ತಂದೆಗೆ ತಕ್ಕ ಮಕ್ಕಳು..! ಅಂಡರ್-19 ಪಂದ್ಯದಲ್ಲಿ ಅನ್ವಯ್ ಸ್ಪೋಟಕ ಬ್ಯಾಟಿಂಗ್; ಮಹಾರಾಜ ಟ್ರೋಫಿಯಲ್ಲಿ ಬೆಂಗಳೂರು ಗೆಲ್ಲಿಸಿದ ಸಮಿತ್ ದ್ರಾವಿಡ್!

Published : Jul 07, 2026, 01:10 PM IST
Rahul Dravid Sons

ಸಾರಾಂಶ

ರಾಹುಲ್ ದ್ರಾವಿಡ್ ಅವರ ಕಿರಿಯ ಮಗ ಅನ್ವಯ್ ದ್ರಾವಿಡ್ ಭಾರತ ಅಂಡರ್-19 ಪರ ಸ್ಪೋಟಕ 87 ರನ್ ಸಿಡಿಸಿದರೆ, ಹಿರಿಯ ಮಗ ಸಮಿತ್ ದ್ರಾವಿಡ್ ಮಹಾರಾಜ ಟ್ರೋಫಿಯಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಈ ಇಬ್ಬರೂ ಸಹೋದರರು ತಮ್ಮ ತಂದೆಯಂತೆ ಕ್ರಿಕೆಟ್‌ನಲ್ಲಿ ಭರವಸೆ ಮೂಡಿಸುತ್ತಿದ್ದಾರೆ.

ಬೆಂಗಳೂರು: ಭಾರತದ ದಿಗ್ಗಜ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ಹಾಗೂ ಕ್ಯಾಪ್ಟನ್ ರಾಹುಲ್ ದ್ರಾವಿಡ್ ದಶಕಗಳ ಕಾಲ ಟೀಂ ಇಂಡಿಯಾದ ಆಪತ್ಬಾಂದವನಾಗಿ ಗುರುತಿಸಿಕೊಂಡಿದ್ದರು. ಇದೀಗ ರಾಹುಲ್ ದ್ರಾವಿಡ್ ಮಕ್ಕಳಾದ ಸಮಿತ್ ಹಾಗೂ ಅನ್ವಯ್ ತಂದೆಯ ಹೆಜ್ಜೆಗುರುತುಗಳನ್ನೇ ಹಿಂಬಾಲಿಸುತ್ತಿದ್ದು, ತಂದೆಗೆ ತಕ್ಕ ಮಕ್ಕಳು ಎನಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರೂ ಆಟಗಾರರು ಅದ್ಭುತ ಆಟವಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಅಂಡರ್-19 ಕ್ರಿಕೆಟ್‌ನಲ್ಲಿ ಅನ್ವಯ್ ದ್ರಾವಿಡ್ ಆಕರ್ಷಕ ಫಿಫ್ಟಿ

ಹೌದು, ರಾಹುಲ್ ದ್ರಾವಿಡ್ ಕಿರಿಯ ಮಗ ಅನ್ವಯ್ ದ್ರಾವಿಡ್, ಭಾರತ ಅಂಡರ್-19 ಹಾಗೂ ಶ್ರೀಲಂಕಾ ಅಂಡರ್-19 ಯೂತ್ ಏಕದಿನ ಪಂದ್ಯದಲ್ಲಿ ಕೇವಲ 67 ಎಸೆತಗಳಲ್ಲಿ ಸ್ಪೋಟಕ 87 ರನ್ ಸಿಡಿಸುವ ಮೂಲಕ ಗಮನ ಸೆಳೆದಿದ್ದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಅಂಡರ್‌-19 ತಂಡವು ಒಂದು ಹಂತದಲ್ಲಿ 18 ಓವರ್‌ಗೆ 81 ರನ್‌ಗಳಿಗೆ ಅಗ್ರಕ್ರಮಾಂಕದ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಕಂಗಾಲಾಗಿತ್ತು. ಈ ವೇಳೆ ಐದನೇ ವಿಕೆಟ್‌ಗೆ ಬ್ಯಾಟ್ ಮಾಡಲಿಳಿದ ಅನ್ವಯ್ ದ್ರಾವಿಡ್, ಅಂಡರ್-19 ಕ್ರಿಕೆಟ್ ವೃತ್ತಿಜೀವನದ ಮೊದಲ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.

