ದಶಕದ ಬಳಿಕ ರಣಜಿ ಟ್ರೋಫಿ ಕನಸಲ್ಲಿದ್ದ ಕರ್ನಾಟಕ ನಾಕೌಟಲ್ಲೇ ಔಟ್‌!

By Naveen Kodase  |  First Published Feb 28, 2024, 9:23 AM IST

ಅಂತಿಮ 8ರ ಸುತ್ತಿನ ಪಂದ್ಯದಲ್ಲಿ ಗೆಲ್ಲಲು 371 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ಕರ್ನಾಟಕ, ಪಂದ್ಯದ ಕೊನೆಯ ದಿನವಾದ ಮಂಗಳವಾರ ಬ್ಯಾಟಿಂಗ್‌ ಕುಸಿತ ಅನುಭವಿಸಿತು. 4ನೇ ದಿನದಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 103 ರನ್‌ ಕಲೆಹಾಕಿದ್ದ ರಾಜ್ಯ ತಂಡಕ್ಕೆ 5ನೇ ದಿನ ಇನ್ನೂ 268 ರನ್‌ ಬೇಕಿತ್ತು. ಆದರೆ, ಮೊದಲ ಅವಧಿಯಲ್ಲೇ ಪ್ರಮುಖ ಬ್ಯಾಟರ್‌ಗಳು ಪೆವಿಲಿಯನ್‌ಗೆ ಓಟ ಕಿತ್ತ ಕಾರಣ, ರಾಜ್ಯದ ಸೆಮೀಸ್‌ ಕನಸು ಭಗ್ನಗೊಂಡಿತು.


ನಾಗ್ಪುರ(ಫೆ.28): ಕರ್ನಾಟಕ ತಂಡ ಈ ವರ್ಷವೂ ರಣಜಿ ಟ್ರೋಫಿ ನಾಕೌಟ್‌ ಹಂತದಲ್ಲಿ ಮುಗ್ಗರಿಸಿದೆ. 2023-24ನೇ ಋತುವಿನಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ವಿದರ್ಭ ವಿರುದ್ಧ ರಾಜ್ಯಕ್ಕೆ 127 ರನ್‌ ಸೋಲು ಎದುರಾಯಿತು. 2014-15ರಲ್ಲಿ ಕರ್ನಾಟಕ ಕೊನೆಯ ಬಾರಿಗೆ ರಣಜಿ ಫೈನಲ್‌ ಪ್ರವೇಶಿಸಿದ್ದು, ಆ ಬಳಿಕ ಫೈನಲ್‌ಗೇರಲೂ ತಂಡ ವಿಫಲವಾಗಿದೆ.

ಇಲ್ಲಿ ನಡೆದ ಅಂತಿಮ 8ರ ಸುತ್ತಿನ ಪಂದ್ಯದಲ್ಲಿ ಗೆಲ್ಲಲು 371 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ಕರ್ನಾಟಕ, ಪಂದ್ಯದ ಕೊನೆಯ ದಿನವಾದ ಮಂಗಳವಾರ ಬ್ಯಾಟಿಂಗ್‌ ಕುಸಿತ ಅನುಭವಿಸಿತು. 4ನೇ ದಿನದಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 103 ರನ್‌ ಕಲೆಹಾಕಿದ್ದ ರಾಜ್ಯ ತಂಡಕ್ಕೆ 5ನೇ ದಿನ ಇನ್ನೂ 268 ರನ್‌ ಬೇಕಿತ್ತು. ಆದರೆ, ಮೊದಲ ಅವಧಿಯಲ್ಲೇ ಪ್ರಮುಖ ಬ್ಯಾಟರ್‌ಗಳು ಪೆವಿಲಿಯನ್‌ಗೆ ಓಟ ಕಿತ್ತ ಕಾರಣ, ರಾಜ್ಯದ ಸೆಮೀಸ್‌ ಕನಸು ಭಗ್ನಗೊಂಡಿತು.

