Ranji Trophy: ಮೊದಲ ಇನ್ನಿಂಗ್ಸ್ ಮುನ್ನಡೆಗಾಗಿ ಕರ್ನಾಟಕ-ಸೌರಾಷ್ಟ್ರ ಜಿದ್ದಾಜಿದ್ದಿನ ಫೈಟ್

Published : Oct 17, 2025, 08:17 AM IST
Shreyas Gopal

ಸಾರಾಂಶ

ಸೌರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 372 ರನ್ ಗಳಿಸಿದೆ. ಇದಕ್ಕೆ ಉತ್ತರವಾಗಿ ಸೌರಾಷ್ಟ್ರ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗೆ 200 ರನ್ ಗಳಿಸಿ ಹಿನ್ನಡೆಯಲ್ಲಿದ್ದು, ಪಂದ್ಯವು ಮೊದಲ ಇನ್ನಿಂಗ್ಸ್ ಮುನ್ನಡೆಗಾಗಿ ತೀವ್ರ ಹೋರಾಟಕ್ಕೆ ಸಾಕ್ಷಿಯಾಗಿದೆ.  

ರಾಜ್‌ಕೋಟ್: ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆಗಾಗಿ ಕರ್ನಾಟಕ ಹೋರಾಟ ನಡೆಸುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 372 ರನ್‌ಗೆ ಆಲೌಟ್ ಆದ ಕರ್ನಾಟಕ, ಬಳಿಕ ಬೌಲಿಂಗ್‌ನಲ್ಲಿ ಆರಂಭಿಕ ಯಶಸ್ಸು ಸಾಧಿಸಲು ವಿಫಲವಾಯಿತು. ಆದರೆ, ದಿನದಾಟದ ಅಂತ್ಯದ ವೇಳೆಗೆ 4 ವಿಕೆಟ್ ಕಬಳಿಸಿ, ಮುನ್ನಡೆ ಸಾಧಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಸೌರಾಷ್ಟ್ರ 4 ವಿಕೆಟ್‌ಗೆ 200 ರನ್ ಗಳಿಸಿದ್ದು, ಇನ್ನೂ 172 ರನ್ ಹಿನ್ನಡೆಯಲ್ಲಿದೆ. ಎರಡೂ ತಂಡಗಳು ಮೊದಲು ಇನ್ನಿಂಗ್ಸ್ ಮುನ್ನಡೆ ಸಾಧಿಸಲು ಪ್ರಯತ್ನಿಸಲಿದ್ದು, ಆ ಬಳಿಕ ಗೆಲುವಿನ ಬಗ್ಗೆ ಯೋಚಿಸಲಿವೆ. ಮೊದಲ ದಿನ 5 ವಿಕೆಟ್‌ಗೆ 295 ರನ್ ಗಳಿಸಿದ್ದ ಕರ್ನಾಟಕ, 2ನೇ ದಿನ ಆ ಮೊತ್ತಕ್ಕೆ ಕೇವಲ 77 ರನ್ ಸೇರಿಸಲು ಶಕ್ತವಾಯಿತು. ಮೊದಲ ದಿನ 66 ರನ್ ಗಳಿಸಿದ್ದ ಸ್ಮರಣ್, ಗುರುವಾರ ಆ ಮೊತ್ತಕ್ಕೆ 11 ರನ್ ಸೇರಿಸಿ ಔಟಾದರು. ಶ್ರೇಯಸ್ ಗೋಪಾಲ್ (95 ಎಸೆತದಲ್ಲಿ 56 ಹಾಗೂ ಚೊಚ್ಚಲ ಪಂದ್ಯವಾಡುತ್ತಿರುವ ಶಿಖರ್ ಶೆಟ್ಟಿ (41) ಉಪಯುಕ್ತ ಕೊಡುಗೆ ನೀಡಿ ತಂಡದ ಮೊತ್ತವನ್ನು 372ಕ್ಕೆ ಹೆಚ್ಚಿಸಿದರು.

