
ಚೆನ್ನೈ(ಮಾ.06): ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಇಂಗ್ಲೆಂಡ್ ಎದುರಿನ ರಾಜ್‌ಕೋಟ್ ಟೆಸ್ಟ್ ಪಂದ್ಯದ ಎರಡನೇ ದಿನದಾಟಕ್ಕೂ ಮುನ್ನ ದಿಢೀರ್ ಎನ್ನುವಂತೆ ತಂಡ ತೊರೆದಿದ್ದರು. ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಕಬಳಿಸಿದ ದಿನವೇ ದಿಢೀರ್ ಎನ್ನುವಂತೆ ತಮ್ಮ ಮನೆಗೆ ತೆರಳಿದ್ದರು. 'ಫ್ಯಾಮಿಲಿ ಎಮರ್ಜೆನ್ಸಿಯಿಂದಾಗಿ' ಅಶ್ವಿನ್ ಮನೆಗೆ ವಾಪಾಸ್ಸಾಗಿದ್ದಾರೆ ಎಂದಷ್ಟೇ ಬಿಸಿಸಿಐ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿತ್ತು.
ಈ ವಿಚಾರವಾಗಿ ಅಶ್ವಿನ್ ಇದುವರೆಗೂ ಹೆಚ್ಚಿನ ಮಾಹಿತಿ ಹಂಚಿಕೊಂಡಿರಲಿಲ್ಲ. ಆದರೆ ಅಶ್ವಿನ್ ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಿತ್ತು ಎನ್ನುವ ವಿಚಾರವನ್ನು ಅವರ ಪತ್ನಿ ಪ್ರೀತಿ ಬಾಯ್ಬಿಟ್ಟಿದ್ದಾರೆ. ಒಂದು ಕಡೆ ರವಿಚಂದ್ರನ್ ಅಶ್ವಿನ್ 100ನೇ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗುತ್ತಿರುವ ಬೆನ್ನಲ್ಲೇ ಅವರ ಪತ್ನಿ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಖೇಲೋ ಇಂಡಿಯಾ ಪದಕ ವಿಜೇತರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ..!
ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಕಾಲಂ ಬರೆದಿರುವ ಪ್ರೀತಿ, "ರಾಜ್‌ಕೋಟ್ ಟೆಸ್ಟ್ ಪಂದ್ಯದ ದಿನ ಮಕ್ಕಳು ಆಗಸ್ಟೇ ಶಾಲೆಯಿಂದ ಮನೆಗೆ ಬಂದಿದ್ದರು. ಇದಾಗಿ 5 ನಿಮಿಷಕ್ಕೆ ಅವರು 500 ವಿಕೆಟ್ ಕಬಳಿಸಿದರು. ಇದಾಗುತ್ತಿದ್ದಂತೆಯೇ ಫೋನ್‌ನಲ್ಲಿ ಅಭಿನಂದಿಸುತ್ತಿದ್ದವರ ಜತೆ ಮಾತನಾಡುತ್ತಿದ್ದೆವು."
"ಇನ್ನು ಇದಾಗುತ್ತಿದ್ದಂತೆಯೇ ಅತ್ತೆ ಕುಸಿದು ಬಿದ್ದಾಗ ಹಠಾತ್ ಕಿರುಚಾಟ ಕೇಳಿಸಿತು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ನಾವು ಆಸ್ಪತ್ರೆಯಲ್ಲಿದ್ದೆವು. ಆ ಸಂದರ್ಭದಲ್ಲಿ ಈ ವಿಚಾರವನ್ನು ಅಶ್ವಿನ್‌ಗೆ ಹೇಳಬಾರದು ಅಂದುಕೊಂಡೆವು. ಯಾಕೆಂದರೆ ಚೆನ್ನೈ ಹಾಗೂ ರಾಜ್‌ಕೋಟ್ ನಡುವೆ ಸರಿಯಾಗಿ ವಿಮಾನದ ವ್ಯವಸ್ಥೆ ಇರಲಿಲ್ಲ" ಎಂದು ಬರೆದಿದ್ದಾರೆ.
