ಟೀಂ ಇಂಡಿಯಾದಲ್ಲಿನ ಆ ಬದಲಾವಣೆಗೆ ದ್ರಾವಿಡ್ ಕಾರಣ! ಗುಟ್ಟು ಬಿಚ್ಚಿಟ್ಟ ಮಾಜಿ ಕೋಚ್

Published : May 26, 2026, 10:18 AM IST
Rohit Sharma, Rahul Dravid, and Gautam Gambhir

ಸಾರಾಂಶ

ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಶೈಲಿಯನ್ನು ಬೌಲಿಂಗ್ ಕೋಚ್ ಆಗಿದ್ದ ಪರಸ್ ಮಾಂಬ್ರೆ ವಿವರಿಸಿದ್ದಾರೆ. ದ್ರಾವಿಡ್ ಅವರ ಪಾರದರ್ಶಕ ಸಂವಹನ, ನಾಯಕನಿಗೆ ನೀಡುತ್ತಿದ್ದ ಸ್ವಾತಂತ್ರ್ಯ ಮತ್ತು ತೆರೆಮರೆಯಲ್ಲಿನ ಪಾತ್ರವು ತಂಡದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಿಸಿ, 2024ರ ಟಿ20 ವಿಶ್ವಕಪ್ ಗೆಲುವಿಗೆ ಹೇಗೆ ಕಾರಣವಾಯಿತು ಎಂಬುದನ್ನು ಈ ಲೇಖನ ವಿವರಿಸುತ್ತದೆ.

ಮುಂಬೈ: ಗೌತಮ್ ಗಂಭೀರ್ ಅವರ ತರಬೇತಿಯಲ್ಲಿ ಭಾರತ ತಂಡ ಒಂದು ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ಟಿ20 ವಿಶ್ವಕಪ್ ಗೆದ್ದಿರಬಹುದು. ಆದರೆ, ಕ್ರಿಕೆಟ್ ಜಗತ್ತು ಈಗಲೂ ರಾಹುಲ್ ದ್ರಾವಿಡ್ ಅವರ ಕೋಚಿಂಗ್ ದಿನಗಳನ್ನು ನೆನಪಿಸಿಕೊಳ್ಳುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ದ್ರಾವಿಡ್ ಅವರ 28 ತಿಂಗಳ ಕೋಚಿಂಗ್ ಅವಧಿಯಲ್ಲಿ ಭಾರತಕ್ಕೆ ಒಂದೇ ಒಂದು ಐಸಿಸಿ ಟ್ರೋಫಿ ಸಿಕ್ಕಿದ್ದರೂ, ಆ ಕಾಲಘಟ್ಟದಲ್ಲಿ ತಂಡದಲ್ಲಿದ್ದ ಒಗ್ಗಟ್ಟು, ಪಾರದರ್ಶಕತೆ ಮತ್ತು ಸಂವಹನವನ್ನು ಎಲ್ಲರೂ ಸ್ಮರಿಸುತ್ತಾರೆ. ಆದರೆ, ಸದ್ಯದ ಟೀಂ ಇಂಡಿಯಾದಲ್ಲಿ ಅಂತಹ ವಾತಾವರಣ ಕಾಣಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಐಸಿಸಿ ಟೂರ್ನಿಗಳಲ್ಲಿ ನೂರಕ್ಕೆ ನೂರು ಯಶಸ್ಸು ಸಾಧಿಸಿ ಗೌತಮ್ ಗಂಭೀರ್ ಉತ್ತಮ ತರಬೇತುದಾರ ಎನಿಸಿಕೊಂಡಿದ್ದಾರೆ. ಆದರೆ, ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಜೊತೆಗಿನ ಅವರ ಭಿನ್ನಾಭಿಪ್ರಾಯಗಳು ಕೋಚಿಂಗ್ ವೃತ್ತಿಜೀವನಕ್ಕೆ ಸಣ್ಣ ಕಪ್ಪುಚುಕ್ಕೆಯಾಗಿದೆ. ರಾಹುಲ್ ದ್ರಾವಿಡ್ ಅವರ ಅಡಿಯಲ್ಲಿ ಭಾರತದ ಬೌಲಿಂಗ್ ಕೋಚ್ ಆಗಿದ್ದ ಪರಸ್ ಮಾಂಬ್ರೆ, ದ್ರಾವಿಡ್ ಕೋಚಿಂಗ್ ಶೈಲಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಟೀಂ ಇಂಡಿಯಾ ಬದಲಾವಣೆಯಲ್ಲಿ ದ್ರಾವಿಡ್ ಪಾತ್ರ ದೊಡ್ಡದು

"ಟೀಂ ಇಂಡಿಯಾದಲ್ಲಿನ ಸುಗಮ ಬದಲಾವಣೆಗಳ ಹಿಂದೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಪಾತ್ರ ಬಹಳ ದೊಡ್ಡದು. ಸಂವಹನದಲ್ಲಿ ಅವರು ತುಂಬಾ ಸ್ಪಷ್ಟ ಮತ್ತು ಪ್ರಾಮಾಣಿಕರಾಗಿದ್ದರು. ವಿರಾಟ್ ಕೊಹ್ಲಿ ಜೊತೆ ಅವರು ತುಂಬಾ ಮುಕ್ತವಾಗಿ ಮಾತನಾಡುತ್ತಿದ್ದರು. ಕೆಲವೊಮ್ಮೆ ಕಠಿಣ ವಿಷಯಗಳನ್ನು ನೇರವಾಗಿ ಹೇಳುವುದು ಕಷ್ಟ. ಆದರೆ ದ್ರಾವಿಡ್ ಆ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು," ಎಂದು ಮಾಂಬ್ರೆ ಹೇಳಿದರು.

