ಜಸ್ಪ್ರೀತ್ ಬುಮ್ರಾಗಿಂತ ಶಾಹೀನ್ ಅಫ್ರಿದಿ ಕಮ್ಮಿಯೇನಲ್ಲ: ಸಲ್ಮಾನ್ ಭಟ್..!

By Naveen KodaseFirst Published Jul 14, 2022, 4:29 PM IST
Highlights

ಶಾಹೀನ್ ಅಫ್ರಿದಿ ಬೌಲಿಂಗ್ ಗುಣಗಾನ ಮಾಡಿದ ಜಸ್ಪ್ರೀತ್ ಬುಮ್ರಾ
ಬುಮ್ರಾ ಅವರಂತೆ ಶಾಹೀನ್ ಅಫ್ರಿದಿ ಕೂಡಾ ಅತ್ಯುತ್ತಮ ಬೌಲರ್ ಎಂದ ಸಲ್ಮಾನ್ ಭಟ್
ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ 19 ರನ್ ನೀಡಿ 6 ವಿಕೆಟ್ ಕಬಳಿಸಿದ್ದ ಬುಮ್ರಾ

ಕರಾಚಿ(ಜು.14): ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗಿಂತ ಶಾಹೀನ್ ಶಾ ಅಫ್ರಿದಿ ಕಡಿಮೆಯೇನಲ್ಲ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಸಲ್ಮಾನ್ ಭಟ್ ಅಭಿಪ್ರಾಯಪಟ್ಟಿದ್ದಾರೆ. ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ, ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 19 ರನ್ ನೀಡಿ 6 ವಿಕೆಟ್ ಕಬಳಿಸುವ ಮೂಲಕ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ತೋರಿದ್ದರು. ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಬುಮ್ರಾ, ಐಸಿಸಿ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದರು. 

ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸಲ್ಮಾನ್‌ ಭಟ್, ಬುಮ್ರಾ ಅವರಿಗಿಂತ ಶಾಹೀನ್ ಅಫ್ರಿದಿ ಅತ್ಯುತ್ತಮ ಸಾಮರ್ಥ್ಯ ಹೊಂದಿದ್ದಾರೆಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಭಟ್, 22 ವರ್ಷದ ಎಡಗೈ ವೇಗಿ ಶಾಹೀನ್ ಅಫ್ರಿದಿ ಗುಣಗಾನ ಮಾಡಿದ್ದಾರೆ. ಶಾಹೀನ್ ಅಫ್ರಿದಿ (Shaheen Afridi) ಹೆಚ್ಚು ಕ್ರಿಕೆಟ್ ಆಡಿಲ್ಲ, ಆದರೆ ಅವರು ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು. ಅವರು ಜಸ್ಪ್ರೀತ್ ಬುಮ್ರಾ (Jasprit Bumrah) ಅವರಿಗಿಂತ ಕಮ್ಮಿಯೇನಲ್ಲ. ಶಾಹೀನ್ ಅಫ್ರಿದಿ ಮತ್ತಷ್ಟು ಅನುಭವ ಪಡೆದುಕೊಂಡರೇ ಮತ್ತಷ್ಟು ವೇಗವಾಗಿ ಬೌಲಿಂಗ್ ಮಾಡಬಲ್ಲರು ಎಂದು ಸಲ್ಮಾನ್ ಭಟ್ ಹೇಳಿದ್ದಾರೆ.

