'ತವರಿನಲ್ಲಿ ಟೀಂ ಇಂಡಿಯಾ ಸೋಲಿಸೋದು ಸುಲಭವಲ್ಲ' ರೋಹಿತ್ ಪಡೆ ಕೊಂಡಾಡಿದ ಪಾಕ್‌ ಕ್ರಿಕೆಟಿಗ

By Naveen Kodase  |  First Published Feb 21, 2023, 12:48 PM IST

ಡೆಲ್ಲಿ ಟೆಸ್ಟ್ ಗೆದ್ದು ಬಾರ್ಡರ್ -ಗವಾಸ್ಕರ್ ಟ್ರೋಫಿ ತನ್ನಲ್ಲೇ ಉಳಿಸಿಕೊಂಡ ಟೀಂ ಇಂಡಿಯಾ
4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ 2-0 ಮುನ್ನಡೆ
ಟೀಂ ಇಂಡಿಯಾ ಪ್ರದರ್ಶನ ಕೊಂಡಾಡಿದ ಪಾಕ್‌ ಮಾಜಿ ನಾಯಕ ರಮೀಜ್ ರಾಜಾ


ಇಸ್ಲಾಮಾಬಾದ್‌(ಫೆ.21): ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅದ್ಭುತ ಪ್ರದರ್ಶನ ತೋರುವ ಮೂಲಕ ಮಿಂಚುತ್ತಿದೆ. 4 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲೆರಡು ಪಂದ್ಯಗಳನ್ನು ಜಯಿಸುವ ಮೂಲಕ ಟೀಂ ಇಂಡಿಯಾ, ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದೆ. ಇದರ ಬೆನ್ನಲ್ಲೇ ಅಚ್ಚರಿ ಎನ್ನುವಂತೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಮಾಜಿ ಅಧ್ಯಕ್ಷ ರಮೀಜ್‌ ರಾಜಾ, ಟೀಂ ಇಂಡಿಯಾ ಪ್ರದರ್ಶನವನ್ನು ಕೊಂಡಾಡಿದ್ದು, ಟೆಸ್ಟ್‌ ಕ್ರಿಕೆಟ್‌ನಲ್ಲಿ ತವರಿನಲ್ಲಿ ಭಾರತ ತಂಡವನ್ನು ಮಣಿಸುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆದ ಡೆಲ್ಲಿ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಮಾರಕ ದಾಳಿಗೆ ತತ್ತರಿಸಿದ ಪ್ಯಾಟ್ ಕಮಿನ್ಸ್‌ ನೇತೃತ್ವದ ಆಸ್ಟ್ರೇಲಿಯಾ ತಂಡವು 6 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್‌ ಅಶ್ವಿನ್‌, ವಿಶ್ವದರ್ಜೆಯ ಆಸ್ಟ್ರೇಲಿಯಾ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡುವಂತೆ ಮಾಡಿದ್ದಾರೆ. ಡೆಲ್ಲಿ ಟೆಸ್ಟ್ ಪಂದ್ಯದಲ್ಲಿ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ತೋರಿದ ರವೀಂದ್ರ ಜಡೇಜಾ ಕೇವಲ 42 ರನ್‌ ನೀಡಿ 7 ವಿಕೆಟ್‌ ಕಬಳಿಸಿದರೆ, ರವಿಚಂದ್ರನ್ ಅಶ್ವಿನ್‌ 3 ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಪರಿಣಾಮ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 113 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಟೆಸ್ಟ್‌ ವೃತ್ತಿಜೀವನದ 100ನೇ ಪಂದ್ಯವನ್ನಾಡಿದ ಚೇತೇಶ್ವರ್ ಪೂಜಾರ ಎರಡನೇ ಇನಿಂಗ್ಸ್‌ನಲ್ಲಿ ಅಜೇಯ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. 

