
ನವದೆಹಲಿ(ಜ.01): 2021ನೇ ವರ್ಷವನ್ನು ಗೆಲುವಿನೊಂದಿಗೆ ಮುಕ್ತಾಯಗೊಳಿಸಿದ ಭಾರತ ಕ್ರಿಕೆಟ್ ತಂಡಕ್ಕೆ (Indian Cricket Team) 2022ರಲ್ಲೂ ಕಠಿಣ ಸವಾಲುಗಳು ಎದುರಾಗಲಿದೆ. ತಂಡಕ್ಕೆ ಬಿಡುವಿಲ್ಲದ ವೇಳಾಪಟ್ಟಿಇದ್ದು, ಮಹತ್ವದ ಸರಣಿಗಳಲ್ಲಿ ಪಾಲ್ಗೊಳ್ಳಲಿದೆ. ತಂಡ ಈ ವರ್ಷ 11 ಟೆಸ್ಟ್, 17 ಏಕದಿನ ಹಾಗೂ 17 ಟಿ20 ಪಂದ್ಯಗಳನ್ನು ಆಡಲಿದೆ. ಭಾರತ ತಂಡದ ವೇಳಾಪಟ್ಟಿಯ(Team India Schedule) ವಿವರ ಹೀಗಿದೆ.
ದಕ್ಷಿಣ ಆಫ್ರಿಕಾ ಸರಣಿ, ಜನವರಿ: ಈಗಾಗಲೇ ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದಿರುವ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಇನ್ನೂ 2 ಟೆಸ್ಟ್ ಬಾಕಿ ಇದೆ. ಆ ಬಳಿಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡ ಆಡಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯು ಜನವರಿ 19ರಿಂದ ಆರಂಭವಾಗಲಿದೆ.
ಫೆಬ್ರವರಿ-ಮಾರ್ಚ್: ದಕ್ಷಿಣ ಆಫ್ರಿಕಾದಿಂದ ವಾಪಸಾದ ಬಳಿಕ ಭಾರತ ತಂಡ ವೆಸ್ಟ್‌ಇಂಡೀಸ್‌ಗೆ ಆತಿಥ್ಯ ವಹಿಸಲಿದೆ. ವಿಂಡೀಸ್ ವಿರುದ್ಧ 3 ಏಕದಿನ ಹಾಗೂ 3 ಟಿ20 ಪಂದ್ಯಗಳು ನಡೆಯಲಿವೆ. ಫೆಬ್ರವರಿ 6ಕ್ಕೆ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಫೆಬ್ರವರಿ 20ಕ್ಕೆ 3ನೇ ಹಾಗೂ ಅಂತಿಮ ಟಿ20 ಪಂದ್ಯ ನಡೆಯಲಿದೆ. ವಿಂಡೀಸ್ ಸರಣಿ ಬಳಿಕ ಶ್ರೀಲಂಕಾ ತಂಡ ಭಾರತಕ್ಕೆ ಆಗಮಿಸಲಿದ್ದು, ಫೆಬ್ರವರಿ 25ರಿಂದ ಮಾರ್ಚ್ 18ರ ವರೆಗೂ 2 ಟೆಸ್ಟ್, 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಫೆಬ್ರವರಿ 25ರಿಂದ ಮಾರ್ಚ್ 1ರ ವರೆಗೂ ಮೊದಲ ಟೆಸ್ಟ್ ಬೆಂಗಳೂರಲ್ಲಿ ನಡೆಯಲಿದೆ.
ಏಪ್ರಿಲ್-ಮೇ: ಲಂಕಾ ವಿರುದ್ಧದ ಸರಣಿ ಬಳಿಕ ಭಾರತೀಯ ಆಟಗಾರರಿಗೆ ಅಂದಾಜು 2 ವಾರ ವಿಶ್ರಾಂತಿ ಸಿಗಲಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಭಾರತೀಯ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಏಪ್ರಿಲ್ 2 ಇಲ್ಲವೇ 3ರಿಂದ ಟೂರ್ನಿ ಆರಂಭಗೊಳ್ಳುವ ನಿರೀಕ್ಷೆ ಇದೆ.
