ಪೋಸ್ಟ್ ಮಾರ್ಟಂ ಬೇಕಾಗಿಲ್ಲ, ಆಟಗಾರರ ಸಾಮರ್ಥ್ಯ ಗೊತ್ತಿದೆ: ಸರಣಿ ಸೋತ ರೋಹಿತ್ ಶರ್ಮಾ

By Kannadaprabha NewsFirst Published Oct 27, 2024, 11:01 AM IST
Highlights

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ತಂಡದ ಬೆಂಬಲಕ್ಕೆ ನಿಂತಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಪುಣೆ: ನ್ಯೂಜಿಲೆಂಡ್ ವಿರುದ್ಧ ಸರಣಿ ಸೋತಿರುವ ಹೊರತಾಗಿಯೂ ಆಟಗಾರರ ಬೆನ್ನಿಗೆ ನಿಂತಿರುವ ನಾಯಕ ರೋಹಿತ್‌ ಶರ್ಮಾ,ಯಾವುದೇ ಆಟಗಾರನ ಸಾಮರ್ಥದ ಮೇಲೆ ನನಗೆ ಅನುಮಾನವಿಲ್ಲ ಎಂದಿದ್ದಾರೆ.

ನ್ಯೂಜಿಲೆಂಡ್ ಎದುರಿನ 2ನೇ ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ತಂಡಕ್ಕೆ ಯಾವುದೇ ಪೋಸ್ಟ್‌ಮಾರ್ಟಂ ಅಗತ್ಯವಿಲ್ಲ. ಆದರೆ ಬ್ಯಾಟರ್‌ಗಳು ಸ್ಪಷ್ಟ ಯೋಜನೆಯೊಂದಿಗೆ ಆಡಬೇಕಾಗಿದೆ. ಇದು ನಾವು ಬಯಸಿದ ಫಲಿತಾಂಶವಲ್ಲ. ನ್ಯೂಜಿಲೆಂಡ್‌ನ ಸವಾಲು ಗೆಲ್ಲಲು ನಮಗೆ ಸಾಧ್ಯವಾಗಲಿಲ್ಲ. ಇದು ಇಡೀ ತಂಡದ ವೈಫಲ್ಯ. ಇದಕ್ಕಾಗಿ ಬ್ಯಾಟ‌ರ್‌ ಅಥವಾ ಬೌಲರ್‌ಗಳನ್ನು ದೂಷಿಸುವುದಿಲ್ಲ, ವಾಂಖೇಡೆ ಟೆಸ್ಟ್‌ನಲ್ಲಿ ಸ್ಪಷ್ಟ ಗುರಿ ಹಾಗೂ ಯೋಜನೆಯೊಂದಿಗೆ ಆಡುತ್ತೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

Latest Videos

ರಣಜಿ ಕ್ರಿಕೆಟ್: ಕರ್ನಾಟಕದ ದಾಳಿಗೆ ತತ್ತರಿಸಿದ ಬಿಹಾರ

ಸರಣಿ ಸೋತಿದ್ದಕ್ಕೆ ನೋವಿದೆ. ಆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಬಗ್ಗೆ ಯೋಚಿಸುತ್ತಾ ಕೂರುವುದಿಲ್ಲ ಎಂದು ರೋಹಿತ್‌ ಶರ್ಮಾ ಹೇಳಿದ್ದಾರೆ. ಭಾರತದ ತವರಿನ ಸತತ 18 ಟೆಸ್ಟ್ ಸರಣಿ ಗೆಲುವಿಗೆ ಜಡೇಜಾ ಹಾಗೂ ಅಶ್ವಿನ್ ಕೊಡುಗೆ ಅಪಾರ. ಆದರೆ ಪ್ರತಿ ಪಂದ್ಯದಲ್ಲೂ ಅವರು ರನ್ ಗಳಿಸಬೇಕೆಂದು ನಿರೀಕ್ಷಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌: ತವರಲ್ಲಿ ಮೊದಲ ಸರಣಿ ಸೋಲು

ಭಾರತ ತಂಡ ತವರಿನಲ್ಲಿ ಆಡಿದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (ಡಬ್ಲ್ಯುಟಿಸಿ) ವ್ಯಾಪ್ತಿಗೆ ಒಳಪಡುವ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಸೋಲುಂಡಿದೆ. ಇನ್ನು ಈ ವರೆಗೂ ನ್ಯೂಜಿಲೆಂಡ್‌ ತವರಿನಾಚೆ ಡಬ್ಲ್ಯುಟಿಸಿ ವ್ಯಾಪ್ತಿಗೆ ಒಳಪಡುವ ಸರಣಿಯನ್ನು ಗೆದ್ದಿರಲಿಲ್ಲ. ಇದೇ ಮೊದಲ ಬಾರಿಗೆ ಆ ಸಾಧನೆ ಮಾಡಿದೆ. ಸದ್ಯ ತವರಿನಲ್ಲಿ ಇನ್ನೂ ಡಬ್ಲ್ಯುಟಿಸಿ ಸರಣಿಯನ್ನು ಸೋಲದ ಏಕೈಕ ತಂಡ ಇಂಗ್ಲೆಂಡ್‌.

