸ್ಟ್ರೈಕ್‌ರೇಟ್‌ನಲ್ಲಿ 361 ರನ್ ಸಿಡಿಸಿದರು.  

ಯುವ ಆಟಗಾರನಾಗಿರುವ ರಜತ್ ಪಾಟೀದಾರ್ ಅವರನ್ನು ಸೂಕ್ತರೀತಿಯಲ್ಲಿ ಬಳಸಿಕೊಂಡರೆ, ತಂಡಕ್ಕೆ ಆಸ್ತಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಹೀಗಾಗಿಯೇ ಆರ್‌ಸಿಬಿ ಫ್ರಾಂಚೈಸಿಯು ಯುವ ಬ್ಯಾಟರ್‌ನಲ್ಲಿ ಉಳಿಸಿಕೊಳ್ಳಲು ಹೆಚ್ಚು ಆಸಕ್ತಿ ತೂರಿದಂತಿದೆ.

3. ವಿಲ್ ಜ್ಯಾಕ್ಸ್:

ಕೇವಲ 3.2 ಕೋಟಿ ರುಪಾಯಿ ನೀಡಿ ಖರೀದಿಸಿದ್ದ ಇಂಗ್ಲೆಂಡ್ ಮೂಲದ ಸ್ಪೋಟಕ ಬ್ಯಾಟರ್ ವಿಲ್ ಜ್ಯಾಕ್ಸ್, 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವಲ್ಲಿ ವಿಲ್ ಜ್ಯಾಕ್ಸ್‌ ಯಶಸ್ವಿಯಾಗಿದ್ದರು.

25 ವರ್ಷದ ಬ್ಯಾಟಿಂಗ್ ಆಲ್ರೌಂಡರ್ ವಿಲ್‌ ಜ್ಯಾಕ್ಸ್‌ ಆರ್‌ಸಿಬಿ ಪರ ಕೇವಲ 8 ಪಂದ್ಯಗಳನ್ನಾಡಿ 175ರ ಸ್ಟ್ರೈಕ್‌ರೇಟ್‌ನಲ್ಲಿ ಒಂದು ಶತಕ ಸಹಿತ 230 ರನ್ ಸಿಡಿಸಿದ್ದು, ಬೆಂಗಳೂರು ತಂಡವು ರೀಟೈನ್‌ ಮಾಡಿಕೊಂಡರೆ ಒಳ್ಳೆಯ ಆಯ್ಕೆ ಎನಿಸಿಕೊಳ್ಳಲಿದ್ದಾರೆ. ಅಗತ್ಯವಿದ್ದರೇ ಬೌಲಿಂಗ್‌ನಲ್ಲೂ ವಿಲ್ ಜ್ಯಾಕ್ಸ್ ಆಸರೆಯಾಗಬಲ್ಲರು. ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ರೀಟೈನ್ ಮಾಡಿಕೊಳ್ಳುವುದಕ್ಕಿಂತ ವಿಲ್ ಜ್ಯಾಕ್ಸ್‌ ರೀಟೈನ್ ಭವಿಷ್ಯದ ದೃಷ್ಟಿಯಿಂದ ಆರ್‌ಸಿಬಿ ಲಾಭವಾಗುವ ಸಾಧ್ಯತೆಯೇ ಹೆಚ್ಚು.

4. ಮೊಹಮ್ಮದ್ ಸಿರಾಜ್:

2018ರಿಂದಲೂ ಆರ್‌ಸಿಬಿ ತಂಡದ ಬೌಲಿಂಗ್ ಬೆನ್ನೆಲುಬು ಎನಿಸಿಕೊಂಡಿರುವ ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಬೆಂಗಳೂರು ಫ್ರಾಂಚೈಸಿ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಹರಾಜಿನಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಸಿರಾಜ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ 13 ಪಂದ್ಯಗಳನ್ನಾಡಿ 13 ವಿಕೆಟ್ ಕಬಳಿಸಿದ್ದರು. 

ಟೀಂ ಇಂಡಿಯಾ ವೇಗಿಯಾಗಿ ಅಪಾರ ಅನುಭವ ಹೊಂದಿರುವ ಸಿರಾಜ್, ಆಕ್ರಮಣಕಾರಿ ಮನೋಭಾವ ಹೊಂದಿರುವ ವೇಗಿ ಸಿರಾಜ್, ಯಾವುದೇ ಹಂತದಲ್ಲೂ ಎದುರಾಳಿ ಬ್ಯಾಟಿಂಗ್ ಪಡೆಗೆ ಅಪಾಯಕಾರಿಯಾಗಬಲ್ಲರು. ಹೀಗಾಗಿ ಸಿರಾಜ್ ಮತ್ತೊಮ್ಮೆ ಬೆಂಗಳೂರು ತಂಡವನ್ನೇ ಪ್ರತಿನಿಧಿಸಿದರೂ ಅಚ್ಚರಿಯೇನಿಲ್ಲ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್