ಅಂಡರ್ 19 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಸಜ್ಜುಗೊಳಿಸುವ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ಟೈಗರ್ ಸಫಾರಿ ಮತ್ತು ಟ್ರೆಕ್ಕಿಂಗ್ ನಡೆಸಲಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ(ಡಿ.10): ಅಂಡರ್ 19 ವಿಶ್ವಕಪ್‌ಗೆ ತೆರಳಲಿರುವ ಭಾರತ ಕ್ರಿಕೆಟ್ ತಂಡವನ್ನು ಸಂಘಟಿತಗೊಳಿಸುವ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ಟೈಗರ್ ಸಫಾರಿ ಮತ್ತು ಟ್ರೆಕ್ಕಿಂಗ್ ನಡೆಸಲಾಗಿದೆ.
ಮೈಸೂರು ಜಿಲ್ಲೆಯ ನಾಗರಹೊಳೆಯ ರಾಷ್ಟ್ರೀಯ ಉದ್ಯಾನವನ, ಕಬಿನಿ ಅರಣ್ಯ ಪ್ರದೇಶದಲ್ಲಿ ಭಾರತ ಅಂಡರ್ 19 ಕ್ರಿಕೆಟ್ ತಂಡ 2 ದಿನಗಳ ಕಾಲ ಟ್ರೆಕ್ಕಿಂಗ್ ಮಾಡಿದೆ. ತಂಡದ ಅಭ್ಯಾಸದ ಒಂದು ಭಾಗ ಇದಾಗಿದೆ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ) ಸಿಒಒ ಟಫನ್ ಘೋಶ್ ಹೇಳಿದ್ದಾರೆ. ಭಾರತ ಅಂಡರ್ 19 ತಂಡದ ಸಲಹೆಗಾರರಾಗಿರುವ, ಎನ್‌ಸಿಎ ನಿರ್ದೇಶಕ ರಾಹುಲ್ ದ್ರಾವಿಡ್ ಅವರ ನಿರ್ದೇಶನದಂತೆ ತಂಡವನ್ನು ಟ್ರೆಕ್ಕಿಂಗ್‌ಗಾಗಿ ಕರೆದುಕೊಂಡು ಹೋಗಲಾಗಿತ್ತು ಎಂದು ಟಫನ್ ಘೋಶ್ ಹೇಳಿದ್ದಾರೆ. ಈ ವೇಳೆ ಸಾಬಾ ಕರೀಂ ಕೂಡ ಉಪಸ್ಥಿತರಿದ್ದರು.
ದೇಶದ ವಿವಿಧ ನಗರಗಳಿಂದ ಅಂಡರ್ 19 ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರೆಲ್ಲಾ ಒಟ್ಟಾಗಿ ತಂಡ ಸಂಯೋಜನೆ ನಡೆಸುವುದಕ್ಕಾಗಿ ಈ ಯೋಜನೆ ರೂಪಿಸಲಾಗಿತ್ತು. ಇದರಿಂದಾಗಿ ಆಟಗಾರರ ನಡುವೆ ಉತ್ತಮ ಬಾಂಧವ್ಯ ರೂಪುಗೊಳ್ಳಲಿದೆ. ಇದು ತಂಡವನ್ನು ಬಲಿಷ್ಠಗೊಳ್ಳಲು ಸಹಕಾರಿಯಾಗಲಿದೆ ಎಂದು ಟಫನ್ ಘೋಶ್ ಹೇಳಿದ್ದಾರೆ.
ಅಂಡರ್ 19 ವಿಶ್ವಕಪ್ ತಂಡವನ್ನು ಪ್ರಿಯಂ ಗರ್ಗ್ ಮುನ್ನಡೆಸಲಿದ್ದು, ಕರ್ನಾಟಕದ ಶುಭಾಂಗ್ ಹೆಗ್ಡೆ ಹಾಗೂ ವಿದ್ಯಾಧರ್ ಪಾಟೀಲ್ ಸ್ಥಾನ ಪಡೆದಿದ್ದಾರೆ. ಅಂಡರ್-19 ವಿಶ್ವಕಪ್ ಟೂರ್ನಿಯು ಜನವರಿ 17ರಿಂದ ಫೆಬ್ರವರಿ 9ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ.