ಪೆನ್‌ ಪಾಯಿಂಟ್‌ ಕ್ರಿಕೆಟ್‌: ಸತತ 2ನೇ ಬಾರಿ ಬ್ಲೂ ಹಂಟರ್ಸ್‌ ಚಾಂಪಿಯನ್ಸ್‌

By Naveen Kodase  |  First Published Dec 28, 2024, 2:47 PM IST

ಪೆನ್ ಪಾಯಿಂಟ್ ಸ್ನೇಹ ವೇದಿಕೆ ಆಯೋಜಿಸಿದ ಕ್ರಿಕೆಟ್ ಫೆಸ್ಟ್‌ನಲ್ಲಿ ಬ್ಲೂ ಹಂಟರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಲೀಗ್ ಹಂತದಲ್ಲಿ ಅಜೇಯರಾಗಿ ಫೈನಲ್‌ ಪ್ರವೇಶಿಸಿದ ಬ್ಲೂ ಹಂಟರ್ಸ್, ವಿಶನ್ ಕಿಂಗ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.


ಪುತ್ತೂರು: ಸಾಮಾಜಿಕ ಹೋರಾಟ, ಕಾರ್ಯಾಗಾರ, ಬಡವರಿಗೆ ವೈದ್ಯಕೀಯ ಹಾಗೂ ಶೈಕ್ಷಣಿಕ ಕ್ಷೇತ್ರದ ಆರ್ಥಿಕ ಸಹಾಯ ಸೇರಿದಂತೆ ವಿವಿಧ ಸಮಾಜ ಸೇವೆಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ‘ಪೆನ್‌ ಪಾಯಿಂಟ್‌ ಸ್ನೇಹ ವೇದಿಕೆ’ ಆಯೋಜಿಸಿದ 4ನೇ ಆವೃತ್ತಿಯ ಕ್ರಿಕೆಟ್‌ ಫೆಸ್ಟ್‌ನಲ್ಲಿ ಬ್ಲೂ ಹಂಟರ್ಸ್‌ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಕಳೆದ ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿದ್ದ ಬ್ಲೂ ಹಂಟರ್ಸ್‌ ಸತತ 2ನೇ ಬಾರಿಯೂ ಚಾಂಪಿಯನ್‌ ಪಟ್ಟ ಅಲಂಕರಿಸಿತು.
 
ಬುಧವಾರ ಪುತ್ತೂರಿನ ಕೊಂಬೆಟ್ಟು ಕಾಲೇಜು ಮೈದಾನದಲ್ಲಿ ನಡೆದ ಟೂರ್ನಿಯುದ್ದಕ್ಕೂ ಉದ್ಯಮಿ ಇರ್ಫಾನ್‌ ಕನ್ಯಾರಕೋಡಿ ಮಾಲಕತ್ವದ, ಇಸಾಕ್‌ ಸಜಿಪ ನಾಯಕತ್ವದ ಬ್ಲೂ ಹಂಟರ್ಸ್‌ ಪ್ರಾಬಲ್ಯ ಸಾಧಿಸಿತು. ಲೀಗ್‌ ಹಂತದಲ್ಲಿ ಎಲ್ಲಾ 4 ಪಂದ್ಯಗಳಲ್ಲಿ ಗೆದ್ದು ನೇರವಾಗಿ ಫೈನಲ್‌ ಪ್ರವೇಶಿಸಿದ್ದ ತಂಡ, ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಸಾಬಿತ್‌ ಕುಂಬ್ರ ನಾಯಕತ್ವದ ವಿಶನ್‌ ಕಿಂಗ್ಸ್‌ ವಿರುದ್ಧ ರೋಚಕ ಗೆಲುವು ಸಾಧಿಸಿತು.

