
ಹುಬ್ಬಳ್ಳಿ(ಡಿ.21): ಎಲೈಟ್ ಬಿ ಗುಂಪಿನ ಕರ್ನಾಟಕ- ಉತ್ತರಪ್ರದೇಶ ನಡುವಿನ ರಣಜಿ ಪಂದ್ಯ ನಿರೀಕ್ಷೆಯಂತೆ ಶುಕ್ರವಾರ ಡ್ರಾನಲ್ಲಿ ಅಂತ್ಯಗೊಂಡಿದ್ದು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 200ನೇ ಗೆಲುವು ಸಾಧಿಸಲು ಕರ್ನಾಟಕ ಮತ್ತಷ್ಟುದಿನಗಳ ಕಾಲ ಕಾಯಬೇಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಹೋರಾಡಿ ಮುನ್ನಡೆ ಸಾಧಿಸಿದ್ದ ಕರ್ನಾಟಕ 3 ಅಂಕ ಸಂಪಾದಿಸಿದ್ದು, 2 ಪಂದ್ಯಗಳಿಂದ 9 ಅಂಕಗಳೊಂದಿಗೆ ಎಲೈಟ್ ‘ಎ’ ಹಾಗೂ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ.
ಇದನ್ನೂ ಓದಿ: ರಣಜಿ ಟ್ರೋಫಿ: ಕರ್ನಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ ಒದಗಿಸಿದ ಶ್ರೇಯಸ್!
3ನೇ ದಿನದ ಮುಕ್ತಾಯಕ್ಕೆ 2ನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 29 ರನ್ ಗಳಿಸಿದ್ದ ಉತ್ತರ ಪ್ರದೇಶ, 4ನೇ ಹಾಗೂ ಅಂತಿಮ ದಿನವಾದ ಶುಕ್ರವಾರ ಆರಂಭಿಕ ಬ್ಯಾಟ್ಸ್‌ಮನ್ ಅಲ್ಮಸ್ ಶೌಕತ್ ಅವರ ಆಕರ್ಷಕ ಶತಕದ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಪ್ರವಾಸಿ ತಂಡ ಇನ್ನಿಂಗ್ಸ್ ಡ್ರಾ ಮಾಡಿಕೊಳ್ಳುತ್ತಿದ್ದಂತೆ ಎರಡೂ ನಾಯಕರು ಸಮ್ಮತಿಸಿದ ಕಾರಣ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಇದನ್ನೂ ಓದಿ: ಸೋತ ಬಳಿಕ ಖ್ಯಾತೆ, ಕರ್ನಾಟಕ ವಿರುದ್ಧ ಜಗಳಕ್ಕೆ ನಿಂತ ತಮಿಳುನಾಡುಗೆ ತಕ್ಕ ಪಾಠ!
ಶುಕ್ರವಾರ, ಶೌಕತ್ ಹಾಗೂ 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದಿದ್ದ ಮಾಧವ್ ಕೌಶಿಕ್, ಕರ್ನಾಟಕ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಉತ್ತರ ಪ್ರದೇಶವನ್ನು ಬೇಗನೆ ಆಲೌಟ್ ಮಾಡಿ, ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿ ಅತಿಥೇಯ ತಂಡಕ್ಕೆ ನಿರಾಸೆ ಉಂಟಾಯಿತು. ಕೌಶಿಕ್ 83 ಎಸೆತಗಳನ್ನು ಎದುರಿಸಿ 45 ರನ್‌ಗೆ ಔಟಾದರು. ಬಳಿಕ, ಶೌಕತ್ ಜತೆಯಾದ ಅಕ್‌್ಷದೀಪ್ ನಾಥ್ ಸಹ ತಾಳ್ಮೆಯುತ ಆಟ ಪ್ರದರ್ಶಿಸಿದರು. 75 ಎಸೆತಗಳಲ್ಲಿ 38 ರನ್ ಗಳಿಸಿ, ಶ್ರೇಯಸ್ ಗೋಪಾಲ್‌ಗೆ ವಿಕೆಟ್ ನೀಡಿದರು.
