ಭಾರತ ವಿರುದ್ದದ ಮೊದಲ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಆರಂಭಿಕರ ಕೊರತೆ ಎದುರಿಸುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಸಿಡ್ನಿ(ಡಿ.13): ಡಿಸೆಂಬರ್17ರಿಂದ ಅಡಿಲೇಡ್‌ನಲ್ಲಿ ಆರಂಭಗೊಳ್ಳಲಿರುವ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಆಸ್ಪ್ರೇಲಿಯಾ ತಂಡಕ್ಕೆ ಆರಂಭಿಕರ ಕೊರತೆ ಎದುರಾಗಿದೆ.
ಏಕದಿನ ಸರಣಿ ವೇಳೆ ಗಾಯಗೊಂಡಿದ್ದ ಡೇವಿಡ್ ವಾರ್ನರ್ ಹಾಗೂ ಪಿಂಕ್ ಬಾಲ್ ಅಭ್ಯಾಸ ಪಂದ್ಯದ ವೇಳೆ ತಲೆಗೆ ಪೆಟ್ಟು ತಿಂದ ವಿಲ್ ಪುಕೊವಿಸ್ಕಿ ಈಗಾಗಲೇ ಮೊದಲ ಪಂದ್ಯದಿಂದ ಹೊರಬಿದ್ದಿದ್ದಾರೆ. ಇನ್ನು ಜೋ ಬರ್ನ್ಸ್ ಲಯದಲ್ಲಿಲ್ಲ. ಅಭ್ಯಾಸ ಪಂದ್ಯಗಳಲ್ಲಿ ಅವರ ಆಟ ಸಮಾಧಾನಕರವಾಗಿಲ್ಲ. ಹೀಗಾಗಿ ನಂಬಿಕಸ್ಥ ಆರಂಭಿಕ ಆಟಗಾರರನ್ನು ಹುಡುಕುವುದು ಕಾಂಗರೂ ಪಡೆಗೆ ದೊಡ್ಡ ತಲೆನೋವಾಗಿ ಕಾಡಲಾರಂಭಿಸಿದೆ.
ಹೀಗಾಗಿ 9 ಟೆಸ್ಟ್‌ಗಳನ್ನು ಆಡಿರುವ ಅನುಭವವಿರುವ ಮಾರ್ಕಸ್ ಹ್ಯಾರಿಸ್‌ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಅವರು ಕಣಕ್ಕಿಳಿಯುವ ಸಾಧ್ಯತೆ ಇದ್ದು, ಮತ್ತೊಂದು ಆರಂಭಿಕನ ಸ್ಥಾನವನ್ನು ಮಾರ್ನಸ್ ಲಬುಶೇನ್ ಇಲ್ಲವೇ ಸ್ಟೀವ್ ಸ್ಮಿತ್ ತುಂಬುವ ನಿರೀಕ್ಷೆ ಇದೆ ಎಂದು ಆಸ್ಪ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.
ಇಂಡೋ-ಆಸೀಸ್ ಕದನ: ಪಿಂಕ್ ಬಾಲ್ ಟೆಸ್ಟ್‌ನಿಂದ ಪುಕೊವಿಸ್ಕಿ ಔಟ್; ಹೊಸ ಬ್ಯಾಟ್ಸ್‌ಮನ್ ಸೇರ್ಪಡೆ..!
ಈ ಹಿಂದಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಗೆದ್ದು ಚಾರಿತ್ರಿಕ ಸಾಧನೆ ಮಾಡಿತ್ತು. ಭಾರತಕ್ಕೆ ಈ ಬಾರಿ ತಿರುಗೇಟು ನೀಡುವ ಕನವರಿಕೆಯಲ್ಲಿರುವ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಒಂದು ವೇಳೆ ಸ್ಟೀವ್ ಸ್ಮಿತ್ ಆರಂಭಿಕನಾಗಿ ಕಣಕ್ಕಿಳಿದರೆ ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕ ಮತ್ತಷ್ಟು ದುರ್ಬಲವಾಗುವ ಸಾಧ್ಯತೆಯಿದೆ.