* ರಣಜಿ ಟ್ರೋಫಿ ಟೂರ್ನಿಯಲ್ಲಿಂದು ಕರ್ನಾಟಕ-ಗೋವಾ ಮುಖಾಮುಖಿ
* ಗೋವಾ ರಾಜಧಾನಿ ಪಣಜಿಯಲ್ಲಿ ನಡೆಯಲಿರುವ ಪಂದ್ಯ
* ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿ ಮಯಾಂಕ್ ಅಗರ್‌ವಾಲ್ ಪಡೆ
ಪಣಜಿ(ಡಿ.27): 2022-23ರ ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಕರ್ನಾಟಕ ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿದ್ದು, ಮಂಗಳವಾರದಿಂದ ಆರಂಭವಾಗಲಿರುವ ಪಂದ್ಯದಲ್ಲಿ ಗೋವಾ ವಿರುದ್ಧ ಕಣಕ್ಕಿಳಿಯಲಿದೆ. ಆರಂಭಿಕ 2 ಪಂದ್ಯಗಳನ್ನು ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ್ದ ರಾಜ್ಯ ತಂಡ, ಟೂರ್ನಿಯಲ್ಲಿ ಮೊದಲ ಬಾರಿ ತವರಿನಾಚೆ ಕಣಕ್ಕಿಳಿಯಲಿದೆ. ಪಂದ್ಯಕ್ಕೆ ಪೊರ್ವೊರಿಮ್‌ನಲ್ಲಿರುವ ಗೋವಾ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಆರಂಭಿಕ ಪಂದ್ಯದಲ್ಲಿ ಸರ್ವಿಸಸ್ ವಿರುದ್ಧ ಡ್ರಾಗೆ ತೃಪ್ತಿಪಟ್ಟಿದ್ದ ರಾಜ್ಯ ತಂಡ, 2ನೇ ಪಂದ್ಯದಲ್ಲಿ ಪುದುಚೇರಿ ವಿರುದ್ಧ ಇನ್ನಿಂಗ್‌್ಸ ಹಾಗೂ 7 ರನ್‌ಗಳ ಭರ್ಜರಿ ಗೆಲುವ ಸಾಧಿಸಿತ್ತು. ಇದರೊಂದಿಗೆ ಬೋನಸ್ ಅಂಕ ಪಡೆದ ಕರ್ನಾಟಕ ಸದ್ಯ ಎಲೈಟ್ ‘ಸಿ’ ಗುಂಪಿನಲ್ಲಿ 10 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಆರಂಭಿಕ ಬ್ಯಾಟರ್ ಆರ್.ಸಮಥ್‌ರ್ ಆಡಿದ ಎರಡೂ ಪಂದ್ಯಗಳಲ್ಲಿ ಶತಕ ಸಿಡಿಸಿದ್ದು, ಅಭೂತಪೂರ್ವ ಲಯ ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ. ನಾಯಕ ಮಯಾಂಕ್ 2 ಅರ್ಧಶತಕ ಬಾರಿಸಿದ್ದರೆ, ಮನೀಶ್ ಪಾಂಡೆ ಇನ್ನಷ್ಟೇ ದೊಡ್ಡ ಇನ್ನಿಂಗ್‌್ಸ ಆಡಬೇಕಿದೆ. ಯುವ ತಾರೆಗಳಾದ ನಿಕಿನ್ ಜೋಸ್, ವಿಶಾಲ್ ಮೇಲೂ ಭಾರೀ ನಿರೀಕ್ಷೆ ಇದೆ.
ಇನ್ನು ತ್ರಿವಳಿ ವೇಗಿಗಳಾದ ರೋನಿತ್ ಮೋರೆ, ವಿದ್ವತ್ ಕಾವೇರಪ್ಪ, ವೈಶಾಖ್ ಎದುರಾಳಿ ಗೋವಾ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಎದುರು ನೋಡುತ್ತಿದ್ದಾರೆ. ಮತ್ತೊಂದೆಡೆ ಗೋವಾ ಆಡಿರುವ ಎರಡೂ ಪಂದ್ಯಗಳಲ್ಲಿ ರಾಜಸ್ಥಾನ, ಜಾರ್ಖಂಡ್ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದು, ಮೊದಲ ಗೆಲುವಿಗಾಗಿ ಕಾತರಿಸುತ್ತಿದೆ.
ಸಚಿನ್ ಪುತ್ರನ ಸವಾಲು: ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಗೋವಾ ತಂಡದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರೆನಿಸಿದ್ದು, ಅವರ ಸವಾಲನ್ನು ರಾಜ್ಯದ ಬ್ಯಾಟರ್‌ಗಳು ಎದುರಿಸಿದ್ದಾರೆ. ಜೂನಿಯರ್ ತೆಂಡುಲ್ಕರ್ 2 ಇನ್ನಿಂಗ್ಸ್‌ಗಳಲ್ಲಿ 4 ವಿಕೆಟ್ ಕಿತ್ತಿದ್ದಾರೆ.
ಪಂದ್ಯ: ಬೆಳಗ್ಗೆ 9.30ಕ್ಕೆ
ಅಂಡರ್-15 ಮಹಿಳಾ ಏಕದಿನ: ರಾಜ್ಯಕ್ಕೆ ಜಯ
ರಾಜ್‌ಕೋಟ್: ಚೊಚ್ಚಲ ಆವೃತ್ತಿಯ ರಾಷ್ಟ್ರೀಯ ಮಹಿಳಾ ಅಂಡರ್-15 ಏಕದಿನ ಟೂರ್ನಿಯಲ್ಲಿ ಕರ್ನಾಟಕ ಶುಭಾರಂಭ ಮಾಡಿದೆ. ಸೋಮವಾರ ರಾಜ್‌ಕೋಟ್‌ನಲ್ಲಿ ನಡೆದ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ರಾಜ್ಯ ತಂಡ 9 ವಿಕೆಟ್ ಭರ್ಜರಿ ಜಯಗಳಿಸಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟರಾಜಸ್ಥಾನ ನಿಗದಿತ 35 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 96 ರನ್ ಕಲೆಹಾಕಿತು.
ರಾಜ್ಯದ ವಂದಿತಾ ರಾವ್ 10 ರನ್‌ಗೆ 4 ವಿಕೆಟ್ ಕಿತ್ತರೆ, ಸೈನಾ ಕಪೂರ್ 2 ವಿಕೆಟ್ ಪಡೆದರು. ಸುಲಭ ಗುರಿ ಬೆನ್ನತ್ತಿದ ರಾಜ್ಯ ತಂಡ 18 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ ಜಯಗಳಿಸಿತು. ಭಾವಿಕಾ ರೆಡ್ಡಿ 41, ಲಾವಣ್ಯ ಔಟಾಗದೆ 38 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ರಾಜ್ಯ ತಂಡ 2ನೇ ಪಂದ್ಯದಲ್ಲಿ ಬುಧವಾರ ಅಸ್ಸಾಂ ವಿರುದ್ಧ ಆಡಲಿದೆ.