
ಬೆಂಗಳೂರು (ಡಿ.19): ಐಪಿಎಲ್‌ನಲ್ಲಿ ಅದೆಷ್ಟೇ ದೇಶೀಯ ಆಟಗಾರರು ಬಂದಿರಲಿ, ಹರಾಜಿನಲ್ಲಿ ಮಿಂಚೋದು ಮಾತ್ರ ವಿದೇಶಿ ಆಟಗಾರರು. ಈ ಬಾರಿಯೂ ಕೂಡ ಐಪಿಎಲ್‌ನಲ್ಲಿ ವಿದೇಶಿ ಆಟಗಾರ ಅತ್ಯಂತ ಇತಿಹಾಸದಲ್ಲಿಯೇ 2ನೇ ಅತ್ಯಂತ ದುಬಾರಿ ಪ್ಲೇಯರ್ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ತಂಡವನ್ನು ವಿಶ್ವಕಪ್ ವೇದಿಕೆಯಲ್ಲಿ ಚಾಂಪಿಯನ್ ಮಾಡಿದ್ದ ಪ್ಯಾಟ್ ಕಮ್ಮಿನ್ಸ್ ಹರಾಜಿನಲ್ಲೂ ದೊಡ್ಡ ಮೊತ್ತಕ್ಕೆ ಸೇಲ್ ಆಗ್ತಾರೆ ಎನ್ನುವ ನಿರೀಕ್ಷೆ ಎಲ್ಲರಲ್ಲಿಯೂ ಇತ್ತು. ಆದರೆ, 20 ಕೋಟಿಯ ಮಾರ್ಕ್ ದಾಟುವ ನಿರೀಕ್ಷೆ ಇದ್ದಿರಲಿಲ್ಲ. ಆದರೆ, ಎಲ್ಲರ ನಿರೀಕ್ಷೆಯನ್ನೂ ಮೀರಿದ ಪ್ಯಾಟ್ಸ್ ಕಮ್ಮಿನ್ಸ್ 20.50 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿಕೊಂಡಿದ್ದಾರೆ. ಸನ್‌ರೈಸರ್ಸ್ ತಂಡದ ಒಡತಿ ಕಾವ್ಯಾ ಮಾರನ್, ಪ್ಯಾಟ್ ಕಮ್ಮಿನ್ಸ್‌ರನ್ನು ಖರೀದಿ ಮಾಡಿದ ಬಳಿಕ ಅವರ ರಿಯಾಕ್ಷನ್ ಕೂಡ ವೈರಲ್ ಆಗಿದೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪ್ಯಾಟ್ ಕಮ್ಮಿನ್ಸ್‌ಗೆ 20 ಕೋಟಿ ನೀಡಿರುವುದು ಓವರ್‌ಪ್ರೈಸ್ ಎಂದು ಕೆಲವರು ಟೀಕಿಸಿದ್ದರೆ, ಇನ್ನೂ ಕೆಲವರು ಇದು ಪ್ಯಾಟ್ ಕಮ್ಮಿನ್ಸ್ ಲೀಗ್‌ಗಿಂತ ದೇಶವೇ ಮುಖ್ಯ ಎಂದು ಆಡಿದ್ದಕ್ಕೆ ಸಿಕ್ಕಿರುವ ಬಹುಮಾನ ಎಂದು ವಿಶ್ಲೇಷಣೆ ಮಾಡಿದ್ದಾರೆ.
ಹೌದು, ಈ ಬಾರಿಯ ಐಪಿಎಲ್‌ನಲ್ಲಿ 20.50 ಕೋಟಿ ರೂಪಾಯಿಗೆ ಮಾರಾಟವಾಗಿರುವ ಪ್ಯಾಟ್ ಕಮ್ಮಿನ್ಸ್, ಕಳೆದ ಮೂರು ಐಪಿಎಲ್ ಟೂರ್ನಿಗಳಲ್ಲಿ ಆಡಿರಲಿಲ್ಲ. 2022ರ ಐಪಿಎಲ್ ವೇಳೆ ಸೊಂಟದ ಗಾಯಕ್ಕೆ ತುತ್ತಾಗಿ ಅರ್ಧಕ್ಕೆ ನಿರ್ಗಮಿಸಿದ್ದ ಕಮ್ಮಿನ್ಸ್, 2023ರ ಐಪಿಎಲ್‌ನಲ್ಲಿ ಸಂಪೂರ್ಣವಾಗಿ ಹೊರಗುಳಿದಿದ್ದರು. ಅದಕ್ಕೆ ನೀಡಿದ ಕಾರಣ ಆಸ್ಟ್ರೇಲಿಯಾ ಪರವಾಗಿ ಆಡುವ ಪಂದ್ಯಗಳು. 2023ರಲ್ಲಿ ಋತುವಿನಲ್ಲಿ ಆಸೀಸ್ ಪರವಾಗಿ ಸಾಕಷ್ಟು ಪ್ರಮುಖ ಅಂತಾರಾಷ್ಟ್ರೀಯ ವೇಳಾಪಟ್ಟಿಗಳು ಇರುವ ಕಾರಣ ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗೋದಿಲ್ಲ ಎಂದು ತಮ್ಮ ತಂಡವಾದ ಕೆಕೆಆರ್‌ಗೆ ತಿಳಿಸಿದ್ದರು. 'ಮುಂದಿನ ವರ್ಷದ ಐಪಿಎಲ್‌ಅನ್ನು ಮಿಸ್ ಮಾಡಿಕೊಳ್ಳುವ ಕಠಿಣ ನಿರ್ಧಾರ ಮಾಡಿದ್ದೇನೆ' ಎಂದು 2022ರ ಕೊನೆಯಲ್ಲಿ ತಿಳಿಸಿದ್ದರು.