210 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್‌ನೊಂದಿಗೆ ಅಜೇಯ 103 ರನ್ ಗಳಿಸಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 2ನೇ ಶತಕ ಬಾರಿಸಿ ಸಂಭ್ರಮಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಉಪಯುಕ್ತ 80 ರನ್ ಗಳಿಸಿದ್ದ ಮೊಹಮದ್ ಸೈಫ್, 2ನೇ ಇನ್ನಿಂಗ್ಸ್‌ನಲ್ಲಿ 44 ಎಸೆತಗಳಲ್ಲಿ 8 ರನ್ ಗಳಿಸಿ ಔಟಾಗದೆ ಉಳಿದರು. ಉತ್ತರ ಪ್ರದೇಶ 69.1 ಓವರ್ ಬ್ಯಾಟಿಂಗ್ ನಡೆಸಿ, ಸೋಲು ತಪ್ಪಿಸಿಕೊಂಡಿತು. ಆಲ್ರೌಂಡ್ ಪ್ರದರ್ಶನ ನೀಡಿದ ಕರ್ನಾಟಕದ ಅಭಿಮನ್ಯು ಮಿಥುನ್‌ಗೆ ಪಂದ್ಯ ಶ್ರೇಷ್ಠ ಗೌರವ ದೊರೆಯಿತು.
ಸ್ಕೋರ್: ಉತ್ತರ ಪ್ರದೇಶ 281 ಹಾಗೂ 204/3 ಡಿ. (ಶೌಕತ್ 103*, ಮಾಧವ್ 45, ಡೇವಿಡ್ 1-27), ಕರ್ನಾಟಕ 321
ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ಉತ್ತರ ಪ್ರದರ್ಶನ ನೀಡಿದ್ದಾರೆ. ಮಿಥುನ್‌ರಂತಹ ಹಿರಿಯ ಆಟಗಾರ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುತತಿದ್ದಾರೆ. ತಂಡ ಮುಂದಿನ ಪಂದ್ಯಗಳಲ್ಲಿ ಮತ್ತಷ್ಟುಉತ್ತಮ ಆಟವಾಡಲಿದೆ ಎನ್ನುವ ವಿಶ್ವಾಸವಿದೆ ಎಂದು ಕರ್ನಾಟಕ ಬೌಲಿಂಗ್ ಕೋಚ್ ಎಸ್ ಅರವಿಂದ್ ಹೇಳಿದರು.
ಡಿ.25ರಿಂದ ಮೈಸೂರಲ್ಲಿ ಹಿಮಾಚಲ ವಿರುದ್ಧ ಸೆಣಸು
ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವನ್ನು ಡಿ.25ರಿಂದ ಹಿಮಾಚಲ ಪ್ರದೇಶ ವಿರುದ್ಧ ಆಡಲಿದೆ. ಪಂದ್ಯ ಮೈಸೂರಿನಲ್ಲಿ ನಡೆಯಲಿದೆ. ಡಿ.22ರಂದು ವಿಂಡೀಸ್ ವಿರುದ್ಧದ ಏಕದಿನ ಸರಣಿ ಮುಕ್ತಾಯಗೊಳ್ಳಲಿದ್ದು, ಭಾರತ ತಂಡದಲ್ಲಿರುವ ಕೆ.ಎಲ್.ರಾಹುಲ್, ಮನೀಶ್ ಪಾಂಡೆ ಹಾಗೂ ಮಯಾಂಕ್ ಅಗರ್‌ವಾಲ್ ಕರ್ನಾಟಕ ತಂಡಕ್ಕೆ ವಾಪಸಾಗುವ ನಿರೀಕ್ಷೆ ಇದೆ. ಆಲ್ರೌಂಡರ್ ಪವನ್ ದೇಶಪಾಂಡೆ ಸಹ ಮುಂದಿನ ಪಂದ್ಯದ ವೇಳೆಗೆ ಗುಣಮುಖರಾಗುವ ಸಾಧ್ಯತೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.