ಜೂನ್: ಐಪಿಎಲ್ ಮುಗಿದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಸರಣಿಯ 2ನೇ ಪಂದ್ಯವು ಜೂನ್ 12ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಜುಲೈ: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಬಳಿಕ ಭಾರತ ತಂಡ ಇಂಗ್ಲೆಂಡ್‌ಗೆ ವಿಮಾನ ಹತ್ತಲಿದೆ. ಕೋವಿಡ್‌ನಿಂದಾಗಿ ಮುಂದೂಡಿಕೆಯಾಗಿದ್ದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಜುಲೈ 1ರಿಂದ 5ರ ವರೆಗೂ ಬರ್ಮಿಂಗ್‌ಹ್ಯಾಮ್‌ನಲ್ಲಿ ಆಡಲಿದೆ. ಆ ಬಳಿಕ 3 ಪಂದ್ಯಗಳ ಟಿ20, 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಪಾಲ್ಗೊಳ್ಳಲಿದೆ.
SA vs India ODI series : ಭಾರತ ತಂಡಕ್ಕೆ ಕೆಎಲ್ ರಾಹುಲ್ ನಾಯಕ, ರೋಹಿತ್ ಶರ್ಮಾ ಔಟ್!
ಆಗಸ್ಟ್-ಸೆಪ್ಟೆಂಬರ್: ಇಂಗ್ಲೆಂಡ್ ವಿರುದ್ಧದ ಸರಣಿ ಮುಕ್ತಾಯಗೊಂಡ ಬಳಿಕ ಭಾರತ ತಂಡ ವೆಸ್ಟ್‌ಇಂಡೀಸ್ ಪ್ರವಾಸ ಕೈಗೊಳ್ಳುವ ನಿರೀಕ್ಷೆ ಇದೆ. ಸೆಪ್ಟೆಂಬರ್‌ನಲ್ಲಿ ಏಷ್ಯಾ ಕಪ್ ಟಿ20 ಟೂರ್ನಿ ನಿಗದಿಯಾಗಿದ್ದು, ಈ ಟೂರ್ನಿಯ ಆತಿಥ್ಯ ಪಾಕಿಸ್ತಾನಕ್ಕೆ ಸಿಕ್ಕಿದ್ದು, ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವುದು ಅನುಮಾನ. ಹೀಗಾಗಿ ಟೂರ್ನಿ ಯುಎಇನಲ್ಲಿ ನಡೆಯಬಹುದು.
ಸೆಪ್ಟೆಂಬರ್-ಅಕ್ಟೋಬರ್: ಟಿ20 ವಿಶ್ವಕಪ್‌ಗೂ ಮೊದಲು ಆಸ್ಪ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಭಾರತ ಹಾಗೂ ಆಸ್ಪ್ರೇಲಿಯಾ ತಂಡಗಳು 4 ಟೆಸ್ಟ್, 3 ಟಿ20 ಪಂದ್ಯಗಳ ಸರಣಿಗಳನ್ನು ಆಡಬಹುದು.
ಅಕ್ಟೋಬರ್-ನವೆಂಬರ್: ಆಸ್ಪ್ರೇಲಿಯಾದಲ್ಲಿ ಅಕ್ಟೋಬರ್ 16ರಿಂದ ನವೆಂಬರ್ 13ರ ವರೆಗೂ ಐಸಿಸಿ ಟಿ20 ವಿಶ್ವಕಪ್ ನಡೆಯಲಿದ್ದು, ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ವಿಶ್ವಕಪ್ ಮುಗಿದ ಬಳಿಕ ಭಾರತ ತಂಡ ಬಾಂಗ್ಲಾದೇಶಕ್ಕೆ ತೆರಳುವ ಸಾಧ್ಯತೆ ಇದ್ದು, ಅಲ್ಲಿ 2 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳನ್ನು ಆಡಬಹುದು.
ಡಿಸೆಂಬರ್: ಈ ವರ್ಷ ಡಿಸೆಂಬರ್‌ನಲ್ಲಿ ಭಾರತ ತಂಡ ಯಾವುದೇ ಪ್ರವಾಸ ಕೈಗೊಳ್ಳುವುದಿಲ್ಲ. ಬದಲಿಗೆ ತವರಿನಲ್ಲಿ ಶ್ರೀಲಂಕಾ ವಿರುದ್ಧ ಸರಣಿ ಆಯೋಜನೆಗೊಳ್ಳುವ ಸಾಧ್ಯತೆ ಇದೆ. 5 ಏಕದಿನ ಪಂದ್ಯಗಳ ಸರಣಿ ನಡೆಯಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.