"ಇದಾದ ಬಳಿಕ ನಾವು ಚೇತೇಶ್ವರ ಪೂಜಾರ ಹಾಗೂ ಮತ್ತವರ ಕುಟುಂಬಕ್ಕೆ ಫೋನ್ ಮಾಡಿದೆವು. ಅವರು ತುಂಬಾ ದೊಡ್ಡ ಸಹಾಯ ಮಾಡಿದರು. ಕೊನೆಗೂ ನಮಗೆ ಸೂಕ್ತ ವ್ಯವಸ್ಥೆಯಾದ ಬಳಿಕ ನಾನು ಅಶ್ವಿನ್‌ಗೆ ಕರೆ ಮಾಡಿದೆ. ಯಾಕೆಂದರೆ ಸ್ಕ್ಯಾನ್ ಮಾಡಿದ ಡಾಕ್ಟರ್, ಇಂತಹ ಸಂದರ್ಭದಲ್ಲಿ ಅವರ ಮಗ ಜತೆಗಿರುವುದು ಒಳ್ಳೆಯದ್ದು ಎಂದು ಹೇಳಿದರು. ನನ್ನ ಮಾತು ಕೇಳಿ ಅಶ್ವಿನ್ ಒಂದು ಕ್ಷಣ ಕುಸಿದು ಹೋದರು. ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್, ತಂಡದವರಿಗೆ ಹಾಗೂ ಬಿಸಿಸಿಐಗೆ ಧನ್ಯವಾದಗಳನ್ನು ಹೇಳಬೇಕು. ಯಾಕೆಂದರೆ ಅವರೆಲ್ಲರೂ ಸೇರಿ ಅಶ್ವಿನ್ ಮನೆಗೆ ಸೇರುವಂತೆ ಸೂಕ್ತ ವ್ಯವಸ್ಥೆ ಮಾಡಿದರು. ಇಲ್ಲಿಗೆ ಬರುವಾಗ ಸಮಯ ತಡರಾತ್ರಿಯಾಗಿತ್ತು" ಎಂದು ಪ್ರೀತಿ ನೆನಪಿಸಿಕೊಂಡಿದ್ದಾರೆ.
ಅಶ್ವಿನ್ ಆಸ್ಪತ್ರೆ ತಲುಪಿದಾಗ ಅವರ ತಾಯಿ ಐಸಿಯುನಲ್ಲಿದ್ದರು. ಅದೃಷ್ಟವಶಾತ್ ಅವರ ತಾಯಿ ಚೇತರಿಸಿಕೊಂಡರು. ತಾಯಿ ಆರೋಗ್ಯದಲ್ಲಿ ಚೇತರಿಕೆಯಾಗುವುದನ್ನು ಕಂಡು ಅಶ್ವಿನ್ ಮತ್ತೆ ಟೆಸ್ಟ್ ಪಂದ್ಯವನ್ನಾಡಲು ರಾಜ್‌ಕೋಟ್‌ನತ್ತ ಪ್ರಯಾಣ ಬೆಳೆಸಿದರು. ಇಂಗ್ಲೆಂಡ್ ಎದುರಿನ ನಾಲ್ಕನೇ ದಿನದಾಟದ ವೇಳೆಗೆ ಅಶ್ವಿನ್ ಭಾರತ ತಂಡದ ಪರ ಕಣಕ್ಕಿಳಿದರು.
ಐಸಿಯುನಲ್ಲಿ ತಮ್ಮ ತಾಯಿಯನ್ನು ನೋಡಿದ್ದು ಅಶ್ವಿನ್‌ಗೆ ಒಂದು ರೀತಿ ಭಾವನಾತ್ಮಕ ಕ್ಷಣವಾಗಿತ್ತು. ಇದಾದ ಬಳಿಕ ಅವರ ತಾಯಿ ಆರೋಗ್ಯ ಸ್ಥಿರವಾದ ಬೆನ್ನಲ್ಲೇ ನಾವು ನೀವು ತಂಡ ಕೂಡಿಕೊಳ್ಳಿ ಎಂದು ಹೇಳಿದೆವು. ಅವರ ವ್ಯಕ್ತಿತ್ವವೇ ಹಾಗೆ, ಎಂತಹ ಪರಿಸ್ಥಿತಿಯಲ್ಲೂ ತಂಡವನ್ನು ಮಧ್ಯದಲ್ಲಿ ಬಿಡುವವರಲ್ಲ. ಒಂದು ವೇಳೆ ಆ ಪಂದ್ಯವನ್ನು ಗೆಲ್ಲದಿದ್ದರೇ ಅವರಿಗೆ ಒಂದು ಅಪರಾಧಿ ಭಾವನೆ ಖಂಡಿತ ಕಾಡುತ್ತಿತ್ತು ಎಂದು ಪ್ರೀತಿ ಆ ಲೇಖನದಲ್ಲಿ ಬರೆದುಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.