
ರಾಜ್‌ಕೋಟ್(ಫೆ.16): ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಧೃವ್ ಜುರೆಲ್ ಇಂಗ್ಲೆಂಡ್ ಎದುರು ಪಾದಾರ್ಪಣೆ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಅವಕಾಶವನ್ನು ಕೇವಲ 4 ರನ್ ಅಂತರದಲ್ಲಿ ಕೈಚೆಲ್ಲಿದರಾದರೂ, ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಆರಂಭಿಕ ಆಘಾತದ ಹೊರತಾಗಿಯೂ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 445 ರನ್ ಬಾರಿಸಿ ಸರ್ವಪತನ ಕಂಡಿದೆ.
ಹೌದು, ಇಲ್ಲಿನ ನಿರಂಜನ್ ಶಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯದ ವೇಳೆಗೆ ಭಾರತ 5 ವಿಕೆಟ್ ಕಳೆದುಕೊಂಡು 326 ರನ್ ಬಾರಿಸಿತ್ತು. ಆದರೆ ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾ ತನ್ನ ಖಾತೆಗೆ ಕೇವಲ 4 ರನ್ ಸೇರಿಸುವಷ್ಟರಲ್ಲಿ ನೈಟ್ ವಾಚ್‌ಮನ್(4) ಹಾಗೂ ಶತಕವೀರ ರವೀಂದ್ರ ಜಡೇಜಾ(112) ಪೆವಿಲಿಯನ್ ಸೇರಿದರು.
ಸರ್ಫರಾಜ್ ಖಾನ್ ರನೌಟ್ ಮಾಡಿದ್ದಕ್ಕೆ ಕೈಮುಗಿದು ಕ್ಷಮೆ ಕೋರಿದ ರವೀಂದ್ರ ಜಡೇಜಾ..!
ಗಮನ ಸೆಳೆದ ಅಶ್ವಿನ್-ಜಡೇಜಾ ಜುಗಲ್ಬಂದಿ: ಹೌದು ಎರಡನೇ ದಿನದಾಟದ ಆರಂಭದಲ್ಲೇ ಸತತ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಭಾರತ ತಂಡಕ್ಕೆ 7ನೇ ವಿಕೆಟ್‌ಗೆ ರವಿಚಂದ್ರನ್ ಅಶ್ವಿನ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಧೃವ್ ಜುರೆಲ್ ಆಸರೆಯಾದರು. ಆರಂಭದಲ್ಲೇ ಟೀಂ ಇಂಡಿಯಾದ ಎರಡು ವಿಕೆಟ್ ಕಬಳಿಸುವ ಮೂಲಕ 350 ರನ್‌ಗಳೊಳಗೆ ಭಾರತವನ್ನು ಆಲೌಟ್ ಮಾಡುವ ಲೆಕ್ಕಾಚಾರದಲ್ಲಿದ್ದ ಬೆನ್ ಸ್ಟೋಕ್ಸ್ ಪಡೆಗೆ ಅಶ್ವಿನ್-ಜುರೆಲ್ ನಿರಾಸೆ ಮೂಡಿಸಿದರು. ಈ ಜೋಡಿ 175 ಎಸೆತಗಳನ್ನು ಎದುರಿಸಿ 77 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನಾನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಅಶ್ವಿನ್ 89 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 37 ರನ್ ಬಾರಿಸಿ ರೆಹಮಾನ್ ಅಹ್ಮದ್‌ಗೆ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಧೃವ್ ಜುರೆಲ್ 104 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 46 ರನ್ ಗಳಿಸಿ ರೆಹಮಾನ್ ಅಹ್ಮದ್‌ಗೆ ಎರಡನೇ ಬಲಿಯಾದರು.
ರಾಜ್‌ಕೋಟ್ ಟೆಸ್ಟ್‌ನ ಮೊದಲ ದಿನವೇ ರೋಹಿತ್, ಜಡೇಜಾರಿಂದ ಅಪರೂಪದ ದಾಖಲೆ..!
ಇನ್ನು ಕೊನೆಯಲ್ಲಿ ಚುರುಕಿನ ಬ್ಯಾಟಿಂಗ್ ನಡೆಸಿದ ಜಸ್ಪ್ರೀತ್ ಬುಮ್ರಾ ಅಮೂಲ್ಯ 26 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 450ರ ಸಮೀಪ ಕೊಂಡೊಯ್ಯುವಲ್ಲಿ ಯಶಸ್ವಿಯಾದರು.
ಸಂಕ್ಷಿಪ್ತ ಸ್ಕೋರ್:
ಭಾರತ: 445/10(ಮೊದಲ ಇನಿಂಗ್ಸ್)
ರೋಹಿತ್ ಶರ್ಮಾ: 131
ರವೀಂದ್ರ ಜಡೇಜಾ: 112
ಮಾರ್ಕ್ ವುಡ್: 114/4
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.