
ಲಾಹೋರ್: ಸದಾ ಒಂದಿಲ್ಲೊಂದು ಪ್ರಕರಣದಲ್ಲಿ ಸುದ್ದಿಯಾಗುವ ಪಾಕಿಸ್ತಾನ ಕ್ರಿಕೆಟ್, ಈಗ ತಂಡದ ಕೆಲ ಆಟಗಾರರ ವಿಚಾರದಲ್ಲೇ ಮುಖಭಂಗಕ್ಕೊಳಗಾಗುವ ಸ್ಥಿತಿಯಲ್ಲಿದೆ.
ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆ ಡ್ರೆಸ್ಸಿಂಗ್ ಕೋಣೆಯ ಮಾಹಿತಿ ಸೋರಿಕೆ ಮಾಡಿದ ಪ್ರಕರಣದಲ್ಲಿ ಪಾಕ್ ಕ್ರಿಕೆಟ್ ಮಂಡಳಿ ನೀಡಿದ್ದ ದೂರು ಆಧರಿಸಿ ಅಲ್ಲಿನ ರಾಷ್ಟ್ರೀಯ ಸೈಬರ್ ಕ್ರೈಮ್ ವಿಚಾರಣಾ ಏಜೆನ್ಸಿ(ಎನ್‌ಸಿಸಿಐಎ)ಯು ತಾರಾ ಕ್ರಿಕೆಟಿಗರಾದ ಮೊಹಮ್ಮದ್ ರಿಜ್ವಾನ್ ಹಾಗೂ ಇಮಾಮ್ ಉಲ್ ಹಕ್‌ರನ್ನು 4 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದೆ. ಇಂಗ್ಲೆಂಡ್‌ನಲ್ಲಿ ಅವರ ತರಬೇತಿ, ಸಭೆ, ಪಂದ್ಯ, ಡ್ರೆಸ್ಸಿಂಗ್ ರೂಮ್ ವಿಚಾರಗಳ ಬಗ್ಗೆ ಪ್ರಶ್ನಿಸಿದೆ ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ, ಈಗ ನಡೆಯುತ್ತಿರುವ ತನಿಖೆಗೆ ಹೊಸ ಆಯಾಮ ಲಭಿಸಿದೆ. ಎನ್‌ಸಿಸಿಐಎ ಈ ಇಬ್ಬರು ಆಟಗಾರರ ಮೊಬೈಲ್ ಫೋನ್‌ಗಳ ವಿಧಿವಿಜ್ಞಾನ(ಫಾರೆನ್ಸಿಕ್) ಮತ್ತು ತಾಂತ್ರಿಕ ವಿಶ್ಲೇಷಣೆಯನ್ನು ನಡೆಸುತ್ತಿದೆ. ಅಲ್ಲದೆ, ಅವರ ಹಣಕಾಸು ಖಾತೆಗಳು ಮತ್ತು ಅನುಮಾನಾಸ್ಪದ ವಹಿವಾಟುಗಳ ಮೇಲೂ ತೀವ್ರ ನಿಗಾ ಇಟ್ಟಿದೆ. ಇಂಗ್ಲೆಂಡ್ ಸರಣಿಗೂ ಮುನ್ನ ಹಾಗೂ ಬಳಿಕದ ವಹಿವಾಟುಗಳ ಬಗ್ಗೆ ಪರಿಶೀಲಿಸಲಿದ್ದು, ಇವರಿಬ್ಬರ ಜೊತೆ ಯಾವುದಾದರೂ ಕಂಪೆನಿ, ಸಂಘಟನೆ ಅಥವಾ ವ್ಯಕ್ತಿ ಹಣಕಾಸಿನ ವ್ಯವಹಾರ ನಡೆಸಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಿದೆ ಎಂದು ಗೊತ್ತಾಗಿದೆ.
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಸೋಲಿನ ಬಳಿಕ ಪಾಕ್ ತಂಡದ 15 ಆಟಗಾರರ ಪೈಕಿ 7 ಮಂದಿಯನ್ನು ಕಳಪೆ ಪ್ರದರ್ಶನ ಕಾರಣಕ್ಕೆ ತವರಿಗೆ ಕಳುಹಿಸಲಾಗಿತ್ತು. ಇದರಲ್ಲಿ ರಿಜ್ವಾನ್, ಇಮಾಮ್ ಕೂಡಾ ಒಳಗೊಂಡಿದ್ದಾರೆ.
