Pink Ball Test: ಬೆಂಗಳೂರು ಟೆಸ್ಟ್‌ನಿಂದ ಹೊರಬಿದ್ದ ದುಸ್ಮಂತ ಚಮೀರಾ..!

Suvarna News   | Asianet News
Published : Mar 11, 2022, 07:21 PM IST
Pink Ball Test: ಬೆಂಗಳೂರು ಟೆಸ್ಟ್‌ನಿಂದ ಹೊರಬಿದ್ದ ದುಸ್ಮಂತ ಚಮೀರಾ..!

ಸಾರಾಂಶ

* ಭಾರತ-ಶ್ರೀಲಂಕಾ ತಂಡಗಳ ನಡುವಿನ ಪಿಂಕ್ ಬಾಲ್ ಟೆಸ್ಟ್‌ ಪಂದ್ಯಕ್ಕೆ ಕ್ಷಣಗಣನೆ * ಮಾರ್ಚ್‌ 12ರಿಂದ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಿಂಕ್ ಬಾಲ್ ಟೆಸ್ಟ್ * ಎರಡನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಶಾಕ್

ಬೆಂಗಳೂರು(ಮಾ.11): ಭಾರತ ಹಾಗೂ ಶ್ರೀಲಂಕಾ (India vs Sri Lanka) ತಂಡಗಳ ನಡುವಿನ ಪಿಂಕ್ ಬಾಲ್ ಟೆಸ್ಟ್ (Pink Ball Test) ಪಂದ್ಯವು ಮಾರ್ಚ್ 12ರಿಂದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಎರಡನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಪ್ರವಾಸಿ ಶ್ರೀಲಂಕಾ ತಂಡಕ್ಕೆ ದೊಡ್ಡ ಹಿನ್ನೆಡೆಯೊಂದು ಎದುರಾಗಿದ್ದು, ತಂಡದ ಸ್ಟಾರ್ ವೇಗಿ ದುಸ್ಮಂತ ಚಮೀರಾ (Dushmantha Chameera) ಎರಡನೇ ಟೆಸ್ಟ್‌ ಪಂದ್ಯದಿಂದಲೂ ಹೊರಬಿದ್ದಿದ್ದಾರೆ. ಚಮೀರಾ ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಿಂದಲೂ ಹೊರಗುಳಿದಿದ್ದರು. ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾ ತಂಡವು, ಟೀಂ ಇಂಡಿಯಾ ಎದುರು ಇನಿಂಗ್ಸ್ ಹಾಗೂ 222 ರನ್‌ಗಳ ಅಂತರದ ಹೀನಾಯ ಸೋಲು ಕಂಡಿತ್ತು. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಲಂಕಾ ತಂಡವು 0-1ರ ಹಿನ್ನೆಡೆ ಅನುಭವಿಸಿದೆ

ಮುಂಬರುವ ಕ್ರಿಕೆಟ್ ಸರಣಿ ಹಾಗೂ ಫ್ರಾಂಚೈಸಿ ಟಿ20 ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ದುಸ್ಮಂತ ಚಮೀರಾಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ವಿಶ್ರಾಂತಿಯನ್ನು ನೀಡಿದೆ. ದುಸ್ಮಂತ ಚಮೀರಾ ಮುಂಬರುವ ದಿನಗಳಲ್ಲಿ ಸಾಕಷ್ಟು ಕ್ರಿಕೆಟ್‌ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ವರ್ಕ್‌ಲೋಡ್ ಮ್ಯಾನೇಜ್‌ ಮಾಡುವ ಉದ್ದೇಶದಿಂದ ಚಮೀರಾಗೆ ವಿಶ್ರಾಂತಿ ನೀಡಲಾಗಿದೆ. ಇದಷ್ಟೇ ಅಲ್ಲದೇ ದುಸ್ಮಂತ ಚಮೀರಾ ಇದೇ ಮಾರ್ಚ್ 26ರಿಂದ ಆರಂಭವಾಗಲಿರುವ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಯೂ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್‌ ಫ್ರಾಂಚೈಸಿಯು 2 ಕೋಟಿ ರುಪಾಯಿ ನೀಡಿ ವೇಗಿ ದುಸ್ಮಂತ ಚಮೀರಾ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.