Tap to resize

Latest Videos

ಎಡಗೈ ಸ್ಪಿನ್ನರ್‌ಗಳಾದ ಹರ್ಷ್‌ ದುಬೆ ಹಾಗೂ ಆದಿತ್ಯ ಸರ್ವಟೆ ಜಾದೂ ಎದುರು ರಾಜ್ಯದ ಬ್ಯಾಟರ್‌ಗಳು ಪರದಾಡಿದರು. ದಿನದಾಟದ ಮೊದಲ ಒಂದು ಗಂಟೆಯೊಳಗೆ ನಾಯಕ ಮಯಾಂಕ್‌ ಅಗರ್‌ವಾಲ್‌ (70), ಉಪನಾಯಕ ನಿಕಿನ್‌ ಜೋಸ್‌ (0) ಹಾಗೂ ಮನೀಶ್‌ ಪಾಂಡೆ (1) ಕೇವಲ 4 ರನ್‌ ಅಂತರದಲ್ಲಿ ವಿಕೆಟ್‌ ಕೈಚೆಲ್ಲಿದ್ದು, ರಾಜ್ಯಕ್ಕೆ ಭಾರಿ ಹಿನ್ನಡೆ ಉಂಟು ಮಾಡಿತು. ಅನೀಶ್‌ ಕೆ.ವಿ. ಕೆಲ ಕಾಲ ಹೋರಾಟ ನಡೆಸಿ, ಹಾರ್ದಿಕ್‌ ರಾಜ್‌ ಜೊತೆ 6ನೇ ವಿಕೆಟ್‌ಗೆ 40 ರನ್‌ ಸೇರಿಸಿದರು.

ವಿರಾಟ್ ಕೊಹ್ಲಿ, ಸುನಿಲ್ ಗವಾಸ್ಕರ್ ಸಾರ್ವಕಾಲಿಕ ದಾಖಲೆ ಮುರಿಯಲು ಜೈಸ್ವಾಲ್ ರೆಡಿ..!

ಆದರೆ 40 ರನ್‌ ಗಳಿಸಿದ್ದಾಗ ಅನೀಶ್‌ ರನೌಟ್‌ ಬಲೆಗೆ ಬೀಳುತ್ತಿದ್ದಂತೆ, ರಾಜ್ಯದ ಸೋಲು ಬಹುತೇಕ ಖಚಿತವಾಯಿತು. ದುಬೆ, ರಾಜ್ಯದ ಕೆಳ ಕ್ರಮಾಂಕದ ಬ್ಯಾಟರ್‌ಗಳಿಗೆ ನೆಲೆಯೂರಲು ಬಿಡಲಿಲ್ಲ. ಹಾರ್ದಿಕ್‌, ಶರತ್‌ ಶ್ರೀನಿವಾಸ್‌ (6), ವೈಶಾಖ್‌ ವಿಜಯ್‌ಕುಮಾರ್‌ (34) ಹಾಗೂ ವಿದ್ವತ್‌ ಕಾವೇರಪ್ಪ (25)ರ ವಿಕೆಟ್‌ ಉರುಳಿಸಿದರು.

ವೈಶಾಖ್‌ ಹಾಗೂ ವಿದ್ವತ್‌ 9ನೇ ವಿಕೆಟ್‌ಗೆ 33 ರನ್‌ ಜೊತೆಯಾಟವಾಡಿ, ವಿದರ್ಭ ಗೆಲುವಿಗಾಗಿ ಕೆಲ ಸಮಯ ಕಾಯುವಂತೆ ಮಾಡಿದರು. ಅಂತಿಮವಾಗಿ ಕರ್ನಾಟಕ 243 ರನ್‌ಗೆ ಆಲೌಟ್‌ ಆಯಿತು. ಪಂದ್ಯದಲ್ಲಿ ಒಟ್ಟು 7 ವಿಕೆಟ್‌ ಕಿತ್ತ ಸರ್ವಟೆ ಪಂದ್ಯಶ್ರೇಷ್ಠರಾದರು.

