
ಸೆಂಚೂರಿಯನ್(ಜ.01): ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಕೋಚ್ ರಾಹುಲ್ ದ್ರಾವಿಡ್ (Rahul Dravid) ಕುಣಿದು ಸಂಭ್ರಮಿಸಿದ್ದಾರೆ. ತಂಡ ಉಳಿದುಕೊಂಡಿರುವ ರೆಸಾರ್ಟ್‌ಗೆ ವಾಪಸಾಗುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಸ್ಥಳೀಯ ನೃತ್ಯದ ಮೂಲಕ ಆಟಗಾರರನ್ನು ಸ್ವಾಗತಿಸಿದರು. ಈ ವೇಳೆ ಕೊಹ್ಲಿ, ದ್ರಾವಿಡ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ಚೇತೇಶ್ವರ್ ಪೂಜಾರ ಸಹ ಹೆಜ್ಜೆ ಹಾಕಿ ಖುಷಿಪಟ್ಟರು. ಕೊಹ್ಲಿ ಹಾಗೂ ದ್ರಾವಿಡ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಸೆಂಚೂರಿಯನ್ ಟೆಸ್ಟ್ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯಾಡಲಿದ್ದು, ಸೆಂಚೂರಿಯನ್‌ನ ಸೂಪರ್ ಸ್ಪೋರ್ಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು 113 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2021-22ನೇ ಸಾಲಿನ ಫ್ರೀಡಂ ಟ್ರೋಫಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.
ಇದಷ್ಟೇ ಅಲ್ಲದೇ ಸೆಂಚೂರಿಯನ್‌ನಲ್ಲಿ ಟೆಸ್ಟ್ ಪಂದ್ಯ ಜಯಿಸಿದ ಏಷ್ಯಾದ ಮೊದಲ ತಂಡ ಎನ್ನುವ ಕೀರ್ತಿಗೆ ವಿರಾಟ್ ನೇತೃತ್ವದ ಟೀಂ ಇಂಡಿಯಾ ಪಾತ್ರವಾಗಿದೆ. ದಕ್ಷಿಣ ಆಫ್ರಿಕಾದ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ಸೆಂಚೂರಿಯನ್‌ನಲ್ಲಿ ಟೆಸ್ಟ್ ಪಂದ್ಯ ಗೆದ್ದ ಏಷ್ಯಾದ ಮೊದಲ ತಂಡ ಎನ್ನುವ ದಾಖಲೆಯನ್ನು ಭಾರತ ಬರೆದಿದೆ. 2014ರ ಬಳಿಕ ಹರಿಣಗಳ ಪಡೆಗೆ ಎದುರಾದ ಮೊದಲ ಸೋಲು ಇದು. ಇಲ್ಲಿ ದಕ್ಷಿಣ ಆಫ್ರಿಕಾ ಒಟ್ಟು 27 ಟೆಸ್ಟ್ ಪಂದ್ಯಗಳನ್ನಾಡಿದ್ದು, ಕೇವಲ 3 ಪಂದ್ಯಗಳಲ್ಲಿ ಮಾತ್ರ ಸೋತಿದೆ.
ಜನವರಿ 3ರಿಂದ ಭಾರತದ ಭದ್ರಕೋಟೆಯಲ್ಲಿ 2ನೇ ಟೆಸ್ಟ್
ದಕ್ಷಿಣ ಆಫ್ರಿಕಾದ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ಸೆಂಚೂರಿಯನ್‌ನ ಸೂಪರ್ ಸ್ಪೋರ್ಟ್‌ನಲ್ಲಿ ಗೆದ್ದು ಬೀಗಿರುವ ಭಾರತ, ಜನವರಿ 3ರಿಂದ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ 2ನೇ ಟೆಸ್ಟ್ ಆಡಲಿದೆ. ವ್ಯಾಂಡರರ್ಸ್ ಭಾರತದ ಭದ್ರಕೋಟೆ ಇದ್ದಂತೆ. ಇಲ್ಲಿ 1992ರಿಂದ 2018ರ ವರೆಗೂ ಭಾರತ 5 ಟೆಸ್ಟ್ ಆಡಿದ್ದು, 3 ಡ್ರಾ, 2 ಗೆಲುವು ಕಂಡಿದೆ. 2006ರಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ 123 ರನ್‌ಗಳಿಂದ ಗೆದ್ದಿದ್ದ ಭಾರತ, 2018ರಲ್ಲಿ ನಡೆದಿದ್ದ ಪಂದ್ಯವನ್ನು 63 ರನ್‌ಗಳಿಂದ ಗೆದ್ದುಕೊಂಡಿತ್ತು.
Ind vs SA: ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದು ಹಲವು ದಾಖಲೆ ಬರೆದ ಟೀಂ ಇಂಡಿಯಾ..!
ಇದುವರೆಗೂ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿಲ್ಲ. ಇದೀಗ ವಿರಾಟ್ ಕೊಹ್ಲಿ ಪಡೆಗೆ ಹರಿಣಗಳ ನಾಡಿನಲ್ಲಿ ಇತಿಹಾಸ ನಿರ್ಮಿಸಲು ಸುವರ್ಣಾವಕಾಶ ಬಂದೊದಗಿದೆ. ಇನ್ನುಳಿದ ಎರಡು ಪಂದ್ಯಗಳ ಪೈಕಿ ಇನ್ನೊಂದು ಟೆಸ್ಟ್ ಪಂದ್ಯ ಗೆದ್ದರೂ ಸಹ, ಟೆಸ್ಟ್ ಸರಣಿ ಭಾರತದ ಪಾಲಾಗಲಿದೆ.
ನಿಧಾನಗತಿ ಬೌಲಿಂಗ್: ಭಾರತಕ್ಕೆ 1 ಅಂಕ ಕಡಿತ
ದುಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕೆ ಭಾರತ ತಂಡಕ್ಕೆ ಪಂದ್ಯದ ಸಂಭಾವನೆಯ ಶೇ.20ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿರುವ ಐಸಿಸಿ, 2021-23ರ ಅವಧಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ತಂಡ ಗಳಿಸಿರುವ ಒಟ್ಟು ಅಂಕಗಳಿಂದ ಒಂದು ಅಂಕ ಕಡಿತಗೊಳಿಸಿದೆ. ನಿಗದಿತ ಸಮಯದಲ್ಲಿ ನಿರ್ದಿಷ್ಟ ಓವರ್‌ಗಳನ್ನು ಪೂರ್ಣಗೊಳಿಸುವಲ್ಲಿ ಭಾರತ ವಿಫಲವಾಗಿದೆ. ತಂಡ ಒಂದು ಓವರ್ ಹಿಂದಿತ್ತು ಎಂದು ಐಸಿಸಿ ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.