
ಲಾಹೋರ್: ದಕ್ಷಿಣ ಆಫ್ರಿಕಾ ಎದುರು ತವರಿನಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಂಗೆ ಮತ್ತೊಮ್ಮೆ ನಿರಾಸೆ ಎದುರಾಗಿದೆ. ಇಲ್ಲಿನ ಗಡಾಫಿ ಸ್ಟೇಡಿಯಂನಲ್ಲಿ ಹರಿಣಗಳ ಎದುರಿನ ಮೊದಲ ಟೆಸ್ಟ್‌ನಲ್ಲಿ ಅಜಂ 48 ಎಸೆತಗಳನ್ನು ಎದುರಿಸಿ ಕೇವಲ 23 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ಪಾಕಿಸ್ತಾನ ಮಾಜಿ ನಾಯಕ ಬಾಬರ್ ಅಜಂ, ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇನ್ನು ಶಾನ್ ಮಸೂದ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಬಾಬರ್ ಅಜಂ ಅವರನ್ನು ಅಭಿಮಾನಿಗಳು ಜೋರಾದ ಚಪ್ಪಾಳೆಯ ಮೂಲಕ ಸ್ವಾಗತಿಸಿದರು. ಆದರೆ ಅಭಿಮಾನಿಗಳ ಸಂಭ್ರಮಾಚರಣೆ ಹೆಚ್ಚು ಹೊತ್ತು ಉಳಿಯಲಿಲ್ಲ. ಚಹ ವಿರಾಮದ ಬಳಿಕ ಬಾಬರ್ ಅಜಂ ಕೇವಲ 23 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು.
ಇದೆಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ವೀಕ್ಷಕ ವಿವರಣೆಗಾರಿಕೆ ಮಾಡುತ್ತಿದ್ದ ರಮೀಜ್ ರಾಜಾ, ಬಾಬರ್ ಅಜಂ ಕುರಿತಂತೆ ಆಡಿದ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ. ಬಾಬರ್ ಅಜಂ ಕ್ರೀಸ್‌ಗಿಳಿದು ಎದುರಿಸಿದ ಮೂರನೇ ಎಸೆತದಲ್ಲೇ ಅಂಪೈರ್ ಔಟ್ ಎನ್ನುವ ತೀರ್ಮಾನ ನೀಡುತ್ತಾರೆ. ಆಗ ಬಾಬರ್ ಅಜಂ, ಡಿಆರ್‌ಎಸ್ ಮೊರೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಮೈಕ್ ಆನ್ ಇದೆ ಎನ್ನುವುದನ್ನು ಮರೆತ ರಮೀಜ್ ರಾಜಾ, 'ಇದು ಔಟ್ ಆಗಿದೆ, ಆದ್ರೆ ನಾಟಕ ಆಡ್ತಾ ಇದ್ದಾನೆ' ಎಂದು ಹೇಳುವ ವಿಡಿಯೋ ವೈರಲ್ ಆಗಿದೆ. ಆದರೆ ಅದೃಷ್ಟವಶಾತ್ ಬಾಬರ್ ಆ ಎಸೆತದಲ್ಲಿ ಔಟ್ ಆಗಿಲ್ಲ. ಆನ್ ಫೀಲ್ಡ್ ಅಂಪೈರ್ ನೀಡಿದ ಔಟ್ ತೀರ್ಮಾನ ಬದಲಾಗುತ್ತಿದ್ದಂತೆಯೇ ಫ್ಯಾನ್ಸ್ ಮತ್ತೊಮ್ಮೆ ಜೋರಾಗಿ ಸಂಭ್ರಮಾಚರಣೆ ಮಾಡಿದ್ದಾರೆ.
ಇನ್ನು ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮ್ಯಾಚ್ ಬಗ್ಗೆ ಹೇಳುವುದಾದರೇ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಇಮಾಮ್ ಉಲ್ ಹಕ್(93) ಶತಕ ವಂಚಿತ ಬ್ಯಾಟಿಂಗ್ ಹಾಗೂ ನಾಯಕ ಶಾನ್ ಮಸೂದ್(76), ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್(75) ಆಕರ್ಷಕ ಅರ್ಧಶತಕಗಳ ನೆರವಿನಿಂದ ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 313 ರನ್ ಬಾರಿಸಿತ್ತು. ಇದೀಗ ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲಿ ಸದ್ಯ ಪಾಕಿಸ್ತಾನ ತಂಡವು 9 ವಿಕೆಟ್ ಕಳೆದುಕೊಂಡು 378 ರನ್ ಬಾರಿಸಿದೆ. ಸಲ್ಮಾನ್ ಅಘಾ 93 ರನ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ಪರ ಸೆನುರನ್ ಮುತ್ತುಸ್ವಾಮಿ 6 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರೆ, ಕಗಿಸೋ ರಬಾಡ, ಪ್ರೆನೆಲನ್ ಸುಬ್ರಯನ್, ಸಿಮೊನ್ ಹಾರ್ಮರ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.