
ಮೀರ್‌ಪುರ(ಡಿ.22): ಟೀಂ ಇಂಡಿಯಾ ಅನುಭವಿ ವೇಗಿ ಜಯದೇವ್ ಉನಾದ್ಕತ್, ಬಾಂಗ್ಲಾದೇಶ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಜಯದೇವ್ ಉನಾದ್ಕತ್, ಭಾರತ ಪರ ಅತಿಹೆಚ್ಚು ಟೆಸ್ಟ್ ಪಂದ್ಯದಿಂದ ಹೊರಗುಳಿದು ಬಳಿಕ ಕಮ್‌ಬ್ಯಾಕ್ ಮಾಡಿದ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ಸೌರಾಷ್ಟ್ರ ಮೂಲದ ಎಡಗೈ ಮಧ್ಯಮ ವೇಗಿ ಜಯದೇವ್ ಉನಾದ್ಕತ್, 2010ರಲ್ಲಿ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಬರೋಬ್ಬರಿ 12 ವರ್ಷಗಳ ಬಳಿಕ ಉನಾದ್ಕತ್, ಇದೀಗ ಎರಡನೇ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ. ಅನುಭವಿ ಲೆಗ್‌ಸ್ಪಿನ್ನರ್ ಕುಲ್ದೀಪ್ ಯಾದವ್ ಬದಲಿಗೆ ಜಯದೇವ್ ಉನಾದ್ಕತ್, ಭಾರತ ಟೆಸ್ಟ್ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಛಟ್ಟೋಗ್ರಾಮನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕುಲ್ದೀಪ್ ಯಾದವ್ 113 ರನ್ ನೀಡಿ 8 ವಿಕೆಟ್ ಕಬಳಿಸಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಟೀಂ ಇಂಡಿಯಾ 118 ರನ್‌ಗಳ ಗೆಲುವು ದಾಖಲಿಸಿತ್ತು.
ಟೀಂ ಇಂಡಿಯಾ ಎದುರು ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ; ಉಭಯ ತಂಡದಲ್ಲೂ ಮಹತ್ವದ ಬದಲಾವಣೆ..!
ಜಯದೇವ್ ಉನಾದ್ಕತ್, 2010ರ ಡಿಸೆಂಬರ್ 16ರಂದು ದಕ್ಷಿಣ ಆಫ್ರಿಕಾ ವಿರುದ್ದ ಸೆಂಚುರಿಯನ್‌ನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು. ಇದಾದ 12 ವರ್ಷಗಳ ಬಳಿಕ ಉನಾದ್ಕತ್ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ಈ ಅವಧಿಯಲ್ಲಿ ಟೀಂ ಇಂಡಿಯಾ 118 ಟೆಸ್ಟ್ ಪಂದ್ಯಗಳನ್ನಾಡಿದ್ದು, ಅತಿಹೆಚ್ಚು ಟೆಸ್ಟ್ ಪಂದ್ಯಗಳಿಂದ ಹೊರಗುಳಿದ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ಕ್ರಿಕೆಟಿಗ ಎನ್ನುವ ಹಿರಿಮೆಗೆ ಇದೀಗ ಜಯದೇವ್ ಉನಾದ್ಕತ್ ಪಾತ್ರರಾಗಿದ್ದಾರೆ.
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಮಿಸ್ ಮಾಡಿಕೊಂಡ ದಾಖಲೆ ಇಂಗ್ಲೆಂಡ್‌ನ ಗೆರಾತ್ ಬ್ಯಾಟಿ 142 ಟೆಸ್ಟ್ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುವ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಬಾಂಗ್ಲಾದೇಶ:
ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡವು ಆರಂಭಿಕ ಆಘಾತ ಅನುಭವಿಸಿತು. 39 ರನ್ ಗಳಿಸುವಷ್ಟರಲ್ಲಿ ಆರಂಭಿರಿಬ್ಬರು ಪೆವಿಲಿಯನ್ ಸೇರಿದ್ದರು. ಮೊದಲ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದ ಝಾಕಿರ್ ಹಸನ್ ಕೇವಲ 15 ರನ್ ಬಾರಿಸಿ ಜಯದೇವ್ ಉನಾದ್ಕತ್‌ಗೆ ವಿಕೆಟ್ ಒಪ್ಪಿಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಉನಾದ್ಕತ್ ಗಳಿಸಿದ ಮೊದಲ ವಿಕೆಟ್ ಎನಿಸಿಕೊಂಡಿತು. ಇನ್ನು ಮರು ಓವರ್‌ನಲ್ಲೇ ನಜ್ಮುಲ್ ಹೊಸೈನ್ ಶಾಂಟೋ(24) ಅವರು ರವಿಚಂದ್ರನ್ ಅಶ್ವಿನ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.
ಇದಾದ ಬಳಿಕ ಮೂರನೇ ವಿಕೆಟ್‌ಗೆ ಜತೆಯಾದ ನಾಯಕ ಶಕೀಬ್ ಅಲ್ ಹಸನ್ ಹಾಗೂ ಮೊಮಿನುಲ್ ಹಕ್ ತಂಡಕ್ಕೆ ಆಸರೆಯಾಗಿದ್ದಾರೆ. ಮೊದಲ ದಿನದಾಟದ ಲಂಚ್ ಬ್ರೇಕ್ ವೇಳೆಗೆ ಬಾಂಗ್ಲಾದೇಶ ತಂಡವು 2 ವಿಕೆಟ್ ನಷ್ಟಕ್ಕೆ 82 ರನ್ ಬಾರಿಸಿದೆ. ಶಕೀಬ್ ಅಲ್ ಹಸನ್ 16 ರನ್ ಬಾರಿಸಿದರೆ, ಮೊಮಿನುಲ್ ಹಕ್ 23 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.