
ನವದೆಹಲಿ: 2019-20ರ ರಣಜಿ ಟ್ರೋಫಿಯಲ್ಲಿ ನಾಕೌಟ್ ಹಂತಕ್ಕೆ ಪ್ರವೇಶಿಸಲು ಹೋರಾಟ ನಡೆಸುತ್ತಿರುವ ಕರ್ನಾಟಕ ತಂಡ, ರೈಲ್ವೇಸ್ ವಿರುದ್ಧ ಸೋಮವಾರ ಇಲ್ಲಿನ ಕರ್ನೈಲ್ ಸಿಂಗ್ ಕ್ರೀಡಾಂಗಣದಲ್ಲಿ ಆರಂಭಗೊಂಡ ಎಲೈಟ್ ‘ಎ’ ಗುಂಪಿನ ಪಂದ್ಯದಲ್ಲಿ ಮೊದಲ ದಿನವೇ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ, ಮೊದಲ ದಿನದಂತ್ಯಕ್ಕೆ ಎದುರಾಳಿ ಪಡೆಯನ್ನು 6 ವಿಕೆಟ್‌ಗೆ 98 ರನ್‌ಗಳಿಗೆ ನಿಯಂತ್ರಿಸಿದೆ.
ದಟ್ಟಮಂಜು, ಮಂದ ಬೆಳಕಿನ ಕಾರಣ ಪಂದ್ಯ ತಡವಾಗಿ ಆರಂಭಗೊಂಡಿತು. ಮಧ್ಯಾಹ್ನ 12.10ಕ್ಕೆ ಟಾಸ್ ನಡೆಸಲಾಯಿತು. 12.40ಕ್ಕೆ ಪಂದ್ಯ ಆರಂಭಗೊಂಡಿತು. ಮೊದಲ ಅವಧಿ ವ್ಯರ್ಥವಾದರೂ, ಕರ್ನಾಟಕ ಬೌಲರ್‌ಗಳು ರೈಲ್ವೇಸ್‌ಗೆ ಆರಂಭಿಕ ಆಘಾತ ನೀಡಿದರು.
ರಣಜಿ ಟ್ರೋಫಿ: ಇಂದಿನಿಂದ ಕರ್ನಾಟಕ- ರೈಲ್ವೇಸ್ ಫೈಟ್
ವೇಗದ ಬೌಲರ್‌ಗಳಾದ ಪ್ರತೀಕ್ ಜೈನ್ ಹಾಗೂ ಅಭಿಮನ್ಯು ಮಿಥುನ್ ದಾಳಿಗೆ ತತ್ತರಿಸಿದ ರೈಲ್ವೇಸ್ 29 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಆರಂಭಿಕ ಮೃನಾಲ್ ದೇವಧರ್(12), ಶೆರಾವತ್ (0), ಸೌರಭ್ ಸಿಂಗ್ (07), ಮಹೇಶ್ ರಾವತ್ (0), ದಿನೇಶ್ ಮೋರ್ (04) ಬೇಗನೆ ಔಟಾದರು. ಹರೀಶ್ ತ್ಯಾಗಿ (09) ಔಟಾದಾದ ತಂಡದ ಮೊತ್ತ 6 ವಿಕೆಟ್‌ಗೆ 45 ರನ್. ಚಹಾ ವಿರಾಮದ ವೇಳೆಗೆ 6 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿದ ರೈಲ್ವೇಸ್, 3ನೇ ಹಾಗೂ ಕೊನೆ ಅವಧಿಯಲ್ಲಿ ಚೇತರಿಕೆ ಕಂಡಿತು.
ನಾಯಕ ಅರಿಂದಾಮ್ ಘೋಷ್ ಅಜೇಯ 32 ಹಾಗೂ ಅವಿನಾಶ್ ಯಾದವ್ ಅಜೇಯ 29 ರನ್ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡರು. ಮೊದಲ ದಿನ ಕೇವಲ 49 ಓವರ್ ಆಟ ನಡೆಯಿತು. ವೇಗದ ಬೌಲರ್‌ಗಳಿಗೆ ಸ್ಥಳೀಯ ವಾತಾವರಣ ನೆರವು ನೀಡುತ್ತಿದ್ದರೂ, ಕರ್ನಾಟಕ ನಾಯಕ ಕರುಣ್ ನಾಯರ್ 3ನೇ ಅವಧಿಯಲ್ಲಿ ಸ್ಪಿನ್ನರ್‌ಗಳಿಂದ ಹೆಚ್ಚು ಓವರ್ ಬೌಲ್ ಮಾಡಿಸಿದ್ದು ಅಚ್ಚರಿಗೆ ಕಾರಣವಾಯಿತು.
ಮುಂದಿನ 3 ದಿನವೂ ದಟ್ಟಮಂಜು ಹಾಗೂ ಮಂದ ಬೆಳಕಿನ ಸಮಸ್ಯೆ ಇರಲಿದೆ. ಕರ್ನಾಟಕ ಸಾಧ್ಯವಾದಷ್ಟುಬೇಗ ರೈಲ್ವೇಸ್ ಪಡೆಯನ್ನು ಆಲೌಟ್ ಮಾಡಿ, ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಬೇಕಿದೆ.
ಸ್ಕೋರ್: ರೈಲ್ವೇಸ್: 98/6
(ಅರಿಂದಾಮ್ 32*, ಅವಿನಾಶ್ 29*, ಪ್ರತೀಕ್ 4-14, ಮಿಥುನ್ 2-18)
(ಮೊದಲ ದಿನದಂತ್ಯಕ್ಕೆ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.