ತಂಡದ ಎಲ್ಲಾ ಯೋಜನೆಗಳನ್ನು ರೋಹಿತ್ ಜೊತೆಗೆ ವಿರಾಟ್ ಕೊಹ್ಲಿಗೂ ಸಮಾನವಾಗಿ ತಿಳಿಸಲಾಗುತ್ತಿತ್ತು. ಎಲ್ಲಾ ಸಭೆಗಳಲ್ಲಿ ವಿರಾಟ್ ಭಾಗವಹಿಸದಿದ್ದರೂ, ರೋಹಿತ್ ಜೊತೆ ಚರ್ಚಿಸಿದ ವಿಷಯಗಳನ್ನು ಕೊಹ್ಲಿಗೂ ತಲುಪಿಸಲಾಗುತ್ತಿತ್ತು. ಇದೇ ಕಾರಣಕ್ಕೆ ತಂಡದಲ್ಲಿ ಅಷ್ಟೊಂದು ಉತ್ತಮ ಸೌಹಾರ್ದ ವಾತಾವರಣವಿತ್ತು ಎಂದು ಮಾಂಬ್ರೆ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

"ಒಬ್ಬ ಆಟಗಾರನಾಗಿ ಮತ್ತು ಕೋಚ್ ಆಗಿ ನಾವು ವಿಭಿನ್ನವಾಗಿರಬೇಕು. ಆಟಗಾರನಾಗಿದ್ದಾಗ ನೀವು ಯಾವಾಗಲೂ ಮುಂದೆ ಇರುತ್ತೀರಿ, ಆದರೆ ಕೋಚ್ ಆದಾಗ ಹಿಂದೆ ಸರಿಯಬೇಕು. ದ್ರಾವಿಡ್ ಎಂದಿಗೂ ಲೈಮ್‌ಲೈಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಆಟಗಾರರು ಎದುರಿಸುವ ಸಮಸ್ಯೆಗಳು ಏನೆಂದು ಅವರಿಗೆ ಚೆನ್ನಾಗಿ ತಿಳಿದಿತ್ತು," ಎಂದು ಮಾಂಬ್ರೆ ಹೇಳಿದ್ದಾರೆ.

ಯಾವಾಗಲೂ ಆಟಗಾರರ ವಿಷಯಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುವ ಕೋಚ್ ಇದ್ದರೆ ತಂಡದ ವಾತಾವರಣ ಹದಗೆಡುತ್ತದೆ. ಆದರೆ ದ್ರಾವಿಡ್ ಯಾವಾಗಲೂ ತೆರೆಮರೆಯಲ್ಲಿ ನಿಂತು, ನಾಯಕ ರೋಹಿತ್ ಶರ್ಮಾಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಭಿನ್ನಾಭಿಪ್ರಾಯಗಳಿದ್ದಾಗ, ಅದನ್ನು ವಿಶ್ವಾಸದಿಂದ ನಾಯಕನಿಗೆ ತಿಳಿಸಿ, ಉಳಿದದ್ದನ್ನು ನಾಯಕನಿಗೆ ಬಿಟ್ಟುಬಿಡುವುದೇ ದ್ರಾವಿಡ್ ಶೈಲಿಯಾಗಿತ್ತು ಎಂದು ಪರಸ್ ಮಾಂಬ್ರೆ ನೆನಪಿಸಿಕೊಂಡರು.

ದಶಕದ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿದ ಕೋಚ್ ದ್ರಾವಿಡ್:

ಭಾರತ ಕ್ರಿಕೆಟ್‌ ತಂಡವು 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಒಂದು ದಶಕದಿಂದ ಭಾರತಕ್ಕೆ ಐಸಿಸಿ ಟ್ರೋಫಿ ಎನ್ನುವುದು ಕನ್ನಡಿಯೊಳಗಿನ ಗಂಟು ಎನಿಸಿಕೊಂಡಿತ್ತು. ಆದರೆ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 2024ರಲ್ಲಿ ಐಸಿಸಿ ಟಿ20 ವಿಶ್ವಕಪ್ ಜಯಿಸುವ ಮೂಲಕ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇದಾದ ಬಳಿಕ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2026ರ ಐಸಿಸಿ ಟಿ20 ವಿಶ್ವಕಪ್ ಗೆದ್ದು ಬೀಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇವರಿಬ್ಬರು ಕೊಹ್ಲಿ-ಗೇಲ್‌ಗಿಂತ ಬೆಸ್ಟ್‌ ಓಪನ್ನಿಂಗ್ ಜೋಡಿ..! ಐಪಿಎಲ್‌ ಪ್ಲೇ-ಆಫ್‌ಗೂ ಮುನ್ನ RCB ಎದುರಾಳಿಯನ್ನು ಕೊಂಡಾಡಿದ ಸುರೇಶ್ ರೈನಾ
ಐಪಿಎಲ್‌ನ ರಣರೋಚಕ ಪ್ಲೇ-ಆಫ್‌ ಕದನ ಶುರು: ಫೈನಲ್‌ ಟಿಕೆಟ್‌ಗೆ ಆರ್‌ಸಿಬಿ vs ಗುಜರಾತ್ ಟೈಟಾನ್ಸ್ ಫೈಟ್