ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಸರ್ಫರಾಜ್ ಖಾನ್ ರಣಜಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..
ಧರ್ಮಶಾಲಾ(ಜ.28): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೊರಬಿದ್ದ ಬಳಿಕ ಸರ್ಫರಾಜ್ ಖಾನ್ ಅಕ್ಷರಶಃ ಅಬ್ಬರಿಸುತ್ತಿದ್ದಾರೆ. ಉತ್ತರ ಪ್ರದೇಶ ವಿರುದ್ಧ ತ್ರಿಶತಕ ಸಿಡಿಸಿದ್ದ ಸರ್ಫರಾಜ್ ಇದೀಗ ಹಿಮಾಚಲ ಪ್ರದೇಶ ವಿರುದ್ಧ ಅಜೇಯ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.
ಹೌದು, ಕಳೆದ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ತ್ರಿಶತಕ (ಅಜೇಯ 301 ರನ್) ಸಿಡಿಸಿದ್ದ ಮುಂಬೈನ ಸರ್ಫರಾಜ್ ಖಾನ್, ಸೋಮವಾರದಿಂದ ಇಲ್ಲಿ ಆರಂಭಗೊಂಡ ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. 226 ರನ್ ಗಳಿಸಿ ಅಜೇಯರಾಗಿ ಉಳಿದಿರುವ ಸರ್ಫರಾಜ್, ಸತತ 2 ಪಂದ್ಯಗಳಲ್ಲಿ ತ್ರಿಶತಕ ಸಿಡಿಸಿದ ಮೊದಲ ಆಟಗಾರ ಎನ್ನುವ ದಾಖಲೆ ಬರೆಯಲು ಉತ್ಸುಕರಾಗಿದ್ದಾರೆ.
ಗಾಯಗೊಂಡಿದ್ದ ಸರ್ಫರಾಜ್ ಖಾನ್'ಗೆ ಸ್ಫೂರ್ತಿ ತುಂಬಿದ್ದು ಯಾರು ಗೊತ್ತಾ..?
ಈ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸರ್ಫರಾಜ್ ಖಾನ್ ಅವರನ್ನು 1.75 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತ್ತು. ಆದರೆ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದರಿಂದ 2019ರ ಡಿಸೆಂಬರ್ 19ರಂದು ಕೋಲ್ಕತಾದಲ್ಲಿ ನಡೆದ ಹರಾಜಿಗೂ ಮುನ್ನವೇ ಬೆಂಗಳೂರು ತಂಡ ಸರ್ಫರಾಜ್ ಅವರನ್ನು ಕೈಬಿಟ್ಟಿತ್ತು. ಆ ಬಳಿಕ ಕಿಂಗ್ಸ್ ಇಲೆವನ್ ಪಂಜಾಬ್ ತಂಡವು 25 ಲಕ್ಷ ರುಪಾಯಿ ನೀಡಿ ಸರ್ಫರಾಜ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಮೊದಲ ಪಂದ್ಯದ ಮೊದಲ ಓವರಲ್ಲೇ ಹ್ಯಾಟ್ರಿಕ್ ವಿಕೆಟ್!
ಇಂದೋರ್: ಮಧ್ಯಪ್ರದೇಶದ ಎಡಗೈ ವೇಗದ ಬೌಲರ್ ರವಿ ಯಾದವ್, ತಮ್ಮ ಚೊಚ್ಚಲ ಪ್ರಥಮ ದರ್ಜೆ ಪಂದ್ಯದ ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್ ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಸೋಮವಾರ ಇಲ್ಲಿ ಉತ್ತರ ಪ್ರದೇಶ ವಿರುದ್ಧ ಆರಂಭಗೊಂಡ ರಣಜಿ ಪಂದ್ಯದಲ್ಲಿ ತಾವು ಎಸೆದ ಓವರ್‌ನ 3ನೇ ಎಸೆತದಲ್ಲಿ ಆರ್ಯನ್ ಜುಯಲ್, 4ನೇ ಎಸೆತದಲ್ಲಿ ಅಂಕಿತ್ ರಜಪೂತ್ ಹಾಗೂ 5ನೇ ಎಸೆತದಲ್ಲಿ ಸಮೀರ್ ರಿಜ್ವಿ ವಿಕೆಟ್ ಕಬಳಿಸಿ ಅಪರೂಪದ ದಾಖಲೆಗೆ ಪಾತ್ರರಾದರು.