ಮತ್ತೆ ಕೈಕೊಟ್ಟ ಬ್ಯಾಟರ್ಸ್‌; ಭಾರತದ ಮೇಲೆ ಮುಂದುವರೆದ ಕಿವೀಸ್ ಬಿಗಿಹಿಡಿತ!

By Naveen KodaseFirst Published Oct 25, 2024, 4:44 PM IST
Highlights

ಪುಣೆ ಟೆಸ್ಟ್ ಪಂದ್ಯದಲ್ಲಿ ಭಾರತ ಎದುರು ಕಿವೀಸ್ ತಂಡವು ಬಿಗಿ ಹಿಡಿತ ಸಾಧಿಸಿದೆ. ಎರಡನೇ ದಿನದಾಟದಂತ್ಯಕ್ಕೆ ನ್ಯೂಜಿಲೆಂಡ್ ತಂಡವು 301 ರನ್‌ಗಳ ಬೃಹತ್ ಮುನ್ನಡೆ ಪಡೆದಿದೆ

ಪುಣೆ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್‌ನಲ್ಲೂ ಭಾರತೀಯ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡಿದ್ದಾರೆ. ಪರಿಣಾಮ ಎರಡನೇ ಟೆಸ್ಟ್‌ನಲ್ಲೂ ನ್ಯೂಜಿಲೆಂಡ್ ತಂಡದ ಬಿಗಿ ಹಿಡಿತ ಜೋರಾಗಿದೆ. ಕಿವೀಸ್ ತಂಡವು ಎರಡನೇ ದಿನದಾಟದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 198 ರನ್ ಬಾರಿಸಿದ್ದು ಒಟ್ಟಾರೆ 301 ರನ್‌ಗಳ ಬೃಹತ್ ಮುನ್ನಡೆ ಪಡೆದಿದೆ.

ಒಂದು ವಿಕೆಟ್ ಕಳೆದುಕೊಂಡು 16 ರನ್‌ಗಳೊಂದಿಗೆ ಮೊದಲ ಇನ್ನಿಂಗ್ಸ್‌ ಆರಂಭಿಸಿದ ಟೀಂ ಇಂಡಿಯಾ, ಮಿಚೆಲ್ ಸ್ಯಾಂಟ್ನರ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 38 ಹಾಗೂ ಯಶಸ್ವಿ ಜೈಸ್ವಾಲ್ ಮತ್ತು ಶುಭ್‌ಮನ್ ಗಿಲ್ ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಕೊಂಚ ಪ್ರತಿರೋಧವನ್ನು ತೋರಲಿಲ್ಲ. ವಿರಾಟ್ ಕೊಹ್ಲಿ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಪಂತ್ 18 ಹಾಗೂ ಸರ್ಫರಾಜ್ ಖಾನ್ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.  ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ ಅಜೇಯ 18 ರನ್ ಸಿಡಿಸುವ ಮೂಲಕ ಅಮೂಲ್ಯ ರನ್ ಕಾಣಿಕೆ ನೀಡಿದರು. ಟೀಂ ಇಂಡಿಯಾ ಅಂತಿಮವಾಗಿ 156 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಕಿವೀಸ್ ತಂಡವು 103 ರನ್‌ಗಳ ಅಮೂಲ್ಯ ಮುನ್ನಡೆ ಪಡೆಯಿತು.

Latest Videos

ಪುಣೆ ಟೆಸ್ಟ್‌ನಲ್ಲಿ ಕೊಹ್ಲಿ ಮತ್ತೆ ಫೇಲ್ ಬೆನ್ನಲ್ಲೇ ವಿರಾಟ್‌ಗೆ ಅನಿಲ್ ಕುಂಬ್ಳೆ ಕಿವಿಮಾತು

7 ವಿಕೆಟ್ ಕಬಳಿಸಿದ ಸ್ಯಾಂಟ್ನರ್: 2015ರಲ್ಲೇ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಇದುವರೆಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ 5+ ವಿಕೆಟ್ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಪುಣೆ ಟೆಸ್ಟ್ ಪಂದ್ಯದಲ್ಲಿ ಸ್ಯಾಂಟ್ನರ್ ಮೊದಲ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 5+ ವಿಕೆಟ್ ಸಾಧನೆ ಮಾಡುವಲ್ಲಿ ಯಶಸ್ವಿಯಾದರು. ಸ್ಯಾಂಟ್ನರ್ 53 ರನ್ ನೀಡಿ ಭಾರತದ 7 ಬ್ಯಾಟರ್‌ಗಳ ಬಲಿ ಪಡೆಯುವಲ್ಲಿ ಯಶಸ್ವಿಯಾದರು.

ಇನ್ನು 103 ರನ್‌ಗಳ ಮೊದಲ ಇನ್ನಿಂಗ್ಸ್‌ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ನ್ಯೂಜಿಲೆಂಡ್ ತಂಡವು ಮತ್ತೊಮ್ಮೆ ಬೃಹತ್ ಮೊತ್ತದತ್ತ ದಾಪುಗಾಲು ಇಟ್ಟಿದೆ. ಡೆವೊನ್ ಕಾನ್‌ವೇ(17), ವಿಲ್ ಯಂಗ್(23), ರಚಿನ್ ರವೀಂದ್ರ(9) ಹಾಗೂ ಡೇರಲ್ ಮಿಚೆಲ್ ಬೇಗನೇ ವಿಕೆಟ್ ಒಪ್ಪಿಸಿದರಾದರೂ, ಮತ್ತೊಂದು ತುದಿಯಲ್ಲಿ ನಾಯಕ ಟಾಮ್ ಲೇಥಮ್, ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಲೇಥಮ್ 133 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ 86 ರನ್ ಬಾರಿಸಿ, ವಾಷಿಂಗ್ಟನ್ ಸುಂದರ್‌ಗೆ 4ನೇ ಬಲಿಯಾದರು. ಸದ್ಯ ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಬ್ಲಂಡೆಲ್ 30 ಹಾಗೂ ಗ್ಲೆನ್ ಫಿಲಿಫ್ಸ್ 9 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಸ್ಯಾಂಟ್ನರ್ ದಾಳಿಗೆ ಟೀಂ ಇಂಡಿಯಾ ತಬ್ಬಿಬ್ಬು; ಕಿವೀಸ್‌ಗೆ ಮೊದಲ ಇನ್ನಿಂಗ್ಸ್ ಮುನ್ನಡೆ

ಸದ್ಯ ನ್ಯೂಜಿಲೆಂಡ್ ತಂಡವು 301 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದ್ದು, ಇದೀಗ ಎಲ್ಲರ ಚಿತ್ತ ಮೂರನೇ ದಿನದಾಟದತ್ತ ನೆಟ್ಟಿದೆ. 

click me!