17 ವರ್ಷದ ಅನ್ವಯ್ ದ್ರಾವಿಡ್ ಐದನೇ ವಿಕೆಟ್‌ಗೆ ಅರ್ಜುನ್ ರಜಪೂತ್ ಅವರ ಜತೆಗೂಡಿ 144 ರನ್‌ಗಳ ಅಮೂಲ್ಯ ಜತೆಯಾಟವಾಡುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಆರಂಭದಲ್ಲಿ ಸಾಕಷ್ಟು ಎಚ್ಚರಿಕೆಯಿಂದಲೇ ಬ್ಯಾಟಿಂಗ್ ಶುರುಮಾಡಿದ ಅನ್ವಯ್ ದ್ರಾವಿಡ್ ಮೊದಲ 14 ಎಸೆತಗಳ ಬಳಿಕ ಬೌಂಡರಿ ಬಾರಿಸಿದರು. ಇದಾದ ಬಳಿಕ ಪಿಚ್‌ಗೆ ಹೊಂದಿಕೊಂಡ ಆಟವಾಡಲು ಆರಂಭಿಸಿದ ಅನ್ವಯ್ 44 ಓವರ್ ತನಕ ಕ್ರೀಸ್‌ನಲ್ಲೆ ನೆಲೆಯೂರಿದ್ದರು. ಅಂತಿಮವಾಗಿ ಅನ್ವಯ್ ದ್ರಾವಿಡ್ ಕೇವಲ 67 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ ಒಂದು ಮುಗಿಲೆತ್ತರದ ಸಿಕ್ಸರ್ ನೆರವಿನಿಂದ 87 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿ ವಿಕೆಟ್ ಒಪ್ಪಿಸಿದರು.

ಇನ್ನು ಪುತ್ರ ಅನ್ವಯ್‌ ದ್ರಾವಿಡ್‌ ಅರ್ಧಶತಕ ಬಾರಿಸಿದರೂ ಶ್ರೀಲಂಕಾ ವಿರುದ್ಧ ಭಾರತ ಅಂಡರ್‌-19 ತಂಡ 2ನೇ ಯೂತ್‌ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ಸೋಲನುಭವಿಸಿದೆ. ಇದರೊಂದಿಗೆ ಸರಣಿ 1-1 ಸಮವಾಗಿದೆ. ಮೊದಲು ಬ್ಯಾಟ್‌ ಮಾಡಿದ ಭಾರತ 47.2 ಓವರ್‌ಗಳಲ್ಲಿ 285 ರನ್‌ಗೆ ಆಲೌಟಾಯಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಲಂಕಾ 48 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟದಲ್ಲಿ ಜಯಗಳಿಸಿತು. ಶ್ರೀಲಂಕಾದ ಆರಂಭಿಕ ಬ್ಯಾಟರ್ ದಿಮಂತ ಮಹಾವಿತರಣ ಅಜೇಯ 155 ರನ್ ಸಿಡಿಸುವ ಮೂಲಕ ತಂಡವನ್ನು ಇನ್ನೂ ಎರಡು ಓವರ್ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿದರು.

ಕೆಎಸ್‌ಸಿಎ ಮಹಾರಾಜ ಟ್ರೋಫಿಯಲ್ಲಿ ಸಮಿತ್ ಆಲ್ರೌಂಡ್ ಆಟ

ತಮ್ಮ ಅನ್ವಯ್ ಅಂಡರ್-19 ಕ್ರಿಕೆಟ್‌ನಲ್ಲಿ ಅಬ್ಬರಿಸಿದರೆ, ಅಣ್ಣ ಸಮಿತ್ ದ್ರಾವಿಡ್, ಕೆಎಸ್‌ಸಿಎ ಟಿ20 ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಆಲ್ರೌಂಡ್ ಆಟ ಪ್ರದರ್ಶಿಸುವ ಮೂಲಕ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮೈಸೂರು ವಾರಿಯರ್ಸ್ ವಿರುದ್ದ ಭಾನುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಎಂಟು ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿದೆ.

ಮೊದಲು ಬೌಲಿಂಗ್‌ನಲ್ಲಿ ಸಮಿತ್ ದ್ರಾವಿಡ್, ಮೂರು ಓವರ್ ಬೌಲಿಂಗ್ ಮಾಡಿ ಕೇವಲ 23 ರನ್ ನೀಡಿ ಎರಡು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಇದಾದ ಬಳಿಕ ಬ್ಯಾಟಿಂಗ್‌ನಲ್ಲಿ ಸಮಿತ್ ದ್ರಾವಿಡ್ ಕೇವಲ 25 ಎಸೆತಗಳನ್ನು ಎದುರಿಸಿ ಅಜೇಯ 40 ರನ್ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅಂದಹಾಗೆ 20 ವರ್ಷದ ಸಮಿತ್ ದ್ರಾವಿಡ್ 2023-24ನೇ ಸಾಲಿನ ಕೂಚ್ ಬೆರಹಾರ್ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಟೂರ್ನಿಯಲ್ಲಿ ಕರ್ನಾಟಕ ಪರ ಸಮಿತ್ ದ್ರಾವಿಡ್ ಬ್ಯಾಟಿಂಗ್‌ನಲ್ಲಿ 362 ರನ್ ಹಾಗೂ ಬೌಲಿಂಗ್‌ನಲ್ಲಿ 16 ವಿಕೆಟ್ ಕಬಳಿಸಿ ಮಿಂಚಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು vs ವೈಭವ್ : ಸ್ಯಾಮ್ಸನ್‌ಗೆ ಎಚ್ಚರಿಕೆ ಕೊಟ್ಟ ಶ್ರೀಶಾಂತ್..!
ಸಂಭಾವನೆ, ಜನಪ್ರಿಯತೆ ವಿಷ್ಯದಲ್ಲಿ Cristiano Ronaldo ಮುಂದೆ Virat Kohli, MS Dhoni ನಗಣ್ಯ!