ಪುಣೆಯಲ್ಲೂ ಸೋತು 12 ವರ್ಷ ಬಳಿಕ ಟೆಸ್ಟ್ ಸರಣಿ ಕೈಚೆಲ್ಲಿದ ಟೀಂ ಇಂಡಿಯಾಗೆ ಮತ್ತೊಂದು ಶಾಕ್!

By Chethan Kumar  |  First Published Oct 26, 2024, 4:57 PM IST

ನ್ಯೂಜಿಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ಸೋತ ಟೀಂ ಇಂಡಿಯಾ ಇದೀಗ ಪುಣೆಯಲ್ಲೂ ಮುಗ್ಗರಿಸಿ ಟೆಸ್ಟ್ ಸರಣಿ ಕೈಚೆಲ್ಲಿದೆ. 12 ವರ್ಷಗಳ ಬಳಿಕ ಭಾರತ ತವರಿನಲ್ಲಿ ಟೆಸ್ಟ್ ಸರಣಿ ಸೋತಿದೆ. ಆದರೆ ಈ ಸೋಲು ಭಾರತಕ್ಕೆ ಮತ್ತೊಂದು ಆಘಾತ ನೀಡಿದೆ. 


ಪುಣೆ(ಅ.26) ಟೀಂ ಇಂಡಿಯಾ ತವರಿನಲ್ಲಿ ಒಂದಲ್ಲ ಸತತ 2 ಪಂದ್ಯ ಸೋತು ಟೆಸ್ಟ್ ಸರಣಿಯನ್ನೂ ಸೋತಿದೆ. ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿ 0-2 ಅಂತರದಲ್ಲಿ ಭಾರತ ಕೈಚೆಲ್ಲಿದೆ. ಬರೋಬ್ಬರಿ 12 ವರ್ಷಗಳ ಬಳಿಕ ಭಾರತ ತವರಿನಲ್ಲಿ ಟೆಸ್ಟ್ ಸರಣಿ ಸೋತು ಮುಖಭಂಗಕ್ಕೆ ಒಳಗಾಗಿದೆ. ಟೀಂ ಇಂಡಿಯಾದ ಕಳಪೆ ಪ್ರದರ್ಶನಕ್ಕೆ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಆದರೆ ಈ ಟೆಸ್ಟ್ ಸರಣಿ ಸೋಲು ಟೀಂ ಇಂಡಿಯಾಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿಗೆ ತೀವ್ರ ಹಿನ್ನಡೆ ತಂದಿದೆ. ಕಾರಣ ವಿಶ್ವ ಚಾಂಪಿಯನ್‌ಶಿಪ್ ಟ್ರೋಫಿ ಅಂಕಪಟ್ಟಿಯಲ್ಲಿ ಭಾರತ ಭಾರಿ ಕುಸಿತ ಕಂಡಿದೆ. ಇದರಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅವಕಾಶಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತ 68.06 ಅಂಕಗಳಿಂದ ಇದೀಗ ಸೋಲಿನ ಬಳಿಕ 62.82ಕ್ಕೆ ಕುಸಿತ ಕಂಡಿದೆ. ಇತ್ತ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಅಂಕ 62.5.  ಅಂಕಪಟ್ಟಿಯಲ್ಲಿ ಟಾಪ್ 2 ತಂಡಗಳು ಮಾತ್ರ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಆಡಲಿದೆ. ಸತತವಾಗಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿರುವ ಭಾರತ ಈ ಬಾರಿ ತೀವ್ರ ಹಿನ್ನಡೆ ಅನುಭವಿಸುತ್ತಿದೆ. ಇದೀಗ ಭಾರತಕ್ಕೆ ಉಳಿದಿರುವ 6 ಟೆಸ್ಟ್ ಪಂದ್ಯಗಳಲ್ಲಿ ಭಾರಿ ಅಂತರದ ಗೆಲವು ಸಾಧಿಸಬೇಕಾದ ಅನಿವಾರ್ಯತೆ ಇದೆ. 

Latest Videos

undefined

ದುರಂತ ಅಂತ್ಯ ಕಂಡ ಧೋನಿ ಫಸ್ಟ್ ಲವ್, ಸಾಕ್ಷಿಗಿಂತ ಮೊದಲು ಥಲಾ ಹೃದಯ ಕದ್ದಿದ್ದು ಯಾರು?

