ರಣಜಿ ಟ್ರೋಫಿ: ಗೌತಮ್‌ ಆಲ್ರೌಂಡ್‌ ಶೋ!

By Kannadaprabha NewsFirst Published Dec 11, 2019, 8:43 AM IST
Highlights

ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಆಕರ್ಷಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡವು ಎರಡನೇ ದಿನ ತಮಿಳುನಾಡು ಎದುರು ಪ್ರಬಲ ಪೈಪೋಟಿ ನೀಡಿದೆ. ಇದೀಗ ಮೂರನೇ ದಿನ ಯಾರ ಕೈ ಮೇಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.

ದಿಂಡಿಗಲ್‌(ಡಿ.11): ಕೆ.ಗೌತಮ್‌ರ ಆಲ್ರೌಂಡ್‌ ಪ್ರದರ್ಶನದ ನೆರವಿನಿಂದ ತಮಿಳುನಾಡು ವಿರುದ್ಧದ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 336 ರನ್‌ ಕಲೆಹಾಕಿದ ಕರ್ನಾಟಕ, 2ನೇ ದಿನದಂತ್ಯಕ್ಕೆ ತಮಿಳುನಾಡು ತಂಡವನ್ನು 4 ವಿಕೆಟ್‌ ನಷ್ಟಕ್ಕೆ 165 ರನ್‌ಗಳಿಗೆ ನಿಯಂತ್ರಿಸಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದು ಕನಿಷ್ಠ 3 ಅಂಕ ಖಚಿತಪಡಿಸಿಕೊಳ್ಳಲು ಎದುರು ನೋಡುತ್ತಿದೆ. ತಮಿಳುನಾಡು ಇನ್ನು 171 ರನ್‌ಗಳ ಹಿನ್ನಡೆಯಲ್ಲಿದ್ದು, 3ನೇ ದಿನವಾದ ಬುಧವಾರದ ಮೊದಲ ಅವಧಿ ಪಂದ್ಯದ ಫಲಿತಾಂಶ ನಿರ್ಧರಿಸಲಿದೆ. ದಿನೇಶ್‌ ಕಾರ್ತಿಕ್‌ 23 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದು, ಅವರ ಆಟದ ಮೇಲೆ ಫಲಿತಾಂಶ ನಿಂತಿದೆ.

ರಣಜಿ ಟ್ರೋಫಿ: ಪಡಿಕ್ಕಲ್-ಪವನ್ ಫಿಫ್ಟಿ, ಬೃಹತ್ ಮೊತ್ತದತ್ತ ಕರ್ನಾಟಕ

ಅಭಿನವ್‌ ಮುಕುಂದ್‌ (47) ಹಾಗೂ ಮುರಳಿ ವಿಜಯ್‌ (32) ಮೊದಲ ವಿಕೆಟ್‌ಗೆ 81 ರನ್‌ ಜೊತೆಯಾಟವಾಡಿ ತಮಿಳುನಾಡಿಗೆ ಉತ್ತಮ ಆರಂಭ ಒದಗಿಸಿದರು. ಆದರೆ ಗೌತಮ್‌, ಆತಿಥೇಯರಿಗೆ ಆಘಾತ ನೀಡಿದರು. 106 ರನ್‌ ಗಳಿಸುವಷ್ಟರಲ್ಲಿ ತಮಿಳುನಾಡು 3 ವಿಕೆಟ್‌ ಕಳೆದುಕೊಂಡಿತು. ನಾಯಕ ವಿಜಯ್‌ ಶಂಕರ್‌ (12) ರನ್‌ ಗಳಿಸಿ ಔಟಾದರು. 37 ರನ್‌ ಗಳಿಸಿದ ಬಾಬಾ ಅಪರಾಜಿತ್‌ಗೆ ರೋನಿತ್‌ ಮೊರೆ ಪೆವಿಲಿಯನ್‌ ದಾರಿ ತೋರಿಸಿದರು. ಕಾರ್ತಿಕ್‌ ಹಾಗೂ ಜಗದೀಶನ್‌ 3ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. 3 ವಿಕೆಟ್‌ ಕಬಳಿಸಿದ ಗೌತಮ್‌, ಬುಧವಾರ ಮತ್ತಷ್ಟು ಯಶಸ್ಸು ಕಾಣುವ ವಿಶ್ವಾಸದಲ್ಲಿದ್ದಾರೆ.

ನಿರ್ಣಾಯಕ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ..?

ಗೌತಮ್‌ ಸ್ಫೋಟಕ ಆಟ: ಮೊದಲ ದಿನದಂತ್ಯಕ್ಕೆ 6 ವಿಕೆಟ್‌ ನಷ್ಟಕ್ಕೆ 259 ರನ್‌ ಗಳಿಸಿದ್ದ ಕರ್ನಾಟಕಕ್ಕೆ 2ನೇ ದಿನವಾದ ಮಂಗಳವಾರ ಗೌತಮ್‌ ಆಸರೆಯಾದರು. 35 ರನ್‌ ಗಳಿಸಿ ಶ್ರೇಯಸ್‌ ಗೋಪಾಲ್‌ ಔಟಾದ ಬಳಿಕ, ಗೌತಮ್‌ ಅಬ್ಬರಿಸಿದರು. 39 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ ಗೌತಮ್‌ 51 ರನ್‌ ತಂಡದ ಮೊತ್ತ 300ರ ಗಡಿ ದಾಟಲು ನೆರವಾದರು. ಸತತ 2 ಎಸೆತಗಳಲ್ಲಿ ಡೇವಿಡ್‌ ಮಥಾಯಿಸ್‌ ಹಾಗೂ ರೋನಿತ್‌ ಮೋರೆ ವಿಕೆಟ್‌ ಕಬಳಿಸಿದ ತಾರಾ ಸ್ಪಿನ್ನರ್‌ ಆರ್‌.ಅಶ್ವಿನ್‌ಗೆ ವಿ.ಕೌಶಿಕ್‌ ಹ್ಯಾಟ್ರಿಕ್‌ ಕೈತಪ್ಪುವಂತೆ ಮಾಡಿದರು. ಆದರೂ ಕರ್ನಾಟಕದ ಇನ್ನಿಂಗ್ಸ್‌ ಹೆಚ್ಚು ಕಾಲ ಮುಂದುವರಿಯಲಿಲ್ಲ. 110.4 ಓವರಲ್ಲಿ ಕರ್ನಾಟಕ, ಮೊದಲ ಇನ್ನಿಂಗ್ಸ್‌ ಮುಕ್ತಾಯಗೊಳಿಸಿತು.

ಸ್ಕೋರ್‌:

ಕರ್ನಾಟಕ ಮೊದಲ ಇನ್ನಿಂಗ್ಸ್‌ 336/10 
(ಗೌತಮ್‌ 51, ಶ್ರೇಯಸ್‌ 35, ಆರ್‌.ಅಶ್ವಿನ್‌ 4-79), 

ತಮಿಳುನಾಡು ಮೊದಲ ಇನ್ನಿಂಗ್ಸ್‌ (2ನೇ ದಿನದಂತ್ಯಕ್ಕೆ) 165/4 
(ಮುಕುಂದ್‌ 47, ಅಪರಾಜಿತ್‌ 37, ಕಾರ್ತಿಕ್‌ ಅಜೇಯ 23, ಗೌತಮ್‌ 3-61)
 

click me!