ಅಭ್ಯಾಸ ಪಂದ್ಯ: ಉಮೇಶ್-ಸಿರಾಜ್ ಬೌಲಿಂಗ್‌ ಝಲಕ್‌ ಭಾರತ ಮೇಲುಗೈ

By Suvarna NewsFirst Published Jul 22, 2021, 9:24 AM IST
Highlights

* ಅಭ್ಯಾಸ ಪಂದ್ಯದ ಎರಡನೇ ದಿನವೂ ಭಾರತ ತಂಡಕ್ಕೆ ಭರ್ಜರಿ ಮುನ್ನಡೆ

* ಬೌಲಿಂಗ್‌ನಲ್ಲಿ ಮಿಂಚಿದ ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್

* ಕೊನೆಯ ದಿನದಲ್ಲಿ ಮಯಾಂಕ್-ರೋಹಿತ್ ಬ್ಯಾಟಿಂಗ್‌ನತ್ತ ಚಿತ್ತ

ಡರ್ಹಮ್‌(ಜು.22): ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಗೆ ಸಿದ್ಧತೆ ನಡೆಸಲು ಕೌಂಟಿ ಇಲೆವೆನ್‌ ವಿರುದ್ಧ 3 ದಿನಗಳ ಅಭ್ಯಾಸ ಪಂದ್ಯವನ್ನು ಆಡುತ್ತಿರುವ ಭಾರತ ತಂಡ, ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ವೇಗಿಗಳಾದ ಉಮೇಶ್ ಯಾದವ್‌ ಹಾಗೂ ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ಕೌಂಟಿ ತಂಡ ತಬ್ಬಿಬ್ಬಾಗಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ 311 ರನ್‌ಗಳಿಗೆ ಆಲೌಟ್‌ ಭಾರತ, ಬಳಿಕ ಹಸೀಬ್‌ ಹಮೀದ್‌ (112) ಶತಕದ ಹೊರತಾಗಿಯೂ ಎದುರಾಳಿ ತಂಡಕ್ಕೆ ಮುನ್ನಡೆ ಪಡೆಯಲು ಅವಕಾಶ ನೀಡಲಿಲ್ಲ. 2ನೇ ದಿನದಂತ್ಯಕ್ಕೆ ಕೌಂಟಿ ಇಲೆವೆನ್‌ 9 ವಿಕೆಟ್‌ ನಷ್ಟಕ್ಕೆ 220 ರನ್‌ ಗಳಿಸಿದ್ದು, ಇನ್ನೂ 91 ರನ್‌ಗಳ ಹಿನ್ನಡೆಯಲ್ಲಿದೆ. ಗುರುವಾರ ಪಂದ್ಯದ ಕೊನೆ ದಿನವಾಗಿದೆ.

ಅಭ್ಯಾಸ ಪಂದ್ಯ: ಕೆ.ಎಲ್‌. ರಾಹುಲ್ ಆಕರ್ಷಕ ಶತಕ

ಟೀಂ ಇಂಡಿಯಾ ಪರ ಉಮೇಶ್‌ ಯಾದವ್‌ 3, ಮೊಹಮದ್‌ ಸಿರಾಜ್‌ 2, ಬುಮ್ರಾ, ಶಾರ್ದೂಲ್‌ ಹಾಗೂ ಜಡೇಜಾ ತಲಾ 1 ವಿಕೆಟ್‌ ಪಡೆದರು. ಮೂರನೇ ಹಾಗೂ ಕೊನೆಯ ದಿನದಾಟದಲ್ಲಿ ಟೀಂ ಇಂಡಿಯಾಗೆ ಮತ್ತೊಮ್ಮೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿದೆ. ಈ ಅವಕಾಶವನ್ನು ಟೀಂ ಇಂಡಿಯಾ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ, ಮಯಾಂಕ್ ಅಗರ್‌ವಾಲ್ ಹಾಗೂ ಚೇತೇಶ್ವರ್ ಪೂಜಾರ ಯಾವ ರೀತಿ ಬಳಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.

ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಆಗಸ್ಟ್ 04ರಿಂದ ಟ್ರೆಂಟ್‌ ಬ್ರಿಡ್ಜ್‌ನಲ್ಲಿ ಆರಂಭವಾಗಲಿದೆ. ಇದಾದ ಬಳಿಕ ಆಗಸ್ಟ್ 12ರಿಂದ ಲಾರ್ಡ್ಸ್‌ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯವು ಆರಂಭವಾಗಲಿದೆ.
 

click me!