ನ್ಯೂಜಿಲೆಂಡ್ ಎದುರಿನ ಟಿ20 ಸರಣಿಯಿಂದ ಹೊರಬಿದ್ದ ಪಾಕ್ ನಾಯಕ..!

By Suvarna NewsFirst Published Dec 13, 2020, 12:29 PM IST
Highlights

ಮೊದಲೇ ಕೊರೋನಾ ಭೀತಿಯಿಂದ ಕಂಗಾಲಾಗಿರುವ ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು, ತಂಡದ ನಾಯಕ ಬಾಬರ್ ಅಜಂ ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ವೆಲ್ಲಿಂಗ್ಟನ್(ಡಿ.13): ಪಾಕಿಸ್ತಾನ ಕ್ರಿಕೆಟ್‌ ತಂಡ ನ್ಯೂಜಿಲೆಂಡ್‌ಗೆ ಬಂದಿಳಿದು ಕೆಲವೇ ದಿನಗಳಲ್ಲಿ ಹಲವು ಕೋವಿಡ್ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ಸುದ್ದಿಯಾಗಿತ್ತು. ಕೆಲವು ಆಟಗಾರರು ಕೊರೋನಾ ಸೋಂಕಿಗೂ ತುತ್ತಾಗಿದ್ದರು. ಇದರ ಬೆನ್ನಲ್ಲೇ ಇನ್ನೊಮ್ಮೆ ಐಸೋಲೇಷನ್ ನಿಯಮಗಳನ್ನು ಉಲ್ಲಂಘಿಸಿದರೆ ದ್ವಿಪಕ್ಷೀಯ ಸರಣಿಯನ್ನು ರದ್ದುಪಡಿಸಿ ಪಾಕಿಸ್ತಾನ ತಂಡವನ್ನು ತವರಿಗೆ ಕಳಿಸುವುದಾಗಿ ಕಿವೀಸ್‌ ಎಚ್ಚರಿಸಿತ್ತು.

ಕೊನೆಗೂ ಎಚ್ಚೆತ್ತುಕೊಂಡ ಪಾಕಿಸ್ತಾನ ತಂಡ ಕ್ವಾರಂಟೈನ್ ಅವಧಿಯನ್ನು ಯಶಸ್ವಿಯಾಗಿ ಪೂರೈಸಿ, ಕೊರೋನಾ ಟೆಸ್ಟ್‌ಗಳು ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ವಿರುದ್ದ ಚುಟುಕು ಪಂದ್ಯಗಳ ಕ್ರಿಕೆಟ್ ಆಡಲು ಸಿದ್ದತೆ ನಡೆಸುತಿತ್ತು. ಹೀಗಿರುವಾಗಲೇ ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಹೌದು, ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿಯಿಂದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಹೊರಬಿದ್ದಿದ್ದಾರೆ. 

ಪಾಕ್‌ ವಿರುದ್ದದ ಟಿ20 ಸರಣಿಗೆ ರಾಸ್ ಟೇಲರ್‌ಗಿಲ್ಲ ಸ್ಥಾನ..!

ಪಾಕಿಸ್ತಾನ-ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಟಿ20 ಸರಣಿ ಡಿಸೆಂಬರ್ 18ರಿಂದ ಆರಂಭವಾಗಲಿದೆ. ಈ ಚುಟಕು ಕ್ರಿಕೆಟ್‌ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿರುವಾಗಲೇ, ಅಭ್ಯಾಸ ನಡೆಸುವ ವೇಳೆ ಬಲಗೈ ಹೆಬ್ಬೆರಳಿಗೆ ಬಲವಾದ ಪೆಟ್ಟು ಬಿದ್ದಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಎಕ್ಸ್‌-ರೇ ಮಾಡಿಸಿದಾಗ ಬಲಗೈ ಹೆಬ್ಬೆರಳಿಗೆ ತೀವ್ರವಾಗಿ ಗಾಯವಾಗಿರುವುದು ದೃಢಪಟ್ಟಿದೆ. ಹೀಗಾಗಿ ಚುಟುಕು ಕ್ರಿಕೆಟ್ ಸರಣಿಯಿಂದ ಬಾಬರ್ ಅಜಂ ಹೊರಬಿದ್ದಿದ್ದಾರೆ.

ಮುಂಬರುವ 12 ದಿನಗಳ ಕಾಲ ಬಾಬರ್ ಅಜಂ ಅವರಿಗೆ ಚೇತರಿಸಿಕೊಳ್ಳಲು ವೈದ್ಯರು ಸೂಚಿಸಿದ್ದಾರೆ. ಒಂದು ವೇಳೆ ಗಾಯ ಗುಣಮುಖವಾದರೆ ಡಿಸೆಂಬರ್ 26ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಬಾಬರ್ ಅಜಂ ತಂಡ ಕೂಡಿಕೊಳ್ಳಲಿದ್ದಾರೆ. ಟಿ20 ಸರಣಿಯಲ್ಲಿ ಬಾಬರ್ ಅಜಂ ಅನುಪಸ್ಥಿತಿಯಲ್ಲಿ ಸ್ಪಿನ್ನರ್ ಶಾದಾಬ್ ಖಾನ್ ಪಾಕಿಸ್ತಾನ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.
 

click me!