WTC ಇತಿಹಾಸದಲ್ಲೇ ಹೊಸ ಮೈಲಿಗಲ್ಲು ನೆಟ್ಟ ರವೀಂದ್ರ ಜಡೇಜಾ..! ಸಿರಾಜ್‌ಗೆ ಎರಡನೇ, ಕೊಹ್ಲಿಗೆ ಮೂರನೇ ಸ್ಥಾನ..!

Published : Aug 24, 2026, 02:16 PM IST
Ravindra Jadeja

ಸಾರಾಂಶ

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದ ರವೀಂದ್ರ ಜಡೇಜಾ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 50 ಪಂದ್ಯಗಳನ್ನು ಆಡಿದ ಏಷ್ಯಾದ ಮೊದಲ ಆಟಗಾರ ಎಂಬ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ಮೂಲಕ ಅವರು ವಿರಾಟ್ ಕೊಹ್ಲಿಯಂತಹ ಆಟಗಾರರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಇದೇ ವೇಳೆ, ಕೊಲಂಬೊ ಟೆಸ್ಟ್‌ನಲ್ಲಿ ಭಾರತ ತಂಡವು ದೇವದತ್ ಪಡಿಕ್ಕಲ್ ಶತಕದ ನೆರವಿನಿಂದ ಬೃಹತ್ ಮೊತ್ತ ಕಲೆಹಾಕಿದೆ.

ಬೆಂಗಳೂರು: ಜಗತ್ತಿನ ನಂಬರ್ ಒನ್ ಟೆಸ್ಟ್ ಆಲ್ರೌಂಡರ್ ರವೀಂದ್ರ ಜಡೇಜಾ, ಸದ್ಯ ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ. ಕೊಲಂಬೊ ಟೆಸ್ಟ್ ಪಂದ್ಯದಲ್ಲಿ ಜಾಮ್‌ನಗರ ಮೂಲದ ಜಡ್ಡು, ಟೀಂ ಇಂಡಿಯಾ ಪರ ಕಣಕ್ಕಿಳಿಯುತ್ತಿದ್ದಂತೆಯೇ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಶ್ರೀಲಂಕಾ ಎದುರಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಎರಡನೇ ಪಂದ್ಯ ಜಡೇಜಾ ಪಾಲಿಗೆ ಅವಿಸ್ಮರಣೀಯ ಪಂದ್ಯ ಎನಿಸಿಕೊಂಡಿದೆ. ಇದು ಜಡೇಜಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಡುತ್ತಿರುವ 50ನೇ ಟೆಸ್ಟ್ ಪಂದ್ಯ ಎನಿಸಿಕೊಂಡಿದೆ.

ಹೊಸ ಮೈಲಿಗಲ್ಲು ನೆಟ್ಟ ಜಡೇಜಾ:

ಟೀಂ ಇಂಡಿಯಾದ ಅತ್ಯಂತ ನಂಬಿಗಸ್ಥ ಬೌಲಿಂಗ್ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ರವೀಂದ್ರ ಜಡೇಜಾ, ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ 50 ಟೆಸ್ಟ್‌ ಪಂದ್ಯಗಳನ್ನಾಡಿದ ಭಾರತದ ಹಾಗೂ ಏಷ್ಯಾದ ಮೊದಲ ಆಟಗಾರ ಎನ್ನುವ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ. 2012ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ ರವೀಂದ್ರ ಜಡೇಜಾ, 2025-27ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ 11 ಪಂದ್ಯಗಳನ್ನು ಅಡಿದ್ದಾರೆ.

2019ರಿಂದ 2021ನೇ ಸಾಲಿನ ಚೊಚ್ಚಲ ಸೀಸನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಜಡೇಜಾ ಟೀಂ ಇಂಡಿಯಾ ಪರ 11 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಇದಾದ ಬಳಿಕ 2021-23ರ ಅವಧಿಯಲ್ಲಿ 13 ಟೆಸ್ಟ್ ಹಾಗೂ 2023-25ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 25 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ.

WTCಯಲ್ಲಿ ಅತಿಹೆಚ್ಚು ಪಂದ್ಯವನ್ನಾಡಿದ ಆಟಗಾರರ ಪಟ್ಟಿಯಲ್ಲಿ ಜಡ್ಡು ನಂ.1, ಕೊಹ್ಲಿ ನಂ.3

ಇನ್ನು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಇತಿಹಾಸದಲ್ಲಿ ರವೀಂದ್ರ ಜಡೇಜಾ 50* ಪಂದ್ಯಗಳನ್ನಾಡಿ 5 ಶತಕ ಸಹಿತ 2632 ರನ್ ಹಾಗೂ ಬೌಲಿಂಗ್‌ನಲ್ಲಿ 160 ವಿಕೆಟ್ ಕಬಳಿಸಿದ್ದಾರೆ. ಇನ್ನು 47 ಪಂದ್ಯಗಳನ್ನಾಡಿರುವ ಮೊಹಮ್ಮದ್ ಸಿರಾಜ್ ಎರಡನೇ ಸ್ಥಾನದಲ್ಲಿದ್ದಾರೆ. ಈಗಾಗಲೇ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ವಿರಾಟ್ ಕೊಹ್ಲಿ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ 46 ಪಂದ್ಯಗಳನ್ನಾಡುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ತಲಾ 42ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಶುಭ್‌ಮನ್ ಗಿಲ್ ಆನಂತರದ ಸ್ಥಾನದಲ್ಲಿದ್ದಾರೆ.

ಭಾರತದ ಬಿಗಿ ಹಿಡಿತದಲ್ಲಿ ಕೊಲಂಬೊ ಟೆಸ್ಟ್‌:

ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ದೇವದತ್ ಪಡಿಕ್ಕಲ್ ಬಾರಿಸಿದ ಸತತ ಎರಡನೇ ಶತಕ(117), ನಾಯಕ ಶುಭ್‌ಮನ್ ಗಿಲ್(50), ರಿಷಭ್ ಪಂತ್(63) ಹಾಗೂ ಧ್ರುವ್ ಜುರೆಲ್ ಅಜೇಯ 89* ರನ್‌ಗಳ ನೆರವಿನಿಂದ 131 ಓವರ್ ಅಂತ್ಯದ ವೇಳೆಗೆ ಭಾರತ ತಂಡವು 8 ವಿಕೆಟ್ ಕಳೆದುಕೊಂಡು 469 ರನ್ ಸಿಡಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಧ್ರುವ್ ಜುರೆಲ್ ಶತಕದತ್ತ ಮುನ್ನುಗ್ಗುತ್ತಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರಣ್ ಶರ್ಮಾ ಹೆಸರಿನಲ್ಲಿದೆ ಅಪರೂಪದಲ್ಲೇ ಅಪರೂಪದ ಐಪಿಎಲ್ ರೆಕಾರ್ಡ್..!
RCB ಗೇಮ್‌ ಚೇಂಜರ್ ಡಿಕೆ, ಚೆನ್ನೈ ಸೂಪರ್ ಕಿಂಗ್ಸ್ ಹೆಡ್ ಕೋಚ್ ಆಗ್ತಾರಾ? ಹೊಸ ಬಾಂಬ್ ಸಿಡಿಸಿದ ಮ್ಯಾಥ್ಯೂ ಹೇಡನ್..!