ರೋಚಕ ಸೆಣಸಾಟ: ಟೂರ್ನಿಯಲ್ಲಿ ಈ ಬಾರಿ ಒಟ್ಟು 5 ತಂಡಗಳು ಪಾಲ್ಗೊಂಡವು. ಬ್ಲೂ ಹಂಟರ್ಸ್‌, ವಿಶನ್‌ ಕಿಂಗ್ಸ್‌ ಜೊತೆ ಸರ್ಫರಾಜ್‌ ವಳಾಲ್‌ ಒಡೆತನದ ಐ-ಮೇಡ್‌ ವಾರಿಯರ್ಸ್‌, ಶಾಕಿರ್‌ ಹಕ್‌ ನೆಲ್ಯಾಡ್ ಸಾರಥ್ಯದ ಮಾಜಿ ಚಾಂಪಿಯನ್‌ ರಾಯಲ್‌ ಇಂಡಿಯನ್ಸ್‌, ಅಶ್ರಫ್ ಕಟ್ಟದಪಡ್ಪು ಮಾಲಕತ್ವದ ಚಾಲೆಂಜರ್ಸ್‌ ತಂಡಗಳ ನಡುವೆ ರೋಚಕ ಪೈಪೋಟಿ ಏರ್ಪಟ್ಟಿತು. ಲೀಗ್‌ ಹಂತದಲ್ಲಿ ಬ್ಲೂ ಹಂಟರ್ಸ್‌ ಅಗ್ರಸ್ಥಾನಿಯಾದರೆ, ಕೆ.ಎಂ.ಶರೀಫ್‌ ನಾಯಕತ್ವದ ಐ-ಮೇಡ್‌ ವಾರಿಯರ್ಸ್‌ 2ನೇ, ವಿಶನ್‌ ಕಿಂಗ್ಸ್‌ 3ನೇ ಸ್ಥಾನ ಪಡೆದವು. ಸೆಮಿಫೈನಲ್‌ನಲ್ಲಿ ಐ-ಮೇಡ್‌ ತಂಡವನ್ನು ಸೋಲಿಸಿ ವಿಶನ್‌ ಕಿಂಗ್ಸ್‌ ಫೈನಲ್‌ ಪ್ರವೇಶಿಸಿತು. ರಾಯಲ್‌ ಇಂಡಿಯನ್ಸ್‌ ಹಾಗೂ ಚಾಲೆಂಜರ್ಸ್‌ ತಂಡಗಳು ಗುಂಪು ಹಂತದಲ್ಲೇ ನಿರ್ಗಮಿಸಿದವು.

Tap to resize

Latest Videos

undefined

ಬ್ಲೂ ಹಂಟರ್ಸ್‌ ಚಾಂಪಿಯನ್‌ ಪಟ್ಟಕ್ಕೇರಿಸಲು ಪ್ರಮುಖ ಪಾತ್ರ ವಹಿಸಿದ ಸ್ಟಾರ್‌ ಆಟಗಾರ ಜಮಾಲ್‌ ಕಲ್ಲಡ್ಕ ಸರಣಿಶ್ರೇಷ್ಠ ಹಾಗೂ ಫೈನಲ್‌ನ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬ್ಯಾಟಿಂಗ್‌, ಬೌಲಿಂಗ್‌ ಜೊತೆ ಫೀಲ್ಡಿಂಗ್‌ನಲ್ಲೂ ಅತ್ಯಾಕರ್ಷದ ಪ್ರದರ್ಶನ ನೀಡಿದ ಸಾಬಿತ್‌ ಮೀನಾವು ಶ್ರೇಷ್ಠ ಆಲ್ರೌಂಡರ್‌ ಪ್ರಶಸ್ತಿಗೆ ಭಾಜನರಾದರು.

ವಿಶನ್‌ ಕಿಂಗ್ಸ್‌ನ ತನ್ಸೀಫ್‌ ಬಿ.ಎಂ. ಶ್ರೇಷ್ಠ ಬ್ಯಾಟ್ಸ್‌ಮನ್‌, ಮುಸ್ತಫಾ ದೇರಾಜೆ ಶ್ರೇಷ್ಠ ಬೌಲರ್‌, ಐ-ಮೇಡ್‌ ತಂಡದ ಕೆ.ಎಂ.ಶರೀಫ್‌ ಶ್ರೇಷ್ಠ ಫೀಲ್ಡರ್, ರಾಯಲ್ಸ್‌ ಇಂಡಿಯನ್ಸ್‌ನ ಅನ್ಸಾರ್‌ ಕಾಟಿಪಳ್ಳ ಶ್ರೇಷ್ಠ ವಿಕೆಟ್‌ ಕೀಪರ್‌ ಪ್ರಶಸ್ತಿ ಪಡೆದರು.
 

click me!