Tap to resize

Latest Videos

ಇನ್ನು ಭಾರತ ಕ್ರಿಕೆಟ್‌ ತಂಡದ ಗೆಲುವಿನ ನಾಗಾಲೋಟವನ್ನು ರಮೀಜ್‌ ರಾಜಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕೊಂಡಾಡಿದ್ದಾರೆ. ಯಾವುದೇ ತಂಡವು ತವರಿನಲ್ಲಿ ಟೀಂ ಇಂಡಿಯಾವನ್ನು ಮಣಿಸುವುದು ಸಾಧ್ಯವಿಲ್ಲ. ಆಸ್ಟ್ರೇಲಿಯಾ ತಂಡವು ಪರ್ತ್‌ ಅಥವಾ ಬ್ರಿಸ್ಬೇನ್‌ನಲ್ಲಿ ಉಪಖಂಡಗಳ ತಂಡದ ಎದುರು ಪಂದ್ಯ ಮುಗಿಸಿದಂತೆ, ಆಸ್ಟ್ರೇಲಿಯಾ ಕೂಡಾ ಇಲ್ಲಿ ಶರಣಾಗಿದೆ. ಭಾರತದಲ್ಲಿ ಒಳ್ಳೆಯ ಟೆಸ್ಟ್‌ ಪಂದ್ಯವನ್ನಾಡಲು ಆಸ್ಟ್ರೇಲಿಯಾ ಸಿದ್ದವಾದಂತೆ ಕಾಣುತ್ತಿಲ್ಲ. ಭಾರತ ತಂಡವನ್ನು ಭಾರತದಲ್ಲೇ ಸೋಲಿಸುವುದು ಯಾವುದೇ ತಂಡಕ್ಕೆ ಸುಲಭವಲ್ಲ. ಸ್ಪಿನ್ ಬೌಲರ್‌ಗಳೆದುರು ಆಸ್ಟ್ರೇಲಿಯನ್ನರು ಸಾಧಾರಣ ಪ್ರದರ್ಶನ ತೋರಿದರು. ಒಂದೇ ಸೆಷನ್‌ನಲ್ಲಿ ಆಸ್ಟ್ರೇಲಿಯಾದ 9 ವಿಕೆಟ್‌ಗಳ ಪತನವಾದವು. ಜಡೇಜಾ ಅತ್ಯದ್ಭುತವಾಗಿ ಬೌಲಿಂಗ್ ಪ್ರದರ್ಶನ ತೋರಿದರು ಎಂದು ರಮೀಜ್ ರಾಜಾ ಹೇಳಿದ್ದಾರೆ.

ಆಸ್ಟ್ರೇಲಿಯಾ ಎದುರು ಅಕ್ಷರ್ ಪಟೇಲ್‌ ಅದ್ಭುತ ಬ್ಯಾಟಿಂಗ್ ನಡೆಸಿದ್ದು, ಪಂದ್ಯದ ದಿಕ್ಕನ್ನೇ ಬದಲಿಸಿತು. ಕ್ಲಿಷ್ಟ ಪರಿಸ್ಥಿತಿಯಲ್ಲಿ ಅವರು 60-70 ರನ್ ಸಿಡಿಸಿದರು. ಆಸ್ಟ್ರೇಲಿಯಾ ತಂಡವು ಎರಡನೇ ಇನಿಂಗ್ಸ್‌ನಲ್ಲಿ ದೊಡ್ಡ ಅಂತರದ ಇನಿಂಗ್ಸ್‌ ಮುನ್ನಡೆ ಸಾಧಿಸುವ ಅಗತ್ಯವಿತ್ತು. ಆದರೆ ಅಕ್ಷರ್ ಪಟೇಲ್‌, ರವಿಚಂದ್ರನ್ ಅಶ್ವಿನ್ ಜತೆಗೂಡಿ ಸಮಯೋಚಿತ ಶತಕದ ಜತೆಯಾಟವಾಡಿದರು. ಆಸ್ಟ್ರೇಲಿಯನ್ನರು ಮಾನಸಿಕವಾಗಿ ಹಾಗೂ ತಾಂತ್ರಿಕವಾಗಿ ಸದೃಢವಾಗಿಲ್ಲ. ಅವರು ಸ್ಪಿನ್ ಬೌಲರ್‌ಗಳೆದುರಿನ ಹೋರಾಟ ನಿಜಕ್ಕೂ ದುರಂತವೇ ಸರಿ. ಅವರು ಸ್ಪಿನ್ನರ್‌ಗಳೆದರು ಕೆಟ್ಟ ಹೊಡೆತಗಳು ಹೊಡೆಯುವ ಯತ್ನದಲ್ಲಿ ವಿಕೆಟ್‌ ಕೈಚೆಲ್ಲಿದರು ಎಂದು ಪಾಕಿಸ್ತಾನದ ಮಾಜಿ ನಾಯಕ ರಮೀಜ್ ರಾಜಾ ಅಭಿಪ್ರಾಯಪಟ್ಟಿದ್ದಾರೆ.

click me!