ನಾನು Threads Chat ಗೆ ಬಂದೆ ಎಂದ ವಾರ್ನರ್‌..! ಇಲ್ಲಿ ಡ್ಯಾನ್ಸ್ ವಿಡಿಯೋ ಬೇಡ ಗುರು ಎಂದ ಕ್ಯಾಪ್ಟನ್

By Naveen KodaseFirst Published Jul 9, 2023, 1:28 PM IST
Highlights

* ಥ್ರೆಡ್ಸ್‌ ಆ್ಯಪ್ಸ್‌ಗೆ ಎಂಟ್ರಿ ಕೊಟ್ಟ ಡೇವಿಡ್‌ ವಾರ್ನರ್‌
* ಇಲ್ಲಿ ಡ್ಯಾನ್ಸ್‌ ವಿಡಿಯೋ ಬೇಡ ಎಂದು ಸಲಹೆ ಕೊಟ್ಟ ಆಸೀಸ್ ನಾಯಕ
* ಆಸೀಸ್‌ ನಾಯಕನ ಮಾತನ್ನು ಸಮರ್ಥಿಸಿದ ರಿಷಭ್ ಪಂತ್

ಲಂಡನ್(ಜು.09): ಕ್ರಿಕೆಟ್‌ ಜಗತ್ತಿನ ಬದ್ದ ಎದುರಾಳಿಗಳೆಂದು ಗುರುತಿಸಿಕೊಂಡಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಆ್ಯಷಸ್‌ ಸರಣಿಯಲ್ಲಿ ಮುಖಾಮುಖಿಯಾಗಿವೆ. ಸದ್ಯ ಲೀಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯವು ಇದೀಗ ರೋಚಕ ಘಟ್ಟ ತಲುಪಿದ್ದು, ಕೊನೆಯ ದಿನದಾಟದ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್‌ ಹಾಗೂ ಡೇವಿಡ್ ವಾರ್ನರ್ ಹೊಸದಾಗಿ ಥ್ರೆಡ್ಸ್‌  ಆ್ಯಪ್ಸ್‌ಗೆ ಎಂಟ್ರಿಕೊಟ್ಟಿದ್ದಾರೆ. ಟ್ವಿಟರ್‌ಗೆ ಪ್ರತಿಸ್ಪರ್ಧಿಯಾಗಿ ಥ್ರೆಡ್ಸ್‌  ಆ್ಯಪ್ ಹೆಚ್ಚು ಜನಪ್ರಿಯವಾಗುತ್ತಿದೆ. 

ಇನ್ನು ಥ್ರೆಡ್ಸ್‌ ಆ್ಯಪ್ಸ್‌ಗೆ ಎಂಟ್ರಿಕೊಟ್ಟ ಬಳಿಕ ಡೇವಿಡ್ ವಾರ್ನರ್, ತಾವು ಥ್ರೆಡ್‌ ಆ್ಯಪ್ಸ್‌ಗೆ ಬಂದಿದ್ದೇನೆ ಎಂದು ಆಸ್ಟ್ರೇಲಿಯ ನಾಯಕ ಪ್ಯಾಟ್ ಕಮಿನ್ಸ್ ಅವನ್ನು ಟ್ಯಾಗ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಡೇವಿಡ್‌ ವಾರ್ನರ್‌ಗೆ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್‌ ಸ್ಪೆಷಲ್ ರಿಕ್ವೆಸ್ಟ್‌ ಮಾಡಿಕೊಂಡಿದ್ದಾರೆ. "ದಯವಿಟ್ಟು ಇಲ್ಲಿ ಡ್ಯಾನ್ಸ್ ವಿಡಿಯೋಗಳನ್ನು ಹಾಕಬೇಡಿ" ಎಂದು ಡೇವಿಡ್‌ ವಾರ್ನರ್ ಬಳಿ ಪ್ಯಾಟ್ ಕಮಿನ್ಸ್‌ ಮನವಿ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್‌ ಪಂತ್, ಇದು ಅತ್ಯುತ್ತಮವಾದ ಸಲಹೆಯಾಗಿದೆ ಬ್ರದರ್ ಎಂದು ಕಾಮೆಂಟ್ ಮಾಡುವ ಮೂಲಕ ಈ ಚಾಟ್‌ಗೆ ಮತ್ತಷ್ಟು ಮೈಲೇಜ್‌ ಸಿಗುವಂತೆ ಮಾಡಿದ್ದಾರೆ.

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್‌ ವಾರ್ನರ್‌, ಸಮಯ ಸಿಕ್ಕಾಗಲೆಲ್ಲಾ ತಮ್ಮ ಮಕ್ಕಳ ಜತೆ ಡ್ಯಾನ್ಸ್‌ ಮಾಡುವ ವಿಡಿಯೋಗಳನ್ನು ಇನ್‌ಸ್ಟಾಗ್ರಾಂಗಳಲ್ಲಿ ಹಂಚಿಕೊಳ್ಳುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ವಾರ್ನರ್ ಅವರು ಹಂಚಿಕೊಳ್ಳುವ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.

ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಟ್ವಿಟರ್‌ನಲ್ಲಿ ಒಂದಲ್ಲ ಒಂದು ನಿರ್ಬಂಧ ವಿಧಿಸಲಾಗುತ್ತಿದೆ. ಮೊದಲಿಗೆ ವೆರಿಫೈಡ್‌ ಅಕೌಂಟ್ ಹೊಂದಲು ಎಲಾನ್ ಮಸ್ಕ್, ನಿಗದಿತ ಶುಲ್ಕ ವಿಧಿಸಿದ್ದರು.  ಇದೀಗ ಟ್ವೀಟ್ ವೀಕ್ಷಣೆಗೂ ಮಿತಿ ಹೇರಲಾಗಿದೆ. ಇಷ್ಟೇ ಅಲ್ಲ ಟ್ವೀಟ್ ವೀಕ್ಷಣೆಗೆ ಲಾಗಿನ್ ಕಡ್ಡಾಯ ಮಾಡಲಾಗಿದೆ. ಟ್ವೀಟ್ ಮಿತಿ ನಿಯಮ ಭಾರಿ ಟೀಕೆಗೆ ಕಾರಣವಾಗಿದೆ. ಆಕ್ರೋಶದ ಬೆನ್ನಲ್ಲೇ ಮಿತಿ ಏರಿಕೆ ಮಾಡಿದರೂ ಬಳಕೆದಾರರ ಕೋಪ ತಣ್ಣಗಾಗಿಲ್ಲ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಂ ನೂತನ ಆ್ಯಪ್ ಬಿಡುಗಡೆ ಮಾಡಿದೆ ಟ್ವಿಟರ್‌ಗೆ ಪ್ರತಿಸ್ಪರ್ಧಿಯಾಗಿ ಇನ್‌ಸ್ಟಾಗ್ರಾಂ ಥ್ರೆಡ್ಸ್ ಆ್ಯಪ್ ಬಿಡುಗಡೆ ಮಾಡಿದ್ದು, ಕಳೆದ ಜುಲೈ 6 ರಿಂದ ನೂತನ ಆ್ಯಪ್ ಬಳೆಕೆಗೆ ಲಭ್ಯವಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನ ಟಾಪ್ 10 ಸೆಕ್ಸಿ ಕ್ರಿಕೆಟಿಗರಿವರು..!

ಇನ್‌ಸ್ಟಾಗ್ರಾಂ ಥ್ರೆಡ್ಸ್ ಆ್ಯಪ್, ಟ್ವಿಟರ್ ರೀತಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿದ್ದು, ಸಂದೇಶ, ವಿಡಿಯೋ, ಇಮೇಜ್ ಸೇರಿದಂತೆ ಹಲವು ಬಳಕೆಗಾರರ ಆಸಕ್ತಿಯ ವಿಷಯಗಳ ಪೋಸ್ಟ್, ಪ್ರಮೋಟ್, ನೆಟ್‌ವರ್ಕ್ ವಿಸ್ತರಣೆ ಸೇರಿದಂತೆ ಹಲವು ಸೇವೆ ನೀಡುತ್ತಿದೆ. ಟ್ವಿಟರ್‌ಗಿಂತಲೂ ಹೆಚ್ಚು ಥ್ರೆಡ್‌ ಆ್ಯಪ್ ಅಡ್ವಾನ್ಸ್ ಆಗಿದೆ. ಇಷ್ಟೇ ಅಲ್ಲ ಇಲ್ಲಿ ಥ್ರೆಡ್ಸ್ ವೀಕ್ಷಣೆಗೆ ಯಾವುದೇ ಮಿತಿಗಳು ಸಹ ಇಲ್ಲ.

ಇನ್ನು ಲೀಡ್ಸ್‌ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಬಗ್ಗೆ ಮಾತನಾಡುವುದಾದರೇ, ಆಸ್ಟ್ರೇಲಿಯಾ ತಂಡವು ಎರಡನೇ ಇನಿಂಗ್ಸ್‌ನಲ್ಲಿ 224 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಆತಿಥೇಯ ಇಂಗ್ಲೆಂಡ್‌ಗೆ 250 ರನ್ ಗುರಿ ಸಿಕ್ಕಿದೆ. 

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ತಂಡವು 4ನೇ ದಿನದಾಟದಂತ್ಯದ ವೇಳೆಗೆ ವಿಕೆಟ್‌ ನಷ್ಟವಿಲ್ಲದೇ 27 ರನ್‌ ಗಳಿಸಿದೆ. ಮೂರನೇ ಟೆಸ್ಟ್ ಗೆಲ್ಲಬೇಕಿದ್ದರೇ, ಆತಿಥೇಯ ಇಂಗ್ಲೆಂಡ್ ತಂಡವು ಕೊನೆಯ ದಿನ ಇನ್ನೂ 224 ರನ್ ಬಾರಿಸಬೇಕಿದೆ. ಇನ್ನು ಆ್ಯಷಸ್‌ ಟೆಸ್ಟ್‌ ಸರಣಿ ಕೈವಶ ಮಾಡಿಕೊಳ್ಳಬೇಕಿದ್ದರೇ, ಆಸ್ಟ್ರೇಲಿಯಾ ತಂಡವು ಕೊನೆಯ ದಿನ ಇಂಗ್ಲೆಂಡ್‌ನ 10 ವಿಕೆಟ್ ಕಬಳಿಸಬೇಕಿದೆ. 5 ಪಂದ್ಯಗಳ  ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಸದ್ಯ ಆಸ್ಟ್ರೇಲಿಯಾ ತಂಡವು 2-0 ಮುನ್ನಡೆಯಲ್ಲಿದೆ. 

click me!