SA20 League: ಫಿಲ್ ಸಾಲ್ಟ್ ಅಬ್ಬರ, ಪ್ರಿಟೋರಿಯಾ ಕ್ಯಾಪಿಟಲ್ಸ್‌ಗೆ ಭರ್ಜರಿ ಜಯ

By Naveen KodaseFirst Published Jan 13, 2023, 12:51 PM IST
Highlights

SA20 League ಟೂರ್ನಿಯಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಶುಭಾರಂಭ
ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ ಫಿಲ್ ಸಾಲ್ಟ್‌
ಈಸ್ಟರ್ನ್‌ ಕೇಪ್‌ ತಂಡದ ಎದುರು ಪ್ರಿಟೋರಿಯಾ ಕ್ಯಾಪಿಟಲ್ಸ್‌ ಜಯಭೇರಿ

ಸಹರಾ ಓವೆಲ್(ಜ.13): ಫಿಲ್ ಸಾಲ್ಟ್‌ ವಿಸ್ಪೋಟಕ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ತಂಡದ ಎದುರು ಪ್ರಿಟೋರಿಯಾ ಕ್ಯಾಪಿಟಲ್ಸ್‌ ತಂಡವು 23 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಚೊಚ್ಚಲ ಆವೃತ್ತಿಯ SA20 League ಟೂರ್ನಿಯಲ್ಲಿ ವೇಯ್ನ್ ಪಾರ್ನೆಲ್ ನೇತೃತ್ವದ ಪ್ರಿಟೋರಿಯಾ ಕ್ಯಾಪಿಟಲ್ಸ್‌ ತಂಡವು ಶುಭಾರಂಭ ಮಾಡಿದೆ.

ಇಲ್ಲಿನ ಸೇಂಟ್ ಜಾರ್ಜ್‌ ಪಾರ್ಕ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು ಆರಂಭದಲ್ಲೇ ವಿಲ್ ಜೇಕ್ಸ್ ಹಾಗೂ ರೂಸೌ ಒಂದಂಕಿ ಮೊತ್ತಕ್ಕೆ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ವಿಕೆಟ್ ಕೀಪರ್ ಬ್ಯಾಟರ್ ಫಿಲ್ ಸಾಲ್ಟ್ ಬಾರಿಸಿದ ಆಕರ್ಷಕ ಅರ್ಧಶತಕ(77)ದ ನೆರವಿನಿಂದ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.  ಫಿಲ್ ಸಾಲ್ಟ್‌ 47 ಎಸೆತಗಳಲ್ಲಿ 11 ಬೌಂಡರಿ ಸಹಿತ 77 ರನ್‌ ಬಾರಿಸಿ ಅಜೇಯರಾಗುಳಿದರು.

ಇನ್ನುಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಟ್ಯುನಿಶ್ ಡಿ ಬ್ರಯಾನ್(19) ಹಾಗೂ ಸೆನರಣ್ ಮುತ್ತುಸ್ವಾಮಿ(13) ಉಪಯುಕ್ತ ರನ್ ಕಾಣಿಕೆ ನೀಡಿದರು. ಒಂದು ಹಂತದಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು 9.3 ಓವರ್‌ಗಳಿಗೆ 80 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಆದರೆ ಆರನೇ ವಿಕೆಟ್‌ಗೆ ಜೇಮ್ಸ್ ನೀಶಮ್ ಹಾಗೂ ಫಿಲ್ ಸಾಲ್ಟ್‌ ಸ್ಪೋಟಕ 77 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಜೇಮ್ಸ್ ನೀಶಮ್ ಕೇವಲ 28 ಎಸೆತಗಳಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 37 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ನಾಯಕ ವೇಯ್ನ್ ಪಾರ್ನೆಲ್‌ ಕೇವಲ 9 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ  29 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 190ರ ಗಡಿ ದಾಟಿಸಿದರು. ಅಂತಿಮವಾಗಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 6  ವಿಕೆಟ್ ಕಳೆದುಕೊಂಡು 193 ರನ್‌ ಕಲೆಹಾಕಿತು.

SA20 Squads: ಸೌಥ್ ಆಫ್ರಿಕಾ 20 ಲೀಗ್ ಟೂರ್ನಿಯಲ್ಲಿ ಯಾವ ತಂಡದಲ್ಲಿ ಯಾರಿದ್ದಾರೆ? ಇಲ್ಲಿದೆ ಕಂಪ್ಲೀಟ್

ಇನ್ನು ಸವಾಲಿನ ಗುರಿ ಬೆನ್ನತ್ತಿದ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್ ತಂಡದ ಆರಂಭ ಕೂಡಾ ಅಷ್ಟೇನೂ ಉತ್ತಮವಾಗಿರಲಿಲ್ಲ. ಆರಂಭಿಕ ಬ್ಯಾಟರ್ ಸರೇಲ್‌ ಎರ್ವಿ(1), ಜೋಡರ್ನ್ ಕಾಕ್ಸ್ (5) ಹಾಗೂ ನಾಯಕ ಏಯ್ಡನ್‌ ಮಾರ್ಕ್‌ರಮ್‌(5) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಒಂದು ಹಂತದಲ್ಲಿ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್ ತಂಡವು 34 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಆದರೆ 4ನೇ ವಿಕೆಟ್‌ಗೆ ಜೆಜೆ ಸ್ಮುಟ್ಸ್‌ ಹಾಗೂ ಟ್ರಿಸ್ಟಿನ್ ಸ್ಟಬ್ಸ್‌ 38 ರನ್‌ಗಳ ಜತೆಯಾಟವಾಡಿದರು. ಸ್ಟಬ್ಸ್‌ 23 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಆರಂಭಿಕ ಬ್ಯಾಟರ್ ಜೆಜೆ ಸ್ಮುಟ್ಸ್‌ 51 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 66 ರನ್ ಬಾರಿಸಿ ಆದಿಲ್ ರಶೀದ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಇನ್ನು ಕೊನೆಯಲ್ಲಿ ಟಾಮ್ ಅಬೆಲ್‌(40*) ಹಾಗೂ ಜೇಮ್ಸ್‌ ಪುಲ್ಲರ್(27*) ಸ್ಪೋಟಕ ಬ್ಯಾಟಿಂಗ್ ನಡೆಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಪ್ರಿಟೋರಿಯಾ ಕ್ಯಾಪಿಟಲ್ಸ್ ಪರ ವೇಗಿ ಏನ್ರಿಚ್ ನೋಕಿಯಾ 2 ವಿಕೆಟ್ ಪಡೆದರೆ, ಆದಿಲ್ ರಶೀದ್, ವೇಯ್ನ್ ಪಾರ್ನೆಲ್‌ ಹಾಗೂ ಜೇಮ್ಸ್‌ ನೀಶಮ್ ತಲಾ ಒಂದೊಂದು ವಿಕೆಟ್‌ ಪಡೆದರು.

click me!