
ಲಂಡನ್: ಬಲಾತ್ಕಾರ ಆರೋಪದ ಮೇಲೆ ಪಾಕಿಸ್ತಾನ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹೈದರ್ ಅಲಿಯನ್ನು ಲಂಡನ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನ 'ಎ' ತಂಡದ ಇಂಗ್ಲೆಂಡ್ ಪ್ರವಾಸದ ವೇಳೆ ಈ ಘಟನೆ ನಡೆದಿದೆ. ಬಲಾತ್ಕಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ 24 ವರ್ಷದ ಹೈದರ್ ಅಲಿಯನ್ನು ಪಾಕ್ ತಂಡದಿಂದ ಅಮಾನತುಗೊಳಿಸಲಾಗಿದೆ. ಹೈದರ್ ಅಲಿಗೆ ಎಲ್ಲಾ ರೀತಿಯ ಕಾನೂನು ನೆರವು ನೀಡುವುದಾಗಿ ಪಾಕ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಮ್ಯಾಂಚೆಸ್ಟರ್‌ನ ಮಹಿಳೆಯ ದೂರಿನ ಮೇರೆಗೆ ಹೈದರ್ ಅಲಿ ವಿರುದ್ಧ ಪೊಲೀಸರು ಬಲಾತ್ಕಾರ ಪ್ರಕರಣ ದಾಖಲಿಸಿದ್ದಾರೆ. ಕಳೆದ ತಿಂಗಳು 23 ರಂದು ಮ್ಯಾಂಚೆಸ್ಟರ್‌ನ ಒಂದು ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪೊಲೀಸ್ ಬಂಧನದಲ್ಲಿದ್ದ ಹೈದರ್ ಅಲಿಗೆ ಜಾಮೀನು ಮಂಜೂರಾಗಿದ್ದರೂ, ತನಿಖೆ ಪೂರ್ಣಗೊಳ್ಳುವವರೆಗೆ ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಪ್ರಯಾಣ ನಿರ್ಬಂಧ ವಿಧಿಸಿದ್ದಾರೆ. ಹೈದರ್ ಅಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಪರ ಎರಡು ಏಕದಿನ ಮತ್ತು 35 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಇಂಗ್ಲೆಂಡ್ 'ಎ' ತಂಡದ ವಿರುದ್ಧ ಎರಡು ಮೂರು ದಿನಗಳ ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳನ್ನೊಳಗೊಂಡ ಸರಣಿಯಲ್ಲಿ ಆಡಲು ಸೌದ್ ಶಕೀಲ್ ನೇತೃತ್ವದ ಪಾಕಿಸ್ತಾನ ಶಾಹೀನ್ಸ್ ತಂಡ ಕಳೆದ ತಿಂಗಳು ಇಂಗ್ಲೆಂಡಿಗೆ ಆಗಮಿಸಿತ್ತು. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 55 ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ 71 ರನ್ ಗಳಿಸಿ ಹೈದರ್ ಅಲಿ ಮಿಂಚಿದ್ದರು. ಕಳೆದ ನಾಲ್ಕು ವರ್ಷಗಳಿಂದ ಪಾಕ್ ತಂಡದಲ್ಲಿ ಸ್ಥಾನ ಪಡೆಯದ ಹೈದರ್ ಕಳೆದ ಒಂದು ವರ್ಷದಿಂದ ಟಿ20 ತಂಡದಲ್ಲೂ ಆಡಿರಲಿಲ್ಲ. ಎರಡು ವರ್ಷಗಳ ಹಿಂದೆ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕೊನೆಯ ಬಾರಿಗೆ ಹೈದರ್ ಅಲಿ ಪಾಕಿಸ್ತಾನ ತಂಡದಲ್ಲಿ ಕಾಣಿಸಿಕೊಂಡಿದ್ದರು.