ಬೆಂಗಳೂರು ಬಳಿಕ ಪುಣೆ ಟೆಸ್ಟ್ ಪಂದ್ಯದಲ್ಲೂ ಭಾರತ ಕಳಪೆ ಪ್ರದರ್ಶನ ನೀಡಿದೆ. ಪುಣೆ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತೆ ಅಬ್ಬರಿಸಿ ಗೆಲುವಿನ ಸಿಹಿ ಕಂಡಿದೆ. ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 259 ರನ್ ಸಿಡಿಸಿದ್ದರೆ, ಭಾರತ ಕೇವಲ 156 ರನ್‌ಗೆ ಆಲೌಟ್ ಆಗಿತ್ತು. ರವೀಂದ್ರ ಜಡೇಜಾ ಸಿಡಿಸಿದ 38 ರನ್ ಗರಿಷ್ಠ ಮೊತ್ತವಾಗಿತ್ತು. ಇನ್ನುಳಿದ ಎಲ್ಲಾ ಬ್ಯಾಟ್ಸ್‌ಮನ್ ನಿರಾಸೆ ಅನುಭವಿಸಿದ್ದರು. 

ಇತ್ತ ನ್ಯೂಜಿಲೆಂಡ್ 2ನೇ ಇನ್ನಿಂಗ್ಸ್‌ನಲ್ಲಿ 255 ರನ್ ಸಿಡಿಸಿತ್ತು. ಈ ಮೂಲಕ 359 ರನ್ ಟಾರ್ಗೆಟ್ ನೀಡಿತ್ತು. ಆದರೆ ಭಾರತ 2ನೇ ಇನ್ನಿಂಗ್ಸ್‌ನಲ್ಲೂ ಎಚ್ಚೆತ್ತುಕೊಳ್ಳಲಿಲ್ಲ. ಭಾರತಕ್ಕೆ 359 ರನ್ ಟಾರ್ಗೆಟ್ ಚೇಸ್ ಮಾಡುವುದು ಅಸಾಧ್ಯವಾಗಿರಲಿಲ್ಲ. ಆದರೆ ತಾಳ್ಮೆ ಯಾವ ಬ್ಯಾಟ್ಸ್‌ಮನ್‌ನಲ್ಲೂ ಕಾಣಲಿಲ್ಲ. 2ನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ರವೀಂದ್ರ ಜಡೇಜಾ ಹೋರಾಟ ಹೊರತುಪಡಿಸಿದರೆ ಇನ್ನುಳಿದವರು ಅಷ್ಟಕಷ್ಟೆ. ಭಾರತ  245 ರನ್ ಸಿಡಿಸಿ ಆಲೌಟ್ ಆಗಿದೆ. ಮಿಚೆಲ್ ಸ್ಯಾಂಟ್ನರ್ ಮೋಡಿಗೆ ಭಾರತ ಉರುಳಿ ಬಿದ್ದಿತ್ತು. 

ಪುಣೆ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ 113 ರನ್ ಗೆಲುವು ದಾಖಲಿಸಿತು. 3 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಗೆಲುವು ದಾಖಲಿಸಿ ಈಗಾಗಲೇ ಸರಣಿ ವಶಪಡಿಸಿಕೊಂಡಿದೆ. ಪುಣೆ ಟೆಸ್ಟ್ ಪಂದ್ಯವನ್ನು ನ್ಯೂಜಿಲೆಂಡ್ ಕೇವಲ 3 ದಿನದಲ್ಲಿ ಗೆದ್ದುಕೊಂಡಿದೆ. ಇದೀಗ ಮುಂಬೈನಲ್ಲಿ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ಮುಖಭಂಗ, ವೈಟ್ ವಾಶ್ ತಪ್ಪಿಸಲು ಕೊನೆಯ ಪಂದ್ಯದಲ್ಲಿ ಭಾರತ ಗೆಲ್ಲಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಭಾರತ ಸೋಲಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಆಗುತ್ತಿದೆ. ಬೆಂಗಳೂರು, ಪುಣೆಯಲ್ಲಿ ಸೋಲು ಕಂಡ ಟೀಂ ಇಂಡಿಯಾ ಕ್ರಿಕೆಟಿಗರ ವಿರುದ್ದ ಅಭಿಮಾನಿಗಳು ಗರಂ ಆಗಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರು ಆಟಕ್ಕಿಂತ ಪಿಕ್‌ನಿಕ್ ಮಾಡುತ್ತಿದ್ದಾರೆ. 3 ದಿನಕ್ಕೆ ಪಂದ್ಯ ಮುಗಿಸಿ ಮಜಾ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಂ ಇಂಡಿಯಾ ಎಲ್ಲಾ ಮಾದರಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗುತ್ತಿದೆ.

ಪುಣೆ ಟೆಸ್ಟ್‌ನಲ್ಲಿ ಕೊಹ್ಲಿ ಮತ್ತೆ ಫೇಲ್ ಬೆನ್ನಲ್ಲೇ ವಿರಾಟ್‌ಗೆ ಅನಿಲ್ ಕುಂಬ್ಳೆ ಕಿವಿಮಾತು
 

click me!