ಮುಂದುವರೆದು, ಸಲ್ಮಾನ್ ಭಟ್ ಇಬ್ಬರು ಬೌಲರ್‌ಗಳ ಪ್ರದರ್ಶನವನ್ನು ಗುಣಗಾನ ಮಾಡಿದ್ದಾರೆ. ಜಸ್ಪ್ರೀತ್ ಬುಮ್ರಾ ಹಾಗೂ ಶಾಹೀನ್ ಅಫ್ರಿದಿ ಪ್ರದರ್ಶನವನ್ನು ನೋಡಲು ಖುಷಿಯಾಗುತ್ತದೆ. ಈ ಇಬ್ಬರು ವೇಗಿಗಳ ಪ್ರದರ್ಶನವನ್ನು ಗಮನಿಸಿದರೇ ಯಾವ ಸಂದರ್ಭದಲ್ಲಿ ಬೇಕಾದರೂ ವಿಕೆಟ್ ಉರುಳಬಹುದು ಎಂದು ಭಟ್ ಹೇಳಿದ್ದಾರೆ. ಇಬ್ಬರು ವಿಶ್ವದ ಅತ್ಯುತ್ತಮ ಬೌಲರ್‌ಗಳಾಗಿದ್ದು, ಈ ಇಬ್ಬರು ಬೌಲರ್‌ಗಳ ಪ್ರದರ್ಶನವನ್ನು ನೋಡಲು ಸಂತಸವಾಗುತ್ತದೆ. ಹೊಸ ಚೆಂಡಿನೊಂದಿಗೆ ಈ ಇಬ್ಬರು ಬೌಲರ್‌ಗಳು ಬೌಲಿಂಗ್ ಮಾಡುವ ರೀತಿಯನ್ನು ಗಮನಿಸಿದರೇ, ಯಾವುದೇ ಕ್ಷಣದಲ್ಲಿ ಬೇಕಾದರೂ ವಿಕೆಟ್ ಉರುಳಬಹುದು ಎಂದೆನಿಸುತ್ತದೆ. ಈ ರೀತಿಯ ಅನುಭವ ಬೇರೆ ಬೌಲರ್‌ಗಳು ಬೌಲಿಂಗ್ ಮಾಡುವಾಗ ಅನಿಸುವುದಿಲ್ಲ ಎಂದು ಸಲ್ಮಾನ್ ಭಟ್ ಹೇಳಿದ್ದಾರೆ.

Eng vs Ind: ಬುಮ್ರಾ ಬೆಂಕಿದಾಳಿಗೆ ಬೆಂಡಾದ ಇಂಗ್ಲೆಂಡ್‌!

ಇಷ್ಟೆಲ್ಲಾ ಹೇಳಿದ ಸಲ್ಮಾನ್ ಭಟ್ ಕೊನೆಯಲ್ಲಿ ಶಾಹೀನ್ ಅಫ್ರಿದಿ ಹಾಗೂ ಜಸ್ಪ್ರೀತ್ ಬುಮ್ರಾ ಅವರ ಹೋಲಿಕೆ ಸರಿಯಲ್ಲ ಎಂದು ಮಾತು ಮುಗಿಸಿದ್ದಾರೆ. ತಮ್ಮ 20ನೇ ವಯಸ್ಸಿನಲ್ಲಿ ಈ ರೀತಿಯ ಪ್ರದರ್ಶನ ತೋರುವುದು ಸಾಧಾರಣವಲ್ಲ. ಇಬ್ಬರು ಬೌಲರ್‌ಗಳು ಅತ್ಯುದ್ಭುತ ಪ್ರದರ್ಶನ ತೋರಿದ್ದಾರೆ. ಜಸ್ಪ್ರೀತ್ ಬುಮ್ರಾ ಹೆಚ್ಚು ಪಂದ್ಯಗಳನ್ನಾಡಿರುವುದರಿಂದ ಸಹಜವಾಗಿಯೇ ಅವರು ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಸದ್ಯದ ಮಟ್ಟಿಗೆ ಈ ಇಬ್ಬರು ಆಟಗಾರರನ್ನು ಹೋಲಿಕೆ ಮಾಡುವುದು ಸರಿಯಲ್ಲ. ಒಬ್ಬ ಬೌಲರ್‌ ಹೆಚ್ಚು ಪಂದ್ಯಗಳನ್ನಾಡಿದ್ದರೇ, ಮತ್ತೊಬ್ಬ ಬೌಲರ್‌ ಕಡಿಮೆ ಪಂದ್ಯಗಳನ್ನಾಡಿದ್ದಾರೆ ಎಂದು ಸಲ್ಮಾನ್ ಭಟ್ ಅಭಿಪ್ರಾಯಪಟ್ಟಿದ್ದಾರೆ.

ಜಸ್ಪ್ರೀತ್ ಬುಮ್ರಾ 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿ, ಇದುವರೆಗೂ ಭಾರತ ಕ್ರಿಕೆಟ್ ತಂಡದ (Indian Cricket Team) ಪರ 30 ಟೆಸ್ಟ್, 71 ಏಕದಿನ ಹಾಗೂ 58 ಟಿ20 ಪಂದ್ಯಗಳನ್ನಾಡಿದ್ದಾರೆ. ಇನ್ನೊಂದೆಡೆ ಶಾಹೀನ್ ಅಫ್ರಿದಿ, ಪಾಕಿಸ್ತಾನ ಕ್ರಿಕೆಟ್ ತಂಡದ ಪರ 24 ಟೆಸ್ಟ್‌, 32 ಏಕದಿನ ಹಾಗೂ 40 ಟಿ20 ಪಂದ್ಯಗಳನ್ನಾಡಿದ್ದಾರೆ.

click me!