
ಮುಂಬೈ: ಐಪಿಎಲ್‌ನ ಸೂಪರ್ ಸಂಡೇ ಪಂದ್ಯಗಳಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ಸಾಧಿಸಿವೆ. ಈ ಫಲಿತಾಂಶದಿಂದಾಗಿ ಪಾಯಿಂಟ್ಸ್ ಟೇಬಲ್ ಹಾಗೂ ಆಟಗಾರರ ವೈಯಕ್ತಿಕ ಸಾಧನೆಗಳಲ್ಲೂ ದೊಡ್ಡ ಬದಲಾವಣೆಯಾಗಿದೆ. ವಿಕೆಟ್ ಬೇಟೆಗಾರರ ಪಟ್ಟಿಯಲ್ಲಿ ಪರ್ಪಲ್ ಕ್ಯಾಪ್‌ಗೆ ಕನ್ನಡಿಗನ ಎಂಟ್ರಿಯಾಗಿದೆ. ರನ್ ಸರದಾರರ ಆರೆಂಜ್ ಕ್ಯಾಪ್‌ಗಾಗಿ ಪೈಪೋಟಿ ಜೋರಾಗಿದೆ.
ನಿನ್ನೆ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಮ್ಯಾಚ್‌ನಲ್ಲಿ ನಾಲ್ಕು ವಿಕೆಟ್ ಕಿತ್ತ ಗುಜರಾತ್ ಟೈಟನ್ಸ್ ಆಟಗಾರ ಪ್ರಸಿದ್ಧ್ ಕೃಷ್ಣ, ಈಗ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 4 ಪಂದ್ಯಗಳನ್ನಾಡಿ ಒಟ್ಟು 10 ವಿಕೆಟ್‌ಗಳೊಂದಿಗೆ ಅವರು ಮೊದಲ ಸ್ಥಾನದಲ್ಲಿದ್ದಾರೆ. ರಾಜಸ್ಥಾನ ರಾಯಲ್ಸ್ ಸ್ಪಿನ್ನರ್ ರವಿ ಬಿಷ್ಣೋಯ್ 9 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಅನ್ಶುಲ್ ಕಂಬೋಜ್ 8 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಲಖನೌ ವೇಗಿ ಪ್ರಿನ್ಸ್ ಯಾದವ್ ಮತ್ತು ಆರ್‌ಸಿಬಿ ವೇಗಿ ಜೇಕಬ್ ಡಫಿ ತಲಾ 6 ವಿಕೆಟ್‌ಗಳೊಂದಿಗೆ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ.
ಇನ್ನು, ಅತಿಹೆಚ್ಚು ರೇಸ್‌ನಲ್ಲಿ ರಾಜಸ್ಥಾನ ರಾಯಲ್ಸ್‌ನ 15 ವರ್ಷದ ಆಟಗಾರ ವೈಭವ್ ಸೂರ್ಯವಂಶಿಗೆ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಸವಾಲು ಹಾಕಿದ್ದಾರೆ. ವೈಭವ್ ಸೂರ್ಯವಂಶಿ 200 ರನ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 20 ಎಸೆತಗಳಲ್ಲಿ 53 ರನ್ ಚಚ್ಚಿದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ 195 ರನ್‌ಗಳೊಂದಿಗೆ ಅವರ ಹಿಂದೆಯೇ ಇದ್ದಾರೆ. ಹೈದರಾಬಾದ್‌ನ ಹೆನ್ರಿಚ್ ಕ್ಲಾಸೆನ್ (184), ರಾಜಸ್ಥಾನ್‌ನ ಯಶಸ್ವಿ ಜೈಸ್ವಾಲ್ (183), ಆರ್‌ಸಿಬಿಯ ವಿರಾಟ್ ಕೊಹ್ಲಿ (179) ನಂತರದ ಸ್ಥಾನಗಳಲ್ಲಿದ್ದಾರೆ. ಧ್ರುವ್ ಜುರೆಲ್ (176), ಜೋಸ್ ಬಟ್ಲರ್ (176), ಸಮೀರ್ ರಿಜ್ವಿ (166), ಮತ್ತು ಗುಜರಾತ್ ನಾಯಕ ಶುಭ್‌ಮನ್ ಗಿಲ್ (165) ಒಂಬತ್ತನೇ ಸ್ಥಾನದಲ್ಲಿದ್ದಾರೆ. ಅಂಗ್‌ಕೃಷ್ ರಘುವಂಶಿ (155) ಹತ್ತನೇ ಸ್ಥಾನದಲ್ಲಿದ್ದಾರೆ. ನಾಲ್ಕು ಪಂದ್ಯಗಳಲ್ಲಿ 137 ರನ್ ಗಳಿಸಿರುವ ಚೆನ್ನೈ ಸೂಪರ್ ಕಿಂಗ್ಸ್‌ನ ಸಂಜು ಸ್ಯಾಮ್ಸನ್ 13ನೇ ಸ್ಥಾನದಲ್ಲಿದ್ದಾರೆ.
ಮುಂಬೈ ತಂಡವನ್ನು 18 ರನ್‌ಗಳಿಂದ ಸೋಲಿಸಿದ ಆರ್‌ಸಿಬಿ, 4 ಪಂದ್ಯಗಳಿಂದ 6 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನ ಭದ್ರಪಡಿಸಿಕೊಂಡಿದೆ. ಸತತ ಎರಡನೇ ಗೆಲುವು ಸಾಧಿಸಿದ ಗುಜರಾತ್ ಟೈಟನ್ಸ್ ಏಳನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಜಿಗಿದಿದೆ. ಸತತ ಮೂರನೇ ಸೋಲು ಕಂಡ ಮುಂಬೈ ಎಂಟನೇ ಸ್ಥಾನಕ್ಕೆ ಕುಸಿದಿದೆ. ಚೆನ್ನೈ ಸೂಪರ್ ಕಿಂಗ್ಸ್ ಒಂಬತ್ತನೇ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಹತ್ತನೇ ಸ್ಥಾನದಲ್ಲಿವೆ. ರಾಜಸ್ಥಾನ ರಾಯಲ್ಸ್ ಸತತ ನಾಲ್ಕು ಗೆಲುವುಗಳೊಂದಿಗೆ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ ಎರಡನೇ ಸ್ಥಾನದಲ್ಲಿದೆ.
ಇಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಟೇಬಲ್ ಟಾಪರ್ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಇದುವರೆಗೂ ಒಂದು ಸೋಲು ಕಾಣದ ರಾಜಸ್ಥಾನ ರಾಯಲ್ಸ್ ಎದುರು ತವರಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಯಾವ ರೀತಿಯ ಪ್ರದರ್ಶನ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.