
ಸಿಡ್ನಿ: ತಮ್ಮ ಕ್ರಿಕೆಟ್ ಕೆರಿಯರ್‌ನಲ್ಲಿ ತಾವು ಎದುರಿಸಿದ ಅತ್ಯಂತ ಕಠಿಣ ಭಾರತೀಯ ಆಟಗಾರ ಚೇತೇಶ್ವರ್ ಪೂಜಾರ ಎಂದು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ. ಎದುರಾಳಿ ಬೌಲರ್‌ಗಳಿಗೆ ವಿಕೆಟ್ ಪಡೆಯಲು ಅತಿ ಹೆಚ್ಚು ಕಾಟ ಕೊಟ್ಟ ಆಟಗಾರರಲ್ಲಿ ಪೂಜಾರ ಕೂಡ ಒಬ್ಬರು. ಕ್ರೀಸ್‌ನಲ್ಲಿ ಗಂಟೆಗಟ್ಟಲೆ ನಿಲ್ಲುವ ಅವರ ಛಲ ಎದುರಾಳಿ ಬೌಲರ್‌ಗಳನ್ನು ಸುಸ್ತು ಮಾಡುತ್ತಿತ್ತು ಎಂದು ಕಮಿನ್ಸ್ ವಿವರಿಸಿದ್ದಾರೆ. ಪ್ರೈಮ್ ವಿಡಿಯೋ ಸ್ಪೋರ್ಟ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಕಮಿನ್ಸ್ ಈ ವಿಚಾರ ರಿವೀಲ್ ಮಾಡಿದ್ದಾರೆ.
"ಭಾರತದ ವಿಚಾರಕ್ಕೆ ಬಂದರೆ ನಾನು ಪೂಜಾರ ಹೆಸರು ಹೇಳ್ತೀನಿ. ಅವರನ್ನು ಔಟ್ ಮಾಡುವುದು ತುಂಬಾನೇ ಕಷ್ಟ. ನೂರು ಡಾಟ್ ಬಾಲ್ ಆಡಿದರೂ ಬೇಸರ ಮಾಡಿಕೊಳ್ಳದ, ಎದುರಾಳಿಗಳಿಗೆ ಯಾವುದೇ ಅವಕಾಶ ಕೊಡದ ಶೈಲಿ ಅವರದ್ದು" ಎಂದಿದ್ದಾರೆ. ಭಾರತದ ಪರ 103 ಟೆಸ್ಟ್ ಪಂದ್ಯಗಳನ್ನು ಆಡಿರುವ ಪೂಜಾರ, 43.60ರ ಸರಾಸರಿಯಲ್ಲಿ 19 ಶತಕಗಳೊಂದಿಗೆ 7,195 ರನ್ ಗಳಿಸಿದ್ದಾರೆ. ಕಳೆದ ವರ್ಷವಷ್ಟೇ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.
ತಾವು ಎದುರಿಸಿದ ವಿವಿಧ ದೇಶಗಳ ಅತ್ಯುತ್ತಮ ಆಟಗಾರರ ಹೆಸರುಗಳನ್ನೂ ಕಮಿನ್ಸ್ ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಪಾಕಿಸ್ತಾನದಿಂದ ಮಾಜಿ ಸ್ಪಿನ್ನರ್ ಸಯೀದ್ ಅಜ್ಮಲ್ ಅವರನ್ನು ಕಮಿನ್ಸ್ ಆಯ್ಕೆ ಮಾಡಿದ್ದಾರೆ. ಅಜ್ಮಲ್ ತರಹದ ಬೌಲರ್ ಅನ್ನು ತಾನು ಹಿಂದೆಂದೂ ನೋಡಿರಲಿಲ್ಲ ಎಂದು ಅವರು ನೆನಪಿಸಿಕೊಂಡಿದ್ದಾರೆ.
ಅಲೆಸ್ಟರ್ ಕುಕ್ (ಇಂಗ್ಲೆಂಡ್), ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ), ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್), ತಿಲಕರತ್ನೆ ದಿಲ್ಶಾನ್ (ಶ್ರೀಲಂಕಾ) ಮತ್ತು ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) ಕಮಿನ್ಸ್ ಪಟ್ಟಿಯಲ್ಲಿರುವ ಇತರ ಸ್ಟಾರ್ ಆಟಗಾರರು. ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರದ ಆಟಗಾರರನ್ನು ಮಾತ್ರ ಕಮಿನ್ಸ್ ಈ ಪಟ್ಟಿಗೆ ಸೇರಿಸಿದ್ದಾರೆ.
ಈ ನಡುವೆ, ತಲಾ ಮೂರು ಏಕದಿನ ಹಾಗೂ ಟೆಸ್ಟ್ ಪಂದ್ಯಗಳ ಸರಣಿಗಾಗಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಜ್ಜಾಗುತ್ತಿದೆ. ಜಿಂಬಾಬ್ವೆ ಸರಣಿಯ ಬಳಿಕ ಕಮಿನ್ಸ್ ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆ ಬಳಿಕ ಅಕ್ಟೋಬರ್ 9ರಿಂದ ಟೆಸ್ಟ್ ಪಂದ್ಯಗಳು ಶುರುವಾಗಲಿವೆ.
ರಾಜ್‌ಕೋಟ್: ಯಶವರ್ಧನ್ ಚೌಹಾಣ್ ಆಲ್ರೌಂಡ್ ಆಟ, ಅನ್ವಯ್ ದ್ರಾವಿಡ್ ಹಾಗೂ ಆರ್ಯವೀರ್ ಸೆಹ್ವಾಗ್ ಉತ್ತಮ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ಅಂಡರ್-19 ವಿರುದ್ಧ ಮೊದಲ ಯೂತ್ ಏಕದಿನ ಪಂದ್ಯದಲ್ಲಿ ಭಾರತ ಅಂಡರ್-19 ತಂಡ 7 ರನ್ ಗೆಲುವು ಸಾಧಿಸಿದೆ. ಮಳೆಯಿಂದಾಗಿ ತಲಾ 20 ಓವರ್ ಆಟ ನಡೆಯಿತು. ಭಾರತ 6 ವಿಕೆಟ್‌ಗೆ 182 ರನ್ ಗಳಿಸಿತು. ಯಶವರ್ಧನ್ 54, ಅನ್ವಯ್ 18 ಎಸೆತದಲ್ಲಿ 38, ಆರ್ಯವೀರ್ 28 ರನ್ ಗಳಿಸಿದರು. ದೊಡ್ಡ ಗುರಿ ಬೆನ್ನತ್ತಿದ ಆಸೀಸ್ 7 ವಿಕೆಟ್‌ಗೆ 175 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಬೌಲಿಂಗ್‌ನಲ್ಲೂ ಮಿಂಚಿದ ಯಶವರ್ಧನ್ 2 ವಿಕೆಟ್ ಕಿತ್ತರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.