ಪಾಕಿಸ್ತಾನಿ ಮೂಲದ ಇಂಗ್ಲೆಂಡ್ ನಿವಾಸಿ ಯುವತಿಯ ಮೇಲೆ ಹೈದರ್ ಅಲಿ ಬಲಾತ್ಕಾರವೆಸಗಿದ್ದಾರೆ ಎಂದು ವರದಿಯಾಗಿದೆ. ಹೈದರ್ ಅಲಿಯನ್ನು ಕಳೆದ ಆಗಸ್ಟ್ 03ರಂದು ಮ್ಯಾಂಚೆಸ್ಟರ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇದಾದ ಬಳಿಕ ಹೈದರ್ ಅಲಿಯ ಪಾಸ್‌ಪೋರ್ಟ್ ಅನ್ನು ಮ್ಯಾಂಚೆಸ್ಟರ್ ಪೊಲೀಸರು ಸೀಝ್ ಮಾಡಿದ್ದು, ಬೇಲ್ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.
"ನಾವು ಈ ಘಟನೆಯ ಕುರಿತಂತೆ ತನಿಖೆಗೆ ಪೂರ್ಣ ಸಹಕಾರವನ್ನು ನೀಡುತ್ತೇವೆ. ಈ ತನಿಖೆ ಪೂರ್ಣಗೊಳ್ಳುವವರೆಗೂ ನಾವು ಹೈದರ್ ಅಲಿಯನ್ನು ಸಸ್ಪೆಂಡ್ ಮಾಡಿದ್ದೇವೆ. ನಾವು ಕೂಡಾ ಯುಕೆಯಲ್ಲಿ ನಮ್ಮದೇ ಆದ ತನಿಖೆ ನಡೆಸಲಿದ್ದೇವೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ವಕ್ತಾರರೊಬ್ಬರು ತಿಳಿಸಿದ್ದಾರೆ.
ಸೌದ್ ಶಕೀಲ್ ನೇತೃತ್ವದ ಪಾಕಿಸ್ತಾನ ಶಾಹೀನ್ಸ್ ತಂಡದ ಬಹುತೇಕ ಸದಸ್ಯರು ಬುಧವಾರ ತವರಿಗೆ ವಾಪಾಸ್ಸಾಗಿದ್ದಾರೆ. ಆದರೆ ನಾಯಕ ಸೌದ್ ಶಕೀಲ್ ಹಾಗೂ ಹೈದರ್ ಅಲಿ ಇಂಗ್ಲೆಂಡ್‌ನಲ್ಲಿಯೇ ಉಳಿದುಕೊಂಡಿದ್ದಾರೆ. ಹೈದರ್ ಅಲಿ ಪಾಸ್‌ಪೋರ್ಟ್ ವಶಕ್ಕೆ ಪಡೆದುಕೊಂಡಿರುವುದರಿಂದ ಅಲ್ಲೇ ಉಳಿದುಕೊಂಡಿದ್ದಾರೆ. ಇನ್ನು ನಾಯಕ ಸೌದ್ ಶಕೀಲ್ ವೈಯುಕ್ತಿಕ ಕಾರಣದಿಂದ ಲಂಡನ್‌ನಲ್ಲಿ ಉಳಿದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಅನುಚಿತ ವರ್ತನೆ ತೋರುವ ವಿಚಾರದಲ್ಲಿ ಪಾಕಿಸ್ತಾನ ಆಟಗಾರರದ್ದು ಇದೇ ಮೊದಲ ಸಲವೇನಲ್ಲ. ಈ ಹಿಂದೆ 2010ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಇಂಗ್ಲೆಂಡ್ ಪ್ರವಾಸ ಮಾಡಿದ್ದಾಗ, ಪಾಕ್‌ನ ಸ್ಟಾರ್ ಆಟಗಾರರಾಗಿದ್ದ ಸಲ್ಮಾನ್ ಭಟ್, ಮೊಹಮ್ಮದ್ ಆಮಿರ್ ಹಾಗೂ ಮೊಹಮ್ಮದ್ ಅಸಿಫ್ ಸ್ಪಾಟ್ ಫಿಕ್ಸಿಂಗ್ ಮಾಡಿ ಸಿಕ್ಕಿಬಿದ್ದಿದ್ದರು. ಇದಾದ ಬಳಿಕ ಈ ಮೂವರನ್ನು ಪೊಲೀಸರು ಬಂಧಿಸಿದ್ದರು. ಇದರ ಜತೆಗೆ ಐದು ವರ್ಷಗಳ ಕಾಲ ಕ್ರಿಕೆಟ್‌ನಿಂದ ಬ್ಯಾನ್ ಆಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.