ಬಯೋ ಸೆಕ್ಯೂರ್‌ ಬಬಲ್‌ ತೊರೆದು ಇಂಗ್ಲೆಂಡ್‌ಗೆ ವಾಪಾಸಾದ ಸ್ಟಾರ್ ಆಲ್ರೌಂಡರ್..!

By Suvarna NewsFirst Published Feb 27, 2021, 4:34 PM IST
Highlights

ಇಂಗ್ಲೆಂಡ್‌ ತಂಡದ ಸ್ಟಾರ್ ಆಲ್ರೌಂಡರ್ ಭಾರತ ವಿರುದ್ದದ ಕೊನೆಯ ಟೆಸ್ಟ್ ಪಂದ್ಯ ಆರಂಭಕ್ಕೂ ಮೊದಲೇ ಬಯೋ ಸೆಕ್ಯೂರ್‌ ಬಬಲ್ ತೊರೆದು ತವರಿಗೆ ವಾಪಾಸಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಅಹಮದಾಬಾದ್‌(ಫೆ.27): ಭಾರತ ವಿರುದ್ದ ಪಿಂಕ್‌ ಬಾಲ್ ಟೆಸ್ಟ್ ಪಂದ್ಯದಲ್ಲಿ ಕೇವಲ ಎರಡೇ ದಿನಕ್ಕೆ ಶರಣಾಗಿ ಮುಖಭಂಗ ಅನುಭವಿಸಿರುವ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಶಾಕ್‌ ಎದುರಾಗಿದ್ದು, ತಂಡದ ಪ್ರಮುಖ ಆಲ್ರೌಂಡರ್‌ ಕ್ರಿಸ್‌ ವೋಕ್ಸ್ ಬಯೋ ಸೆಕ್ಯೂರ್ ಬಬಲ್ ತೊರೆದು ತವರಿಗೆ ವಾಪಾಸಾಗಿದ್ದಾರೆ.

ಕ್ರಿಸ್‌ ವೋಕ್ಸ್‌ ಕ್ರಿಕೆಟ್‌ನಿಂದ ಬಿಡುವು ಪಡೆದುಕೊಂಡಿದ್ದು, ಕೊನೆಯ ಟೆಸ್ಟ್‌ಗೆ ತಾವು ಅಲಭ್ಯರಾಗುವುದಾಗಿ ಮೊದಲೇ ತಿಳಿಸಿದ್ದರು. ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯ ಮುಗಿದ ದಿನವೇ ಕ್ರಿಸ್‌ ವೋಕ್ಸ್ ಬಯೋ ಬಬಲ್ ತೊರೆದು ತವರಿಗೆ ವಾಪಾಸಾಗಿದ್ದಾರೆ ಎಂದು ವರದಿಯಾಗಿದೆ. ಮುಂಬರುವ ಟಿ20 ವಿಶ್ವಕಪ್ ಹಾಗೂ ಆ್ಯಷಸ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಬಹು ಮಾದರಿಯ ಕ್ರಿಕೆಟ್‌ ಆಡುವ ಆಟಗಾರರಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿಶ್ರಾಂತಿ ನೀಡುತ್ತಿದೆ. 

ರೊಟೇಷನ್‌ ಪಾಲಿಸಿ ಅನ್ವಯ ಈ ವರ್ಷಾರಂಭದಲ್ಲೇ ಬೆನ್ ಸ್ಟೋಕ್ಸ್‌, ಜೋಫ್ರಾ ಆರ್ಚರ್, ಜಾನಿ ಬೇರ್‌ಸ್ಟೋವ್‌, ಜೋಸ್‌ ಬಟ್ಲರ್‌ ಹಾಗೂ ಜೇಮ್ಸ್ ಆ್ಯಂಡರ್‌ಸನ್‌ಗೆ ವಿಶ್ರಾಂತಿ ನೀಡಲಾಗಿತ್ತು. ಇನ್ನು ಭಾರತ ವಿರುದ್ದ ಟೆಸ್ಟ್ ಸರಣಿ ಮುಕ್ತಾಯವಾದ ಟೆಸ್ಟ್ ತಂಡದ ನಾಯಕ ಜೋ ರೂಟ್‌ಗೆ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಇನ್ನು ಕ್ರಿಸ್ ವೋಕ್ಸ್‌ ಈ ವರ್ಷದಲ್ಲಿ ಇದುವರೆಗೂ ಒಂದೇ ಒಂದು ಪಂದ್ಯವನ್ನಾಡಿಲ್ಲ. ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ಪ್ರವಾಸದಲ್ಲಿ ತಂಡದೊಟ್ಟಿಗೆ ತೆರಳಿದ್ದರಾದರೂ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಇನ್ನು ಭಾರತ ವಿರುದ್ದ ಮೂರು ಟೆಸ್ಟ್ ಪಂದ್ಯಗಳಲ್ಲೂ ವೋಕ್ಸ್‌ ಬೆಂಚ್ ಕಾಯಿಸಿದ್ದರು.

ಜಸ್ಪ್ರೀತ್ ಮನವಿಗೆ ಸ್ಪಂದಿಸಿದ ಬಿಸಿಸಿಐ; 4ನೇ ಟೆಸ್ಟ್ ಪಂದ್ಯಕ್ಕೆ ಬುಮ್ರಾ ಅಲಭ್ಯ!

ಸದ್ಯ ಭಾರತ ಹಾಗೂ ಇಂಗ್ಲೆಂಡ್ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 2-1ರ ಮುನ್ನಡೆ ಸಾಧಿಸಿದೆ. ಪಿಂಕ್‌ ಬಾಲ್ ಟೆಸ್ಟ್ ಪಂದ್ಯ ಸೋಲುವುದರೊಂದಿಗೆ ಇಂಗ್ಲೆಂಡ್ ಅಧಿಕೃತವಾಗಿ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ರೇಸಿನಿಂದ ಹೊರಬಿದ್ದಿದೆ. ಇನ್ನು ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಇಲ್ಲವೇ ಡ್ರಾ ಸಾಧಿಸಿದರೂ ಸಾಕು, ಟೆಸ್ಟ್ ವಿಶ್ವಕಪ್‌ ಫೈನಲ್‌ ಪ್ರವೇಶಿಸಲಿದ್ದು, ಟ್ರೋಫಿಗಾಗಿ ನ್ಯೂಜಿಲೆಂಡ್‌ ಎದುರು ಕಾದಾಡಲಿದೆ. ಒಂದು ವೇಳೆ ಕೊನೆಯ ಟೆಸ್ಟ್ ಪಂದ್ಯವನ್ನು ಭಾರತ ಸೋತರೆ, ಆಸ್ಟ್ರೇಲಿಯಾ ತಂಡ ಪ್ರಶಸ್ತಿಗಾಗಿ ಕಿವೀಸ್‌ ಜತೆ ಕಾದಾಡಲಿದೆ.
 

click me!