
ನವದೆಹಲಿ(ಫೆ.27): ಭಾರತಕ್ಕೆ ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ಗೆಲುವನ್ನು ದಕ್ಕಿಸಿಕೊಟ್ಟ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಒಬ್ಬ ದಿಗ್ಗಜ ಕ್ರಿಕೆಟಿಗ ಎನ್ನುವ ವಿಚಾರದಲ್ಲಿ ಯಾವುದೇ ಅನುಮಾನ ಉಳಿದಿಲ್ಲ ಎಂದು ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ದ ಮುಕ್ತಾಯವಾದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಎರಡನೇ ಅತಿವೇಗವಾಗಿ 400 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು. ಶ್ರೀಲಂಕಾ ಸ್ಪಿನ್ ದಿಗ್ಗಜ ಮುತ್ತಯ್ಯ ಮುರುಳೀಧರನ್ 72 ಪಂದ್ಯಗಳಲ್ಲಿ 400 ವಿಕೆಟ್ ಪಡೆದರೆ, ಅಶ್ವಿನ್ 77 ಪಂದ್ಯಗಳನ್ನಾಡಿ 400 ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಈ ಕುರಿತಂತೆ ಸ್ಟಾರ್ ಸ್ಪೋರ್ಟ್ಸ್ ಸುದ್ದಿವಾಹಿನಿಯಲ್ಲಿ ಮಾತನಾಡಿದ ಹರ್ಭಜನ್ ಸಿಂಗ್, ಭಾರತಕ್ಕೆ ಹಲವು ಗೆಲುವುಗಳನ್ನು ತಂದುಕೊಟ್ಟ ಅಶ್ವಿನ್ ಎಲ್ಲಾ ರೀತಿಯ ಪ್ರಶಂಸೆಗೆ ಅರ್ಹರು ಎಂದು ಅಭಿಪ್ರಾಯಪಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್ ಪಡೆಯುವುದು ಎಂದರೆ ಅದೊಂದು ದೊಡ್ಡ ಸಾಧನೆ. ಟೆಸ್ಟ್ ಕ್ರಿಕೆಟ್ ನಿಮ್ಮ ಮಾನಸಿಕ, ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. 400 ಬ್ಯಾಟ್ಸ್‌ಮನ್‌ಗಳನ್ನು ಬಲಿ ಪಡೆಯುವ ಮೂಲಕ ಹಲವಾರು ಪಂದ್ಯಗಳಲ್ಲಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡಿರುವ ಅಶ್ವಿನ್ ನಿಜಕ್ಕೂ ದಿಗ್ಗಜ ಕ್ರಿಕೆಟಿಗ ಎಂದು ಭಜ್ಜಿ ಬಣ್ಣಿಸಿದ್ದಾರೆ.
ಎರಡೇ ದಿನದಲ್ಲಿ ಮುಗಿದ ಟೆಸ್ಟ್‌ನಲ್ಲಿ ನಿರ್ಮಾಣವಾದ ಅಪರೂಪದ ದಾಖಲೆಗಳಿವು..!
ಅನುಭವಿ ಬೌಲರ್ ಆಗಿ ಬೆಳೆದು ನಿಂತಿರುವ ರವಿಚಂದ್ರನ್ ಅಶ್ವಿನ್ ಪ್ರತಿಸಲವೂ ಜವಾಬ್ದಾರಿಯನ್ನು ತಮ್ಮ ಭುಜದ ಮೇಲೇರಿಸಿಕೊಳ್ಳುತ್ತಾರೆ. ಈ ಮೂಲಕ ಎದುರಾಳಿ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ನ ವಿಕೆಟ್ ಕಬಳಿಸುವ ಮೂಲಕ ಭಾರತ ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ಮೇಲುಗೈ ತಂದುಕೊಡುತ್ತಾರೆ ಎಂದು ಹರ್ಭಜನ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.