
ಬೆಂಗಳೂರು(ಡಿ.22): ವಿದ್ವತ್ ಕಾವೇರಪ್ಪ ಹಾಗೂ ರೋಹಿತ್ ಮೋರೆ ಮಾರಕ ದಾಳಿ ಮತ್ತು ರವಿಕುಮಾರ್ ಸಮರ್ಥ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ 2022-23ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಮೊದಲ ಗೆಲುವು ದಾಖಲಿಸಿದೆ. ಪುದುಚೆರಿ ಎದುರು ಆಲ್ರೌಂಡ್ ಪ್ರದರ್ಶನ ತೋರಿದ ಕರ್ನಾಟಕ ತಂಡವು ಇನಿಂಗ್ಸ್ ಹಾಗೂ 7 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಎಲೈಟ್ 'ಸಿ' ಗುಂಪಿನಲ್ಲಿ ಕರ್ನಾಟಕ ತಂಡವು 10 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ.
ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 53 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಎರಡನೇ ಇನಿಂಗ್ಸ್ ಆರಂಭಿಸಿದ ಪುದುಚೆರಿ ತಂಡವು ಮೂರನೇ ದಿನ ತನ್ನ ಖಾತೆಗೆ 74 ರನ್ ಸೇರಿಸುವಷ್ಟರಲ್ಲಿ ಉಳಿದ 7 ವಿಕೆಟ್ ಕಳೆದುಕೊಳ್ಳುವ ಮೂಲಕ ಇನಿಂಗ್ಸ್ ಸೋಲು ಅನುಭವಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಪುದುಚೆರಿಯ ಯಾವೊಬ್ಬ ಬ್ಯಾಟರ್ ಕೂಡಾ 26+ ರನ್ ಬಾರಿಸಲು ಯಶಸ್ವಿಯಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಅಂಕಿತ್ ಶರ್ಮಾ 15 ಎಸೆತಗಳಲ್ಲಿ 6 ಬೌಂಡರಿ ಸಹಿತ 25 ರನ್ ಬಾರಿಸಿದರಾದರೂ ಉಳಿದ ಬ್ಯಾಟರ್‌ಗಳು ಉತ್ತಮ ಸಾಥ್ ನೀಡಲಿಲ್ಲ.
ಇನ್ನುಳಿದಂತೆ ಕರ್ನಾಟಕ ತಂಡದ ಪರ ರೋನಿತ್ ಮೋರೆ 36 ರನ್ ನೀಡಿ 4 ವಿಕೆಟ್ ಪಡೆದರೆ, ವಿಜಯ್‌ಕುಮಾರ್ ವೈಶಾಕ್ 3, ವಿದ್ವತ್ ಕಾವೇರಪ್ಪ 2 ಹಾಗೂ ಕೃಷ್ಣಪ್ಪ ಗೌತಮ್ ಒಂದು ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು.
Ranji Trophy: ಸಮರ್ಥ್ ಆಕರ್ಷಕ ಶತಕ, ಕರ್ನಾಟಕ ಗೆಲುವಿನತ್ತ ದಾಪುಗಾಲು
ಇದಕ್ಕೂ ಮೊದಲು ಪುದುಚೆರಿ ತಂಡವು ಮೊದಲು ಬ್ಯಾಟಿಂಗ್ ಮಾಡಿ 170 ರನ್ ಗಳಿಸಿ ಸರ್ವಪತನ ಕಂಡಿತ್ತು. ಕರ್ನಾಟಕ ಪರ ಶಿಸ್ತು ಬದ್ದ ದಾಳಿ ನಡೆಸಿದ ವಿದ್ವತ್ ಕಾವೇರಪ್ಪ 4 ಬಲಿ ಪಡೆದರೆ, ವಿ. ವೈಶಾಕ್ 3, ರೋನಿತ್ ಮೋರೆ 2 ಹಾಗೂ ಶ್ರೇಯಸ್ ಗೋಪಾಲ್ ಒಂದು ವಿಕೆಟ್ ಪಡೆದರು. ಇನ್ನು ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್‌್ಸನಲ್ಲಿ ಕರ್ನಾಟಕ 304 ರನ್‌ಗೆ ಆಲೌಟಾಗಿ, 134 ರನ್ ಲೀಡ್ ಪಡೆಯಿತು.
ಮೊದಲ ದಿನ 1 ವಿಕೆಟ್‌ಗೆ 111 ರನ್ ಗಳಿಸಿದ್ದ ರಾಜ್ಯ ತಂಡ ಬುಧವಾರವೂ ಉತ್ತಮ ಆಟವಾಡಿತು. ಸತತ 2ನೇ ಶತಕ ಸಿಡಿಸಿದ ಆರ್.ಸಮರ್ಥ್ 137 ರನ್‌ಗೆ ಔಟಾದರೆ, ಮನೀಶ್ ಪಾಂಡೆ 45, ನಿಕಿನ್ ಜೋಸ್ 30 ರನ್ ಕೊಡುಗೆ ನೀಡಿದರು. ತಂಡದ ಕೊನೆ 5 ವಿಕೆಟ್ 24 ರನ್‌ಗಳಿಗೆ ಪತನಗೊಂಡಿತು. ಅಂಕಿತ್ ಶರ್ಮಾ 6 ವಿಕೆಟ್ ಪಡೆದರು. ಪುದುಚೇರಿ ತನ್ನ 2ನೇ ಇನ್ನಿಂಗ್‌್ಸನಲ್ಲೂ ಬ್ಯಾಟಿಂಗ್ ವೈಫಲ್ಯಕ್ಕೊಳಗಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.