ದಿ ಐಲ್ಯಾಂಡ್‌ ವರದಿಯ ಪ್ರಕಾರ, ದುಸ್ಮಂತ ಚಮೀರಾ ಅವರ ವರ್ಕ್‌ಲೋಡ್ ನಿಭಾಯಿಸುವ ಉದ್ದೇಶದಿಂದ ಅವರಿಗೆ ವಿಶ್ರಾಂತಿ ನೀಡಬೇಕು ಎಂದು ವೈದ್ಯಕೀಯ ಸಿಬ್ಬಂದಿಯು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ತಿಳಿಸಿದೆ. ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯವರೆಗೂ ದುಸ್ಮಂತ ಚಮೀರಾ ಕೇವಲ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವಂತೆಯೂ ಸಲಹೆಯನ್ನು ನೀಡಲಾಗಿದೆ. 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯದ ಬಳಿಕ ಮರು ವರ್ಷ ಅಂದರೆ 2023ರಲ್ಲಿ ಏಕದಿನ ವಿಶ್ವಕಪ್‌ ಟೂರ್ನಿಯು ನಡೆಯಲಿದ್ದು, ಈ ಟೂರ್ನಿಗೆ ಭಾರತ ಆತಿಥ್ಯವನ್ನು ವಹಿಸಲಿದೆ.

Pink Ball Test: ಗಾಯದ ಮೇಲೆ ಬರೆ, 2ನೇ ಟೆಸ್ಟ್‌ನಿಂದ ಶ್ರೀಲಂಕಾ ಸ್ಟಾರ್ ಬ್ಯಾಟರ್ ಔಟ್‌..!

ಶ್ರೀಲಂಕಾ ಕ್ರಿಕೆಟ್ ತಂಡವು (Sri Lanka Cricket Team) ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಈಗಾಗಲೇ ಅಗ್ರಕ್ರಮಾಂಕದ ಬ್ಯಾಟರ್‌ ಪಥುಮ ನಿಸ್ಸಾಂಕ ಅವರ ಸೇವೆಯಿಂದ ವಂಚಿತರಾಗುವ ಸಾಧ್ಯತೆ ದಟ್ಟವಾಗಿದೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ನಿಸ್ಸಾಂಕ ಅವರಿಗೆ ವಿಶ್ರಾಂತಿ ಪಡೆಯಲು ಲಂಕಾ ಕ್ರಿಕೆಟ್‌ನ ವೈದ್ಯಕೀಯ ಸಿಬ್ಬಂದಿ ಸೂಚಿಸಿದೆ ಎಂದು ವರದಿಯಾಗಿದೆ. 23 ವರ್ಷದ ಬ್ಯಾಟರ್ ಪಥುಮ ನಿಸ್ಸಾಂಕ, ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 113 ಎಸೆತಗಳನ್ನು ಎದುರಿಸಿ 61 ರನ್ ಬಾರಿಸುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳೆದುರು ಕೊಂಚ ಪ್ರತಿರೋಧ ತೋರಿದ್ದರು. ಒಂದು ವೇಳೆ ಪಥುಮ ನಿಸ್ಸಾಂಕ, ಬೆಂಗಳೂರಿನಲ್ಲಿ ನಡೆಯಲಿರುವ ಹಗಲು-ರಾತ್ರಿ ಟೆಸ್ಟ್ (Day and Night Test) ಪಂದ್ಯದಿಂದ ಹೊರಗುಳಿದರೆ, ಅನುಭವಿ ಆಟಗಾರರಾದ ದಿನೇಶ್ ಚಾಂಡಿಮಲ್ ಇಲ್ಲವೇ ಕುಸಾಲ್ ಮೆಂಡೀಸ್‌ ಲಂಕಾ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಇದೇ ಮೊದಲ ಬಾರಿಗೆ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯಕ್ಕೆ ಆತಿಥ್ಯವನ್ನು ವಹಿಸುತ್ತಿದೆ. ಕೋವಿಡ್ ಪ್ರಕರಣಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ 100% ಪ್ರೇಕ್ಷಕರು ಮೈದಾನ ಪ್ರವೇಶಕ್ಕೆ ಬಿಸಿಸಿಐ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!
ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