ಸ್ಕೋರ್‌: ವಿದರ್ಭ 460 ಹಾಗೂ 196, ಕರ್ನಾಟಕ 286 ಹಾಗೂ 62.4 ಓವರಲ್ಲಿ 243 (ಮಯಾಂಕ್‌ 70, ಸಮರ್ಥ್‌ 40, ಅನೀಶ್‌ 40, ಹರ್ಷ್‌ 4/65, ಆದಿತ್ಯ 4/78)

41 ಬಾರಿ ಚಾಂಪಿಯನ್‌ ಮುಂಬೈ ಸೆಮಿಗೆ

ಮುಂಬೈ: 41 ಬಾರಿ ಚಾಂಪಿಯನ್‌ ಮುಂಬೈ, ಬರೋಡಾ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ ಡ್ರಾ ಸಾಧಿಸಿ, ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ. 4ನೇ ದಿನದಂತ್ಯಕ್ಕೆ 2ನೇ ಇನ್ನಿಂಗ್ಸಲ್ಲಿ 9 ವಿಕೆಟ್‌ಗೆ 379 ರನ್‌ ಗಳಿಸಿದ್ದ ಮುಂಬೈ, 5ನೇ ದಿನವಾದ ಮಂಗಳವಾರ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿತು.

IPL 2024 ಮುಂಬೈ ಇಂಡಿಯನ್ಸ್ ಪರ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ಆಟಗಾರರಿವರು..!

ತುಷಾರ್‌ ದೇಶಪಾಂಡೆ (129 ಎಸೆತ 123 ರನ್‌, 10 ಬೌಂಡರಿ, 8 ಸಿಕ್ಸರ್‌), ತನುಷ್‌ ಕೋಟ್ಯಾನ್‌ (129 ಎಸೆತ, 120* ರನ್‌, 10 ಬೌಂಡರಿ, 4 ಸಿಕ್ಸರ್‌) ಭರ್ಜರಿ ಶತಕ ಸಿಡಿಸಿ, ಮುಂಬೈ 569 ರನ್‌ ಕಲೆಹಾಕಲು ನೆರವಾದರು. 10ನೇ ವಿಕೆಟ್‌ಗೆ ಇವರಿಬ್ಬರು 232 ರನ್‌ ಸೇರಿಸಿದರು. ಗೆಲ್ಲಲು 606 ರನ್‌ ಗುರಿ ಬೆನ್ನತ್ತಿದ ಬರೋಡಾ, 3 ವಿಕೆಟ್‌ಗೆ 121 ರನ್‌ ಗಳಿಸಿದ್ದಾಗ ಪಂದ್ಯ ಡ್ರಾ ಎಂದು ಘೋಷಿಸಲಾಯಿತು.

10, 11ನೇ ಕ್ರಮಾಂಕದಲ್ಲಿ ಶತಕ: ದಾಖಲೆ

ಮುಂಬೈನ ತುಷಾರ್‌ ದೇಶಪಾಂಡೆ, ತನುಶ್‌ ಕೋಟ್ಯಾನ್‌ ಕ್ರಮವಾಗಿ 10 ಮತ್ತು 11ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಶತಕ ಬಾರಿಸಿದ್ದು, ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ದಾಖಲೆ ಎನಿಸಿದೆ. ಒಟ್ಟಾರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ 10, 11ನೇ ಕ್ರಮಾಂಕದ ಬ್ಯಾಟರ್‌ಗಳು ಶತಕ ಬಾರಿಸಿದ್ದು ಇದು 2ನೇ ಬಾರಿ. 1946ರಲ್ಲಿ ಇಂಗ್ಲೆಂಡ್‌ನ ಸರ್ರೆ ತಂಡದ ವಿರುದ್ಧ ಭಾರತದ ಚಂದು ಸರ್ವಾಟೆ, ಶುಟೆ ಬ್ಯಾನರ್ಜಿ ಈ ಸಾಧನೆ ಮಾಡಿದ್ದರು.

ಮಾ.2ರಿಂದ ಸೆಮೀಸ್‌ ಕದನ

ಸೆಮಿಫೈನಲ್‌ ಪಂದ್ಯಗಳು ಮಾ.2ರಿಂದ ಆರಂಭಗೊಳ್ಳಲಿವೆ. ಮೊದಲ ಸೆಮೀಸ್‌ನಲ್ಲಿ ವಿದರ್ಭ ಹಾಗೂ ಮಧ್ಯಪ್ರದೇಶ ಎದುರಾಗಲಿದ್ದು ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ. ಎರಡನೇ ಸೆಮೀಸ್‌ನಲ್ಲಿ ತಮಿಳುನಾಡು ಹಾಗೂ ಮುಂಬೈ ಮುಖಾಮುಖಿಯಾಗಲಿದ್ದು, ಮುಂಬೈನ ಬಿಕೆಸಿ ಮೈದಾನ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
 

click me!