ಸಾಮಾನ್ಯವಾಗಿ ಕ್ರಿಕೆಟಿಗರ ವಿಚಾರದಲ್ಲಿ ಫಿಕ್ಸಿಂಗ್, ದೌರ್ಜನ್ಯ ಸೇರಿದಂತೆ ಬೇರೆ ಬೇರೆ ರೀತಿಯ ಹಲವು ಆರೋಪಗಳು ಕಂಡುಬರುತ್ತವೆ. ಆವಾಗೆಲ್ಲಾ ಪೊಲೀಸ್ ತನಿಖೆಗಳೂ ನಡೆಯುತ್ತವೆ. ಆದರೆ ತನ್ನದೇ ರಾಷ್ಟ್ರೀಯ ತಂಡದ ಆಟಗಾರರ ವಿರುದ್ಧ ಕ್ರಿಕೆಟ್ ಮಂಡಳಿಯೊಂದು ಸೈಬರ್ ಏಜೆನ್ಸಿಗೆ ದೂರು ನೀಡಿದ್ದು ಇದೇ ಮೊದಲು.
ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ವಿರುದ್ಧ 3ನೇ ಹಾಗೂ ಕೊನೆ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಇನ್ನಿಂಗ್ಸ್ ಸೋಲಿನಿಂದ ಪಾರಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಪಾಕ್ 133 ರನ್ ಗಳಿಸಿದ್ದರೆ, ಇಂಗ್ಲೆಂಡ್ 453 ರನ್ ಸಿಡಿಸಿ ದೊಡ್ಡ ಮುನ್ನಡೆ ಪಡೆದಿತ್ತು. 2ನೇ ಇನ್ನಿಂಗ್ಸ್‌ನಲ್ಲೂ ಆರಂಭದಲ್ಲಿ ಆಘಾತ ಅನುಭವಿಸಿದ್ದ ಪಾಕ್, ಇನ್ನಿಂಗ್ಸ್ ಅಂತರದಲ್ಲಿ ಸೋಲುವ ಭೀತಿಯಲ್ಲಿತ್ತು. ಆದರೆ ಅಝಾನ್ ಅವೈಸ್(59), ಶಾನ್ ಮಸೂದ್(95) ಹಾಗೂ ನಾಯಕ ಬಾಬರ್ ಆಜಂ(76) ಹೋರಾಟದ ನೆರವಿನಿಂದ ತಂಡ ಹಿನ್ನಡೆಯಿಂದ ಪಾರಾಗಿ, ಇಂಗ್ಲೆಂಡ್ ಮತ್ತೆ ಬ್ಯಾಟ್ ಮಾಡುವಂತೆ ಮಾಡಿತು. 318 ರನ್‌ಗೆ 8 ವಿಕೆಟ್ ಕಳೆದುಕೊಂಡಿದ್ದ ತಂಡ ಇನ್ನಿಂಗ್ಸ್ ಸೋಲು ತಪ್ಪಿಸಲು ಇನ್ನೂ 2 ರನ್ ಬೇಕಿತ್ತು. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರಝಾವುಲ್ಲಾ, ಇಂಗ್ಲೆಂಡ್‌ಗೆ 50ಕ್ಕೂ ಹೆಚ್ಚು ರನ್ ಗುರಿ ನೀಡಲು ನೆರವಾದರು.
ಬರ್ಮಿಂಗ್‌ಹ್ಯಾಮ್: ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಕ್ಯಾಚ್ ಪಡೆದ ಫೀಲ್ಡರ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಅವರು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್‌ರನ್ನು ಹಿಂದಿಕ್ಕಿ ಈಗ ವಿಶ್ವದಲ್ಲೇ ಅಗ್ರಸ್ಥಾನಕ್ಕೇರಿದ್ದಾರೆ. ರೂಟ್ 169 ಪಂದ್ಯಗಳಲ್ಲಿ 220 ಕ್ಯಾಚ್ ಪಡೆದಿದ್ದಾರೆ. ಇನ್ನಿಂಗ್ಸ್‌ನಲ್ಲಿ ಅವರ ಗರಿಷ್ಠ ಕ್ಯಾಚ್ ನಾಲ್ಕು. 125 ಪಂದ್ಯಗಳನ್ನಾಡಿರುವ ಸ್ಮಿತ್ 219 ಕ್ಯಾಚ್‌ಗಳೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ 164 ಪಂದ್ಯಗಳಲ್ಲಿ 210, ಶ್ರೀಲಂಕಾದ ಜಯವರ್ಧನೆ 149 ಪಂದ್ಯಗಳಲ್ಲಿ 205, ದ.ಆಫ್ರಿಕಾದ ಜ್ಯಾಕ್ ಕ್ಯಾಲಿಸ್ 166 ಪಂದ್ಯಗಳಲ್ಲಿ 200 ಕ್ಯಾಚ್ ಪಡೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.