'"ಅಂತರರಾಷ್ಟ್ರೀಯ ವೇಳಾಪಟ್ಟಿಯು ಮುಂದಿನ 12 ತಿಂಗಳುಗಳ ಕಾಲ ಟೆಸ್ಟ್ ಮತ್ತು ODIಗಳಿಂದ ಪ್ಯಾಕ್ ಆಗಿದೆ. ಆಶಸ್ ಸರಣಿ ಮತ್ತು ವಿಶ್ವಕಪ್‌ಗೆ ಮುಂಚಿತವಾಗಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕಿರುವ ಕಾರಣ ಐಪಿಎಲ್ ಆಡುತ್ತಿಲ್ಲ' ಎಂದಿದ್ದರು.
ಈ ನಿರ್ಧಾರ ಅವರ ಪಾಲಿಗೆ ಎಷ್ಟು ವರ್ಕ್ ಆಯಿತೆಂದರೆ, ಆಸ್ಟ್ರೇಲಿಯಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಕಂಡರೆ, ಪ್ರತಿಷ್ಠಿತ ಆಶಸ್ ಟ್ರೋಫಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಬಳಿಕ ಭಾರತದ ಆತಿಥ್ಯದಲ್ಲಿಯೇ ನಡೆದ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಪ್ಯಾಟ್ ಕಮ್ಮಿನ್ಸ್ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಪ್ಯಾಟ್ ಕಮ್ಮಿನ್ಸ್ ನಾಯಕತ್ವದಲ್ಲಿ ಆಸೀಸ್ ಈ ವಿಕ್ರಮಗಳನ್ನು ಸಾಧಿಸಿತ್ತು.
ಈ ಎಲ್ಲಾ ಮೈಲಿಗಲ್ಲು ನೆಟ್ಟ ಬಳಿಕ ಐಪಿಎಲ್ ಹರಾಜಿಗೆ ತನ್ನ ಹೆಸರನ್ನು ಪ್ಯಾಟ್ ಕಮ್ಮಿನ್ಸ್ ಸೇರಿಸಿದ್ದರು. ಈಗ ಅವರನ್ನು ಬರೋಬ್ಬರು 20.50 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿದ್ದು, ಹೆಚ್ಚೂ ಕಡಿಮೆ ಎಸ್‌ಆರ್‌ಎಚ್ ತಂಡಕ್ಕೆ ಅವರೇ ಹೊಸ ನಾಯಕರಾಗುವ ಸಾಧ್ಯತೆಯೂ ಇದೆ.
ಐಪಿಎಲ್ ಇತಿಹಾಸದ 10 ದುಬಾರಿ ಆಟಗಾರರು ಇವರು, ಪ್ಯಾಟ್ ಕಮ್ಮಿನ್ಸ್ ನಂ.1
ಎಸ್‌ಆರ್‌ಎಚ್ ಸೇರಿದ ಬಳಿಕ ಮಾತನಾಡಿರುವ ಪ್ಯಾಟ್ ಕಮ್ಮಿನ್ಸ್, 'ನಾನು ಮುಂದಿನ ಐಪಿಎಲ್‌ಗಾಗಿ ಎಸ್‌ಆರ್‌ಎಚ್ ಸೇರುತ್ತಿದ್ದೇನೆ. ನಾನು ಹೈದರಾಬಾದ್‌ನಲ್ಲಿ ಕೆಲವೊಂದು ಬಾರಿ ಆಟವಾಡಿದ್ದೇನೆ. ಸ್ಮರಣೀಯ ಕ್ಷಣಗಳನ್ನು ಕಳೆದಿದ್ದೇನೆ. ಇಡೀ ನಗರವನ್ನೇ ನಾನು ಇಷ್ಟಪಡುತ್ತೇನೆ. ಈ ಬಾರಿಯ ಐಪಿಎಲ್ ಸೀಸನ್ ಬಹಳ ವಿಶೇಷವಾಗಿರುತ್ತದೆ' ಎಂದು ಅವರು ಹೇಳಿದ್ದಾರೆ.
ಬರೀ 16 ಕೋಟಿಯ ಆಸ್ತಿ ಹೊಂದಿರುವ ವಿಂಡೀಸ್ ಆಟಗಾರನಿಗೆ ಒಂದೇ ಬಾರಿ 8 ಕೋಟಿಯ ಜಾಕ್‌ಪಾಟ್!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.