
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ರಜತ್ ಪಾಟಿದಾರ್ ದೇಶೀಯ ಕ್ರಿಕೆಟ್‌ನಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಆಗಸ್ಟ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ 'ದುಲೀಪ್ ಟ್ರೋಫಿ 2026' ಟೂರ್ನಿಯಲ್ಲಿ ಹಾಲಿ ಚಾಂಪಿಯನ್ 'ಸೆಂಟ್ರಲ್ ಜೋನ್' (ಮಧ್ಯ ವಲಯ) ತಂಡವನ್ನು ಮುನ್ನಡೆಸುವ ಜವಾಬ್ದಾರಿ ಪಾಟಿದಾರ್ ಹೆಗಲಿಗೇರಿದೆ. ಟೀಮ್ ಇಂಡಿಯಾದ ಸ್ಟಾರ್ ಫಿನಿಶರ್ ರಿಂಕು ಸಿಂಗ್ ಈ ತಂಡಕ್ಕೆ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ಕಳೆದ ಬಾರಿ ದುಲೀಪ್ ಟ್ರೋಫಿ ಗೆದ್ದು ಬೀಗಿದ್ದ ಸೆಂಟ್ರಲ್ ಜೋನ್ ತಂಡ ಈ ಬಾರಿ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ತವಕದಲ್ಲಿದೆ. ರಜತ್ ಪಾಟಿದಾರ್ ನೇತೃತ್ವದ ಈ ತಂಡದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಲವು ಪ್ರತಿಭಾನ್ವಿತ ಆಟಗಾರರ ದಂಡೇ ಇದೆ. ರಿಂಕು ಸಿಂಗ್ ಮಾತ್ರವಲ್ಲದೆ ಹರ್ಷ್ ದುಬೆ ಮತ್ತು ವೇಗಿ ಯಶ್ ಠಾಕೂರ್ ಕೂಡ ತಂಡದ ಬಲ ಹೆಚ್ಚಿಸಿದ್ದಾರೆ.
ಬ್ಯಾಟಿಂಗ್ ವಿಭಾಗ: ರಜತ್ ಪಾಟಿದಾರ್ ಮತ್ತು ಯಶ್ ರಾಥೋಡ್ ಮಧ್ಯಮ ಕ್ರಮಾಂಕದ ಆಧಾರಸ್ತಂಭಗಳಾಗಿದ್ದಾರೆ. ಇತ್ತೀಚಿನ ರಣಜಿ ಟ್ರೋಫಿಯಲ್ಲಿ 760 ರನ್ ಬಾರಿಸಿ ಮಿಂಚಿದ್ದ ವಿದರ್ಭದ ಆರಂಭಿಕ ಆಟಗಾರ ಅಮನ್ ಮೊಖಾಡೆ ಅವರಿಗೆ ಮೊದಲ ಬಾರಿಗೆ ಅವಕಾಶ ಸಿಕ್ಕಿದೆ. ಛತ್ತೀಸ್‌ಗಢದ ಆಯುಷ್ ಪಾಂಡೆ ಮತ್ತೊಬ್ಬ ಆರಂಭಿಕ ಆಟಗಾರನಾಗಿ ಆಯ್ಕೆಯಾಗಿದ್ದಾರೆ.
ಬೌಲಿಂಗ್ ವಿಭಾಗ: ಸ್ಪಿನ್ ವಿಭಾಗದಲ್ಲಿ ಸಾರಂಶ್ ಜೈನ್ ಮತ್ತು ಹರ್ಷ್ ದುಬೆ ಜೊತೆಗೆ ಉತ್ತರ ಪ್ರದೇಶದ ಲೆಗ್ ಸ್ಪಿನ್ನರ್ ಜೀಶನ್ ಅನ್ಸಾರಿ ಸ್ಥಾನ ಪಡೆದಿದ್ದಾರೆ. ವೇಗದ ಬೌಲಿಂಗ್ ಜವಾಬ್ದಾರಿಯನ್ನು ಯಶ್ ಠಾಕೂರ್, ನಚಿಕೇತ್ ಭೂತೆ ಮತ್ತು ಅರ್ಷದ್ ಖಾನ್ ಹೊತ್ತುಕೊಂಡಿದ್ದಾರೆ.
ವಿಕೆಟ್ ಕೀಪಿಂಗ್: ಆರ್ಯನ್ ಜುಯಲ್ ಮೊದಲ ಆಯ್ಕೆಯಾಗಿದ್ದರೆ, ಕುನಾಲ್ ಸಿಂಗ್ ರಾಥೋಡ್ ಬ್ಯಾಕಪ್ ಆಗಿದ್ದಾರೆ.
ಕಳೆದ ಬಾರಿಯ ಚಾಂಪಿಯನ್ ಆಗಿರುವ ಕಾರಣ ರಜತ್ ಪಾಟಿದಾರ್ ನೇತೃತ್ವದ ಸೆಂಟ್ರಲ್ ಜೋನ್ ತಂಡವು ಆರಂಭಿಕ ಸುತ್ತಿನ ಪಂದ್ಯಗಳನ್ನು ಆಡುವ ಅಗತ್ಯವಿಲ್ಲ. ಈ ತಂಡವು ನೇರವಾಗಿ ಆಗಸ್ಟ್ 30 ರಿಂದ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಸೆಮಿಫೈನಲ್‌ನಲ್ಲಿ ಈ ತಂಡವು ಈಸ್ಟ್ ಜೋನ್ ಅಥವಾ ನಾರ್ತ್ ಈಸ್ಟ್ ಜೋನ್ ತಂಡವನ್ನು ಎದುರಿಸಲಿದೆ.
ದುಲೀಪ್ ಟ್ರೋಫಿ ಟೂರ್ನಿಯು ಆಗಸ್ಟ್ 23 ರಂದು ಬೆಂಗಳೂರಿನ 'ಸೆಂಟರ್ ಆಫ್ ಎಕ್ಸಲೆನ್ಸ್' ಮೈದಾನದಲ್ಲಿ ಚಾಲನೆಗೊಳ್ಳಲಿದೆ. ಟೂರ್ನಿಯ ಫೈನಲ್ ಪಂದ್ಯವು ಸೆಪ್ಟೆಂಬರ್ 6 ರಿಂದ ಆರಂಭವಾಗಲಿದೆ. ಆರ್‌ಸಿಬಿ ನಾಯಕ ಪಾಟಿದಾರ್‌ಗೆ ತಮ್ಮ ತವರು ನೆಲವಾದ ಬೆಂಗಳೂರಿನಲ್ಲೇ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ರಜತ್ ಪಾಟಿದಾರ್ (ನಾಯಕ), ರಿಂಕು ಸಿಂಗ್ (ಉಪನಾಯಕ), ಆರ್ಯನ್ ಜುಯಲ್ (ವಿಕೆಟ್ ಕೀಪರ್), ಸಾರಂಶ್ ಜೈನ್, ಅಮನ್ ಮೊಖಾಡೆ, ಕುನಾಲ್ ಚಂದೇಲಾ, ಜೀಶನ್ ಅನ್ಸಾರಿ, ಆರ್ಯನ್ ಪಾಂಡೆ, ಅರ್ಷದ್ ಖಾನ್, ಆಯುಷ್ ಪಾಂಡೆ, ಯಶ್ ರಾಥೋಡ್, ಹರ್ಷ್ ದುಬೆ, ಕುನಾಲ್ ಸಿಂಗ್ ರಾಥೋಡ್ (ವಿಕೆಟ್ ಕೀಪರ್), ಯಶ್ ಠಾಕೂರ್, ನಚಿಕೇತ್ ಭೂತೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.