ಪುಣೆಯಲ್ಲೂ ಸೋತು 12 ವರ್ಷ ಬಳಿಕ ಟೆಸ್ಟ್ ಸರಣಿ ಕೈಚೆಲ್ಲಿದ ಟೀಂ ಇಂಡಿಯಾಗೆ ಮತ್ತೊಂದು ಶಾಕ್!

ತವರಿನಲ್ಲಿ ಭಾರತದ ಗೆಲುವಿನ ಓಟಕ್ಕೆ ಬ್ರೇಕ್‌!

ಟೀಂ ಇಂಡಿಯಾ 2012ರಲ್ಲಿ ಇಂಗ್ಲೆಂಡ್‌ ವಿರುದ್ಧ ಸರಣಿ ಸೋತ ಬಳಿಕ ಈ ವರೆಗೂ ತವರಿನಲ್ಲಿ ಸತತ 18 ಸರಣಿಗಳನ್ನು ಗೆದ್ದು ವಿಶ್ವ ದಾಖಲೆ ಬರೆದಿತ್ತು. ಭಾರತದ ಗೆಲುವಿನ ಓಟಕ್ಕೆ ನ್ಯೂಜಿಲೆಂಡ್‌ ಬ್ರೇಕ್‌ ಹಾಕಿದೆ.

ತವರಿನಲ್ಲಿ ಅತಿಹೆಚ್ಚು ಟೆಸ್ಟ್‌ ಸರಣಿ ಜಯ

ತಂಡ ಸರಣಿ ಜಯ ಅವಧಿ

ಭಾರತ 18 2012-2024

ಆಸ್ಟ್ರೇಲಿಯಾ 10 1994-2000

ಆಸ್ಟ್ರೇಲಿಯಾ 10 2004-2008

ವೆಸ್ಟ್‌ಇಂಡೀಸ್‌ 08 1976-1986

ನ್ಯೂಜಿಲೆಂಡ್‌ 08 2017-2020

07ನೇ ಬೌಲರ್‌: ಭಾರತ ವಿರುದ್ಧ ಭಾರತದಲ್ಲಿ ಟೆಸ್ಟ್‌ ಪಂದ್ಯವೊಂದರಲ್ಲಿ 10+ ವಿಕೆಟ್‌ ಕಬಳಿಸಿದ 7ನೇ ಬೌಲರ್‌ ಮಿಚೆಲ್‌ ಸ್ಯಾಂಟ್ನರ್‌

1 ವರ್ಷದಲ್ಲಿ ತವರಿನಲ್ಲಿ ಗರಿಷ್ಠ ಟೆಸ್ಟ್‌ ರನ್‌: ಯಶಸ್ವಿ ದಾಖಲೆ

ಯಶಸ್ವಿ ಜೈಸ್ವಾಲ್‌ ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ. ಒಂದು ವರ್ಷದಲ್ಲಿ ತವರಿನಲ್ಲಿ ನಡೆದ ಟೆಸ್ಟ್‌ಗಳಲ್ಲಿ ಅತಿಹೆಚ್ಚು ರನ್‌ ಕಲೆಹಾಕಿದ ಆಟಗಾರ ಎನಿಸಿದ್ದಾರೆ. 2024ರಲ್ಲಿ 1056 ರನ್‌ ಗಳಿಸಿರುವ ಜೈಸ್ವಾಲ್‌, ದಿಗ್ಗಜ ಬ್ಯಾಟರ್‌ ಕರ್ನಾಟಕದ ಜಿ.ಆರ್‌.ವಿಶ್ವನಾಥ್‌ರ ದಾಖಲೆ ಮುರಿದಿದ್ದಾರೆ. ಜಿಆರ್‌ವಿ 1979ರಲ್ಲಿ 1047 ರನ್‌ ಗಳಿಸಿದ್ದರು. ಅದೇ ವರ್ಷ ಸುನಿಲ್‌ ಗವಾಸ್ಕರ್‌ 1013 ರನ್‌ ಕಲೆಹಾಕಿದ್ದರು.
 

click me!