
ರಾಜ್‌ಕೋಟ್(ಮಾ.10): ರಣಜಿ ಟ್ರೋಫಿ ಫೈನಲ್ ಪಂದ್ಯ ಸೋಮವಾರದಿಂದ ಆರಂಭಗೊಂಡಿದ್ದು ಸೌರಾಷ್ಟ್ರ ವಿರುದ್ಧ ಬಂಗಾಳ ಮೊದಲ ದಿನದ ಗೌರವ ಸಂಪಾದಿಸಿದೆ. ಮೊದಲ ದಿನದಂತ್ಯಕ್ಕೆ ಸೌರಾಷ್ಟ್ರ 5 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಲು ಹೋರಾಟ ನಡೆಸುತ್ತಿದೆ.
ಅವಿ ಬರೋಟ್ (54) ಹಾಗೂ ವಿಶ್ವರಾಜ್ ಜಡೇಜಾ (54) ಅರ್ಧಶತಕಗಳನ್ನು ಬಾರಿಸಿದ ಹೊರತಾಗಿಯೂ ಸೌರಾಷ್ಟ್ರ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ದಿನದಾಟದ ಕೊನೆ ಅವಧಿಯಲ್ಲಿ ವೇಗಿ ಆಕಾಶ್ ದೀಪ್ ಉತ್ತಮ ಪ್ರದರ್ಶನ ತೋರಿ ಬಂಗಾಳಕ್ಕೆ ನೆರವಾದರು. ಹಾರ್ವಿಕ್ ದೇಸಾಯಿ (38) ಹಾಗೂ ಅವಿ ಬರೋಟ್ ಮೊದಲ ವಿಕೆಟ್‌ಗೆ 82 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ ಪ್ರಮುಖ ಬ್ಯಾಟ್ಸ್‌ಮನ್ ಶೆಲ್ಡನ್ ಜಾಕ್ಸನ್ (14) ವೈಫಲ್ಯ ಕಂಡಿದ್ದು ಸೌರಾಷ್ಟ್ರಕ್ಕೆ ಹಿನ್ನಡೆಯಾಯಿತು.
ರಣಜಿ ಟ್ರೋಫಿ ಫೈನಲ್: ಪ್ರಶಸ್ತಿಗಾಗಿ ಸೌರಾಷ್ಟ್ರ vs ಬಂಗಾಳ ಫೈಟ್
ಪೂಜಾರಗೆ ಗಂಟಲು ನೋವು!: ನ್ಯೂಜಿಲೆಂಡ್ ಸರಣಿ ಮುಗಿಸಿ ತವರಿಗೆ ವಾಪಸಾದ ಚೇತೇಶ್ವರ್ ಪೂಜಾರ, ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ಪರ ಕಣಕ್ಕಿಳಿದಿದ್ದಾರೆ. ಸಾಮಾನ್ಯವಾಗಿ 3ನೇ ಇಲ್ಲವೇ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಪೂಜಾರ, ಸೋಮವಾರ 6ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದರು. ಗಂಟಲು ನೋವಿನಿಂದ ಬಳಲುತ್ತಿರುವ ಅವರು 24 ಎಸೆತಗಳಲ್ಲಿ 5 ರನ್ ಗಳಿಸಿ, ನಿವೃತ್ತಿ ಹೊಂದಿದರು. 2ನೇ ದಿನವಾದ ಮಂಗಳವಾರ ಪೂಜಾರ ಬ್ಯಾಟ್ ಮಾಡುವ ನಿರೀಕ್ಷೆ ಇದೆ ಎಂದು ಸೌರಾಷ್ಟ್ರ ನಾಯಕ ಜಯದೇವ್ ಉನಾದ್ಕತ್ ತಿಳಿಸಿದ್ದಾರೆ.
ಹಿರಿಯ ಬ್ಯಾಟ್ಸ್‌ಮನ್ ಅರ್ಪಿತ್ ವಾಸವಾಡ (29) ಕ್ರೀಸ್ ಕಾಯ್ದುಕೊಂಡಿದ್ದಾರೆ. ಬಂಗಾಳ ಪರ ಆಕಾಶ್ ದೀಪ್ 3, ಇಶಾನ್ ಪೊರೆಲ್ ಹಾಗೂ ಶಾಬಾಜ್ ಅಹ್ಮದ್ ತಲಾ 1 ವಿಕೆಟ್ ಕಿತ್ತರು.
ಮಂಗಳವಾರ ಮೊದಲ ಅವಧಿ ನಿರ್ಣಾಯಕ ಎನಿಸಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಬೇಕಿದ್ದರೆ ಸೌರಾಷ್ಟ್ರ ದೊಡ್ಡ ಮೊತ್ತ ಕಲೆಹಾಕಬೇಕಿದೆ. ಪೂಜಾರ ಕಣಕ್ಕಿಳಿದು ದೊಡ್ಡ ಇನ್ನಿಂಗ್ಸ್ ಆಡಿದರೆ ಬಂಗಾಳಕ್ಕೆ ಖಂಡಿತವಾಗಿಯೂ ಸಂಕಷ್ಟಕ್ಕೆ ಸಿಲುಕಲಿದೆ.
ಸ್ಕೋರ್: ಸೌರಾಷ್ಟ್ರ: 206/5
(ಅವಿ 54, ವಿಶ್ವರಾಜ್ 54, ಹಾರ್ವಿಕ್ 38, ಆಕಾಶ್ ದೀಪ್ 3-41)
(ಮೊದಲ ದಿನದಂತ್ಯಕ್ಕೆ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.