
ರಾಂಚಿ[ಅ.22]: ನಿರೀಕ್ಷೆಯಂತೆಯೇ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎದುರು ಸುಲಭವಾಗಿ ರಾಂಚಿ ಟೆಸ್ಟ್ ಗೆಲ್ಲುವುದರೊಂದಿಗೆ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ನಾಲ್ಕನೇ ದಿನದಾಟದ ಎರಡನೇ ಓವರ್’ನಲ್ಲಿ ಶಾಬಾಜ್ ನದೀಮ್ ಸತತ ಎರಡು ವಿಕೆಟ್ ಕಬಳಿಸುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಪಡೆ ಇನಿಂಗ್ಸ್ ಹಾಗೂ 202 ರನ್’ಗಳ ಭರ್ಜರಿ ಜಯ ಸಾಧಿಸಿದೆ. ಇದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಅತಿದೊಡ್ಡ ಗೆಲುವಾಗಿದೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿದ ಸಾಧನೆ ಮಾಡಿದೆ.
ರಾಂಚಿ ಟೆಸ್ಟ್: ಟೀಂ ಇಂಡಿಯಾ ಗೆಲುವಿಗೆ ಬೇಕು ಜಸ್ಟ್ 2 ವಿಕೆಟ್
ಮೂರನೇ ದಿನದಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿದ್ದ ಆಫ್ರಿಕಾ ತನ್ನ ಖಾತೆಗೆ ಕೇವಲ ಒಂದು ರನ್ ಅಷ್ಟೇ ಸೇರಿಸಿ 2 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಹೀನಾಯವಾಗಿ ಸರಣಿ ಸೋತಿತು. ಪದಾರ್ಪಣೆ ಮಾಡಿದ ಶಾಬಾಜ್ ನದೀಮ್ ಮೂರು ವಿಕೆಟ್ ಪಡೆದರು. ಪಂದ್ಯದುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ ಭಾರತದ ಆರಂಭಿಕ ಬ್ಯಾಟ್ಸ್’ಮನ್ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.
ವೈಜಾಗ್’ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 203 ರನ್’ಗಳಿಂದ ಜಯಿಸಿತ್ತು. ಇನ್ನು ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಇನಿಂಗ್ಸ್ ಹಾಗೂ 137 ರನ್’ಗಳಿಂದ ಜಯಿಸಿತ್ತು. ಇದೀಗ ರಾಂಚಿ ಟೆಸ್ಟ್ ಪಂದ್ಯವನ್ನು ಇನ್ನೂ ಒಂದು ದಿನ ಬಾಕಿ ಇರುವಂತೆಯೇ ಇನಿಂಗ್ಸ್ ಹಾಗೂ 202 ರನ್’ಗಳ ಜಯ ಸಾಧಿಸಿದೆ.
ಬ್ಯಾಟಿಂಗ್’ನಲ್ಲಿ ರೋಹಿತ್ ಶರ್ಮಾ[529], ಮಯಾಂಕ್ ಅಗರ್ವಾಲ್[340] ಹಾಗೂ ವಿರಾಟ್ ಕೊಹ್ಲಿ 317 ರನ್ ಬಾರಿಸುವುದರೊಂದಿಗೆ ಸರಣಿಯಲ್ಲಿ ಟಾಪ್ 3 ಸ್ಥಾನ ಹಂಚಿಕೊಂಡರೆ, ಬೌಲಿಂಗ್’ನಲ್ಲಿ ರವಿಚಂದ್ರನ್ ಅಶ್ವಿನ್[15], ಮೊಹಮ್ಮದ್ ಶಮಿ[13] ಹಾಗೂ ರವೀಂದ್ರ ಜಡೇಜಾ[13] ಗರಿಷ್ಠ ವಿಕೆಟ್ ಪಡೆದ ಟಾಪ್ 3 ಬೌಲರ್’ಗಳು ಎನಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.