ಸೌರಾಷ್ಟ್ರ ಉತ್ತಮ ಆರಂಭ

ಸೌರಾಷ್ಟ್ರ ಅತ್ಯುತ್ತಮ ಆರಂಭ ಪಡೆಯಿತು.ಹಾರ್ವಿಕ್ ದೇಸಾಯಿ (41) ಹಾಗೂ ಚಿರಾಗ್ ಜಾನಿ (90) ಮೊದಲ ವಿಕೆಟ್‌ಗೆ 140 ರನ್ ಕಲೆಹಾಕಿದರು. ಆದರೆ 11 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡ ಸೌರಾಷ್ಟ್ರ ತಂಡದ ಮೊತ್ತ 171 ರನ್ 4ನೇ ವಿಕೆಟ್ ಪತನಗೊಂಡಿತು. ಆದರೆ ಅನುಭವಿಗಳಾದ ಅರ್ಪಿತ್ ವಸುವಾಡ ಔಟಾಗದೆ 12, ಪ್ರೇರಕ್ ಮಂಕಡ್ ಔಟಾಗದೆ 20 ರನ್ ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡರು. ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದ ಶ್ರೇಯಸ್ ಗೋಪಾಲ್, ಬೌಲಿಂಗ್‌ನಲ್ಲೂ ಮಿಂಚಿ 3 ವಿಕೆಟ್ ಕಿತ್ತರು.

ಸ್ಕೋರ್:

ಕರ್ನಾಟಕ 372/10 (ಪಡಿಕ್ಕಲ್ 96, ಸ್ಮರಣ್ 77, ಕರುಣ್ 73, ಶ್ರೇಯಸ್ 56, ಶಿಖರ್ 41, ಧರ್ಮೇಂದ್ರ ಜಡೇಜಾ 7-124)

ಸೌರಾಷ್ಟ್ರ 200/4 (ಚಿರಾಗ್ 90, ಹಾರ್ವಿಕ್ 41, ಶ್ರೇಯಸ್ 3-51, ಮೊಕ್ಸಿನ್ 1-38)

ಪರ್ತ್‌ನಲ್ಲಿ ಭಾರತ ಅಭ್ಯಾಸ

ಪರ್ತ್: ಆಸ್ಟ್ರೇಲಿಯಾ ತಲುಪುತ್ತಿದ್ದಂತೆ ಭಾರತ ತಂಡ ಏಕದಿನ ಸರಣಿಗೆ ಅಭ್ಯಾಸ ಆರಂಭಿಸಿದೆ. ಗುರುವಾರ ಟೀಂ ಇಂಡಿಯಾ ಆಟಗಾರರು ನೆಟ್ಸ್‌ನಲ್ಲಿ ಬೆವರಿಳಿಸಿದರು. ಆಸ್ಟ್ರೇಲಿಯಾ ನೆಲದಲ್ಲಿ ಬಹುತೇಕ ಕೊನೆಯ ಬಾರಿಗೆ ಅಂ. ರಾ. ಪಂದ್ಯವನ್ನಾಡಲಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಮೇಲೆ ಎಲ್ಲರ ಕಣ್ಣಿದ್ದು, ಇಬ್ಬರು ಅಭ್ಯಾಸ ನಡೆಸುವುದನ್ನು ನೋಡಲು ನೂರಾರು ಅಭಿಮಾನಿಗಳು ನೆರೆದಿದ್ದರು.

ರೋಹಿತ್, ಕೊಹ್ಲಿ ಇಬ್ಬರೂ ಅರ್ಧ ಗಂಟೆಗೂ ಹೆಚ್ಚು ಕಾಲ ನೆಟ್ಸ್‌ನಲ್ಲಿ ಬ್ಯಾಟ್ ಮಾಡಿದರು. ಫೀಲ್ಡಿಂಗ್ ಅಭ್ಯಾಸದಲ್ಲಿ ಹೆಚ್ಚು ಸಮಯ ಕಳೆದರು. ಪ್ರಧಾನ ಕೋಚ್ ಗೌತಮ್ ಗಂಭೀರ್ ಜೊತೆ ರೋಹಿತ್ ದೀರ್ಘ ಕಾಲ ಮಾತುಕತೆಯಲ್ಲಿ ತೊಡಗಿದ್ದು ಎಲ್ಲರ ಗಮನ ಸೆಳೆಯಿತು. ಮೊದಲ ಪಂದ್ಯ ಅ.19ರಂದು ನಡೆಯಲಿದ್ದು, ಅ.23ಕ್ಕೆ ಅಡಿಲೇಡ್‌ನಲ್ಲಿ 2ನೇ ಪಂದ್ಯ, ಅ.25ಕ್ಕೆ ಸಿಡ್ನಿಯಲ್ಲಿ 3ನೇ ಪಂದ್ಯ ನಡೆಯಲಿದೆ. ಅ.29ರಿಂದ 5 ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್; ಸಂಗಕ್ಕಾರ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ!
ವಿಜಯ್ ಹಜಾರೆ ಟ್ರೋಫಿ: ಮುಂಬೈ ಎದುರು ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